ಇಂತವರು ನಿಮ್ಮ ಮನೆ ಬಾಗಿಲಿಗೂ ಬರಬಹುದು…ಎಚ್ಚರ – ಸೊರಕೆ: ಗುಜಿರಿ ಹೆಕ್ಕುವ ನೆಪದಲ್ಲಿ ಪಂಪು ಕದ್ದೊಯ್ದ ಅಪರಿಚಿತರು..!

0

ಪುತ್ತೂರು: ಗುಜಿರಿ ಹೆಕ್ಕುವ ನೆಪದಲ್ಲಿ ಬಂದ ಅಪರಿಚಿತರು ಮನೆ ಬಳಿಯಿದ್ದ ಪಂಪು ಹಾಗೂ ಇತರ ಕೆಲವು ವಸ್ತುಗಳನ್ನು ಮನೆಯವರ ಗಮನಕ್ಕೆ ಬಾರದ ರೀತಿಯಲ್ಲಿ ಕದ್ದೊಯ್ದ ಘಟನೆ ಜೂ.10ರಂದು ಸರ್ವೆ ಗ್ರಾಮದ ಸೊರಕೆಯಲ್ಲಿ ನಡೆದಿದೆ.

ಸೊರಕೆ ನಿವಾಸಿ ಅಬ್ಬಾಸ್ ಅವರ ಮನೆಗೆ ಆಪೆ ರಿಕ್ಷಾವೊಂದರಲ್ಲಿ ಮೂವರು ಬಂದಿದ್ದು ಮನೆಯಲ್ಲಿ ಗುಜಿರಿ ಸಾಮಾನುಗಳು ಇದೆಯಾ ಎಂದು ಕೇಳಿದ್ದಾರೆ. ಆಗ ನಮ್ಮ ಮನೆಯಲ್ಲಿ ಗುಜಿರಿ ಸಾಮಾನುಗಳು ಇಲ್ಲ ಎಂದು ಮನೆಯವರು ಹೇಳಿದ್ದಾರೆ. ಬಂದ ಮೂವರ ಪೈಕಿ ಇಬ್ಬರು ಗುಜಿರಿ ಇದೆಯಾ ಎಂದು ಅಲ್ಪ ದೂರಕ್ಕೆ ಹೋಗಿದ್ದು ಓರ್ವ ಮನೆಯ ಬಳಿಯೇ ನಿಂತುಕೊಂಡಿದ್ದ. ಕೆಲ ಹೊತ್ತಿನ ಬಳಿಕ ಅವರೆಲ್ಲರೂ ಅಲ್ಲಿಂದ ತೆರಳಿದ್ದು ಮನೆಮಂದಿ ಹೊರಗೆ ಬಂದು ನೀಡಿದಾಗ ಮನೆಯ ಎದುರುಗಡೆ ಇದ್ದ ಪಂಪು ಕಣ್ಮರೆಯಾಗಿತ್ತು. ಮನೆಯ ಅನತಿ ದೂರದಲ್ಲಿರುವ ಹಳೆಯ ಮನೆಗೆ ಹೋಗಿ ನೋಡಿದಾಗ ಅಲ್ಲಿಂದ ಬಕೆಟ್, ಹಾರೆ, ಪಿಕ್ಕಾಸು ಮೊದಲಾವುಗಳು ಕಾಣೆಯಾಗಿತ್ತು. ವಿಚಾರವನ್ನು ಮನೆಯವರು ಇತರರಿಗೆ ತಿಳಿಸುತ್ತಿದ್ದಂತೆ ಸೊರಕೆಯ ಉಮ್ಮರ್ ಎಂಬವರ ಮನೆ ಬಳಿಯಿದ್ದ ಹಳೆಯ ಫ್ರಿಡ್ಜ್‌ನ ಒಳಭಾಗದ ಸಾಮಾನುಗಳನ್ನು ವಿಂಗಡಿಸಿ ಅದನ್ನೂ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಗುಜಿರಿ ಮತ್ತಿತರ ವ್ಯಾಪಾರ ಮಾಡಿಕೊಂಡು ಬರುವ ಅಪರಿಚಿತರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.

LEAVE A REPLY

Please enter your comment!
Please enter your name here