ಚತುಷ್ಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿ-ಕುಟುಂಬದ ಬದುಕೇ ನರಕ ಸದೃಶ್ಯ-ಮಳೆಗಾಲದಲ್ಲಿ ನೀರಿನಿಂದಾವೃತವಾಗುವ ಮನೆ, ಬಾವಿ

0

ಉಪ್ಪಿನಂಗಡಿ: ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ರಾಷ್ಟೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು, ಉಪ್ಪಿನಂಗಡಿಯ ಮಠ ಎಂಬಲ್ಲಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರು ನಡೆಸಿದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕುಟುಂಬವೊಂದರ ಬದುಕೇ ನರಕ ಸದೃಶ್ಯವಾಗಿದೆ. ಮಳೆಗಾಲದಲ್ಲಿ ಮನೆ ಸುತ್ತ ಚರಂಡಿಯಲ್ಲಿ ಮಳೆ ಹಾಗೂ ಕೊಳಚೆ ನೀರು ಹರಿದು ಬರುತ್ತಿದ್ದು, ಒಂದು ಕಡೆ ಬಾವಿ ಕುಸಿಯುತ್ತಿದ್ದರೆ, ಮನೆಯೂ ಬೀಳುವ ಅಪಾಯದಲ್ಲಿದೆ.


ಉಪ್ಪಿನಂಗಡಿಯ ಮಠ ನಿವಾಸಿ ಕಮಲಾ ಯಾನೆ ಗಿರಿಜಾ ಎಂಬವರ ಮನೆ ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿದ್ದು, ಇವರ ಜಾಗದ ಬದಿಯಿಂದ ಚತುಷ್ಪಥ ಕಾಮಗಾರಿ ಸಂದರ್ಭ ನಿರ್ಮಿಸಿದ ಚರಂಡಿ ಹಾದು ಹೋಗಿದೆ. ಈ ಚರಂಡಿಯು ಹಿರ್ತಡ್ಕದ ಸಫಾ ನಗರದಿಂದ ಆರಂಭವಾಗಿ ಅಲ್ಲಿಂದ ಸುಮಾರು 500 ಮೀಟರ್‌ನಷ್ಟು ದೂರವಿರುವ ಕಮಲಾ ಅವರ ಮನೆಯ ಮುಂದಿನಿಂದ ಹಾದು ಹೋಗಿ ಅಲ್ಲಿಂದ ಮೋರಿಯ ಮೂಲಕ ಮತ್ತೊಂದು ಬದಿಗೆ ಈ ಚರಂಡಿಯ ನೀರು ಹಾದು ಹೋಗುವಂತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಇಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆದಿದ್ದು, ಚರಂಡಿಗಿಂತ ಮೇಲ್ಮಟ್ಟದಲ್ಲಿ ರಸ್ತೆಯ ಮತ್ತೊಂದು ಬದಿಯ ಸಂಪರ್ಕ ಕಲ್ಪಿಸುವ ಮೋರಿಯನ್ನು ಅಳವಡಿಸಲಾಗಿದೆ. ಇದರಿಂದಾಗಿ ಮಳೆಯ ಸಂದರ್ಭ ಆ ಮೋರಿಯಲ್ಲಿ ನೀರು ಹಾದು ಹೋಗಲು ಸಾಧ್ಯವಾಗದೇ ಚರಂಡಿ ಉಕ್ಕಿ ಅಲ್ಲಿಯೇ ತಗ್ಗು ಪ್ರದೇಶದಲ್ಲಿರುವ ಕಮಲಾ ಅವರ ಮನೆಯ ಅಂಗಳಕ್ಕೆ ಹರಿದು ಬರುತ್ತಿದೆ. ಜೋರು ಮಳೆಯ ಸಂದರ್ಭದಲ್ಲಿ ಇವರ ಮನೆಯ ಸುತ್ತಲೂ ಸಂಪೂರ್ಣ ಜಲಾವೃತಗೊಳ್ಳುತ್ತಿದ್ದು, ಇವರ ಬಾವಿಯ ನೀರು ಕೂಡಾ ಕೆಸರು ನೀರು, ತ್ಯಾಜ್ಯ ತುಂಬಿ ಕಲುಷಿತಗೊಂಡಿದೆ. ಅಲ್ಲದೇ, ತೇವಾಂಶದಿಂದಾಗಿ ಬಾವಿಯೂ ಕುಸಿದಿದೆ. ಇವರ ಮಣ್ಣಿನ ಗೋಡೆಯ ಮನೆಯಾಗಿದ್ದು, ಮನೆಯ ಸುತ್ತಲೂ ನೀರು ನಿಲ್ಲುತ್ತಿರುವುದರಿಂದ ಮನೆಯೂ ಬೀಳುವ ಅಪಾಯದಲ್ಲಿದೆ. ಸುಮಾರು ಅರ್ಧ ಕಿ.ಮೀ. ದೂರದಿಂದ ಈ ಚರಂಡಿಯಲ್ಲಿ ನೀರು ಹರಿದು ಬರುತ್ತಿದ್ದು, ಇದ್ದ ಕಸ-ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳೆಲ್ಲಾ ಈ ಚರಂಡಿಯ ಮೂಲಕ ಹರಿದು ಬರುತ್ತಿದ್ದು, ಇವೆಲ್ಲಾ ಇವರ ಮನೆಯ ಅಂಗಳ, ಪರಿಸರದಲ್ಲೆಲ್ಲಾ ರಾಶಿ ಬಿದ್ದಿದೆ. ಇಲ್ಲಿ ಸಣ್ಣ ಸಣ್ಣ ಮಕ್ಕಳಿದ್ದು, ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ.

ದೊರೆಯದ ಸ್ಪಂದನೆ
ಕಳೆದ ಮಳೆಗಾಲದಲ್ಲಿಯೇ ಇವರಿಗೆ ಈ ಸಮಸ್ಯೆಯಿದ್ದು, ಶಾಸಕರು, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರ, ಗ್ರಾ.ಪಂ. ಹೀಗೆ ಎಲ್ಲಾ ಕಡೆ ಕಳೆದ ಮಳೆಗಾಲದಲ್ಲಿಯೇ ಸಮಸ್ಯೆಯ ಬಗ್ಗೆ ಮನವಿ ನೀಡಿದರೂ ಯಾರದ್ದೂ ಸ್ಪಂದನೆ ಮಾತ್ರ ಇವರಿಗೆ ದೊರೆತ್ತಿಲ್ಲ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಮನೆಯ ಮಾಲಕಿ ಕಮಲಾ, ನಾವು ಬಡವರು. ಬೀಡಿಯ ಲೇಬಲ್ ಹಾಕಿ ಜೀವನ ನಿರ್ವಹಿಸುತ್ತಿದ್ದೇವೆ. ಕಳೆದ ಮಳೆಗಾಲದಿಂದ ನಮಗೆ ಈ ಸಮಸ್ಯೆಯಾಗುತ್ತಿದೆ. ನಾನು ಅನಕ್ಷರಸ್ಥೆಯಾದರೂ, ಶಾಸಕರು, ಜಿಲ್ಲಾಧಿಕಾರಿ ಹೀಗೆ ಎಲ್ಲಾ ಕಡೆ ಹೋಗಿ ಮನವಿ ಕೊಟ್ಟಿದ್ದೇನೆ. ಆದರೂ ಯಾರೂ ನನ್ನ ಸಮಸ್ಯೆಗೆ ಸ್ಪಂದನೆ ನೀಡಿಲ್ಲ. ಇದೀಗ ನಿಮ್ಮ ಬಳಿ ಬಂದಿದ್ದೇವೆ. ನ್ಯಾಯ ಸಿಗುವಂತೆ ಮಾಡಿ ಎಂದು ಕಮಲಾ ಮಾಧ್ಯಮದವರ ಮುಂದೆ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಹೆದ್ದಾರಿ ಅಧಿಕಾರಿಗೆ ತರಾಟೆ
ನೊಂದ ಮಹಿಳೆ ಮತ್ತು ಸ್ಥಳೀಯರು ಮಾಧ್ಯಮದವರ ಮುಂದೆ ತನ್ನ ಸಮಸ್ಯೆ ತಿಳಿಸುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಓರ್ವರು ಮಧ್ಯೆ ಪ್ರವೇಶ ಮಾಡಿ ದೂರು ಮತ್ತು ಸಮಸ್ಯೆಗಳನ್ನು ತಳ್ಳಿ ಹಾಕಿ, ನಿರಾಕರಿಸುವ ರೀತಿಯಲ್ಲಿ ಅಹಂನಿಂದ ಮಾತನಾಡಿದರು. ಇದಕ್ಕೆ ಆಕ್ಷೇಪಿಸಿದ ಸಾರ್ವಜನಿಕರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಇದರಿಂದ ಅಸಮಾಧಾನಗೊಂಡ ಅಧಿಕಾರಿ “ವಿವೇಕ” ಕಳೆದುಕೊಂಡ ರೀತಿಯಲ್ಲಿ ಕಿರುಚಾಡತೊಡಗಿದರು. ಬಳಿಕ ಇತರೇ ಹಿರಿಯ ಅಧಿಕಾರಿಗಳು ಅವರನ್ನು ಅಲ್ಲಿಂದ ಕರೆದೊಯ್ದು ಸಾರ್ವಜನಿಕರನ್ನು ಸಮಾಧಾನ ಪಡಿಸಿದ ಘಟನೆಯೂ ನಡೆಯಿತು.

ವಾರದೊಳಗೆ ಬಗೆಹರಿಸುವವೆವು: ಮಹೇಂದರ್ ಸಿಂಗ್
ಗುತ್ತಿಗೆದಾರ ಸಂಸ್ಥೆ ಕೆ.ಎನ್.ಆರ್. ಸಂಸ್ಥೆಯ ಹಿರಿಯ ಅಧಿಕಾರಿ ಮಹೇಂದ್ರ ಸಿಂಗ್ ಸಮಸ್ಯೆಗಳನ್ನು ಆಲಿಸಿ ಸ್ಥಳ ಪರಿಶೀಲನೆ ನಡೆಸಿದರು. ಸಮಸ್ಯೆಯ ಗಂಭೀರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ “ಒಂದು ವಾರದ ಒಳಗಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್, ಸ್ಥಳೀಯರಾದ ಇಸಾಕ್ ಮತ್ತಿತರರು ಸಮಸ್ಯೆಯ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

LEAVE A REPLY

Please enter your comment!
Please enter your name here