ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ವಿಚಾರ ಸಂಕಿರಣ’

0

ಸಂತ್ರಸ್ತರ ಹಕ್ಕುಗಳು ಹಾಗೂ ಸಾಕ್ಷಿಗಳ ಸಂರಕ್ಷಣೆಗಾಗಿ ಕಠಿಣ ಕಾನೂನಿನ ಅಗತ್ಯವಿದೆ: ಪುಷ್ಪರಾಜ್ ಅಡ್ಯಾಂತಾಯ

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವು ನಡೆಯಿತು. ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರಾಗಿರುವ ಕೆ. ದ್ವಾರಕನಾಥ್ ಬಾಬು ರವರು ದೀಪ ಬೆಳಗುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿದ ಅವರು, ಅಪರಾಧಿಕ ನ್ಯಾಯ ವ್ಯವಸ್ಥೆಯ ಅಪರಾಧಿಕ ವಿಚಾರಣೆಯಲ್ಲಿ ಸಂತ್ರಸ್ತರು ಅಥವಾ ನೊಂದವರು ಪ್ರಧಾನ ಸಾಕ್ಷಿಗಳಾಗಿರುತ್ತಾರೆ. ಯಾವುದೇ ರೀತಿಯ ಪಕ್ಷಪಾತವಿಲ್ಲದೇ ನ್ಯಾಯ ಪ್ರಕ್ರಿಯೆ ನಡೆಸುವಲ್ಲಿ ಈ ಸಾಕ್ಷಿದಾರರ ಸುರಕ್ಷತೆ ಹಾಗೂ ಭದ್ರತೆ ಪ್ರಮುಖವಾಗಿರುತ್ತದೆ. ಆದರೆ ಜಾಗತಿಕವಾಗಿ ಈ ವಿದ್ಯಾಮಾನವನ್ನು ಗಮನಿಸಿದಾಗ ಪ್ರಪಂಚದ ಹಲವಾರು ದೇಶಗಳ ಅಪರಾಧಿಕ ಇತಿಹಾಸದಲ್ಲಿ ಹಲವಾರು ಮಹತ್ವದ ಪ್ರಕರಣಗಳಲ್ಲಿ ಸಾಕ್ಷಿಗಳ ಸಂತ್ರಸ್ಥೆ ಮತ್ತು ಸಾಕ್ಷಿಗಳ ಮೇಲೆ ಹಲ್ಲೆ, ಬೆದರಿಕೆ ಮತ್ತು ಅವರನ್ನು ಕೊಲೆ ಮಾಡಿದ ಹಲವಾರು ನಿದರ್ಶನಗಳನ್ನು ನಾವು ಕಾಣಬಹುದಾಗಿದೆ ಎಂದ ಅವರು, ಈ ನಿಟ್ಟಿನಲ್ಲಿ ನಮ್ಮ ಕಿಲ್ಪರ್ ಸಂಸ್ಥೆಯು ಸಂತ್ರಸ್ತ ಮತ್ತು ಸಾಕ್ಷಿಗಳ ಕುರಿತಾಗಿ ಜಾಗೃತಿ ಅಭಿಯಾನವನ್ನು ರಾಜ್ಯದಾದ್ಯಂತ ವಿವಿಧ ವಿಚಾರಗೋಷ್ಠಿಗಳನ್ನು ನಡೆಸುವ ಮೂಲಕ ನಡೆಸುತ್ತಿದೆ ಎಂದರು.

ಮಂಗಳೂರಿನ ಹಿರಿಯ ನ್ಯಾಯಾವಾದಿ ಹಾಗೂ ಪುತ್ತೂರಿನ ಪೋಕ್ಸ್ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕರಾಗಿರುವ ಪುಷ್ಪರಾಜ್ ಅಡ್ಯಾಂತಾಯ ರವರು ಈ ವಿಚಾರ ಸಂಕಿರಣದಲ್ಲಿ ದಿಕ್ಸುಚಿ ಭಾಷಣ ಮಾಡಿ, ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಪರಾಧ ಸಂತ್ರಸ್ತರ ಹಕ್ಕುಗಳು ಹಾಗೂ ಸಾಕ್ಷಿಗಳ ಸಂರಕ್ಷಣೆಯ ಕುರಿತಾದ ಅರಿವು, ಅದಕ್ಕೆ ಪೂರಕವಾದ ಕಾನೂನಿನ ಇತಿಹಾಸ, ಮಹತ್ವದ ತೀರ್ಪುಗಳು ಹಾಗೂ ಇತ್ತೀಚಿನ ಬೆಳವಣಿಗೆಗಳನ್ನು ವಿವರಿಸಿದರು. ಆಧುನಿಕ ಕಾಲಘಟ್ಟದಲ್ಲಿ ಭಾರತೀಯ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಅಪರಾಧ ಸಂತ್ರಸ್ತರ ಹಕ್ಕುಗಳು ಹಾಗೂ ಸಾಕ್ಷಿಗಳ ಸಂರಕ್ಷಣೆಯ ಪರವಾಗಿ ಕಠಿಣ ಕಾನೂನಿನ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂದಿದ್ದ ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಿಣಿ ಮಾತನಾಡಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಪ್ರತಿವರ್ಷ ಪಠ್ಯದ ಜೊತೆಗೆ ಹಲವಾರು ವಿದ್ಯಾರ್ಥಿಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇಂತಹ ವಿಚಾರ ಸಂಕಿರಣವು ವಿದ್ಯಾರ್ಥಿಗಳಿಗೆ ಬಹಳಷ್ಟು ವಿಚಾರಗಳನ್ನು ಅರ್ಥಪೂರ್ಣವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದರು.

ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಸದೀಯ ಸಂಶೋಧನಾ ಮುಖ್ಯಸ್ಥರಾಗಿರುವ ಡಾ. ರೇವಯ್ಯ ಒಡೆಯರ್ ರವರು ಪ್ರಾಸ್ತವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅದ್ಯಯನ ವಿಭಾಗದ ನಿರ್ದೇಶಕರಾಗಿರುವ ಡಾ. ಬಿ. ಕೆ. ರವೀಂದ್ರ ಉಪಸ್ಥಿತರಿದ್ದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ಅಕ್ಷತಾ ಎ. ಪಿ. ಸ್ವಾಗತಿಸಿ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ವಿಚಾರ ಸಂಕಿರಣದ ಸಂಯೋಜಕ ಲಕ್ಷ್ಮೀಕಾಂತ ರೈ ಅನಿಕೂಟೇಲ್ ವಂದಿಸಿದರು. ಕಾರ್ಯಕ್ರಮವನ್ನು ದ್ವಿತೀಯ ಬಿಎ.ಎಲ್.ಎಲ್.ಬಿ. ವಿದ್ಯಾರ್ಥಿನಿ ವರ್ಷಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಉಪನ್ಯಾಸಕರು, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು, ಮಹಾವಿದ್ಯಾಲಯದ ಶಿಕ್ಷಕ- ರಕ್ಷಕ ಸಂಘದ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಲೀಗಮ್ ಸ್ಪೆಕ್ಟ್ರಂ- 5 ಪುಸ್ತಕ ಬಿಡುಗಡೆ

ರಾಜ್ಯಮಟ್ಟದ ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಪ್ರಕಟಿಸುವ ‘ಲೀಗಮ್ ಸ್ಪೆಕ್ಟ್ರಂ’ ಎಂಬ ಪುಸ್ತಕದ ಐದನೇ ಅವೃತಿಯನ್ನು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕರಾಗಿರುವ ಡಾ. ಸಿ. ಎಸ್. ಪಾಟೀಲ್ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಅವರು, ಶಿಕ್ಷಕ ಪ್ರತಿ ಹಂತದಲ್ಲಿ ಅಧ್ಯಯನಶೀಲರಾಗಿದ್ದಾಗ ಮಾತ್ರ ‘ಲೀಗಮ್ ಸ್ಪೆಕ್ಟ್ರಂ’ ನಂತಹ ವಿದ್ವತ್ಪೂರ್ಣ ಪುಸ್ತಕ ಹೊರ ತರಲು ಸಾಧ್ಯವಾಗುತ್ತಿದೆ. ಕಾನೂನು ಉಪನ್ಯಾಸಕ ಪ್ರತಿದಿನ ಹೊಸ ವಿಚಾರವನ್ನು ತಿಳಿದುಕೊಂಡು, ಅದನ್ನು ಬರವಣಿಗೆಯ ರೂಪದಲ್ಲಿ ಪ್ರಕಟಿಸಿದಾಗ ಭವಿಷ್ಯದಲ್ಲಿ ಬಹಳಷ್ಟು ಕಾನೂನು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here