ಕಡಬ ಕೊಂಬಾರಿನಲ್ಲಿ ಮೀಸಲು ಅರಣ್ಯದಲ್ಲಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ

0

ಕಡಬ: ಕೊಂಬಾರಿನಲ್ಲಿ ಮೀಸಲು ಅರಣ್ಯದಲ್ಲಿ ರಾಜರೋಷವಾಗಿ ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮೌನ ವಹಿಸಿದ್ದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕಡಬ ತಾಲೂಕು ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಟ್ಟಡ್ಕ ಸಮೀಪ ಈ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ ನಡೆಯುತ್ತಿರುವುದಾಗಿದೆ. ಇತ್ತೀಚೆಗೆ ಬೊಟ್ಟಡ್ಕದಲ್ಲಿ ಟೆಂಟ್ ಹಾಕಿ ತಾತ್ಕಾಲಿಕವಾಗಿ ನಿರ್ಮಿಸಿದ ಮನೆಯನ್ನು ತೆರವುಗೊಳಿಸಿದ ಪ್ರಕರಣದ ಸಂದರ್ಭದಲ್ಲಿ ಈ ಗಣಿಗಾರಿಕೆ ಮಾಡಿರುವ ದೊಡ್ಡ ಹೊಂಡ ಪತ್ತೆಯಾಗಿದೆ, ಈ ಹೊಂಡ ಪ್ರಾಣಿಗಳಿಗೆ ಮತ್ತು ಮನುಷ್ಯರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂಬ ಆರೋಪ ವ್ಯಕ್ತವಾಗಿದೆ. ಟರ್ಪಾಲ್ ಹೊದಿಕೆಯ ಎರಡು ಮನೆಗಳನ್ನು ಅರಣ್ಯಾಧಿಕಾರಿಗಳು ತೆರವುಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಕಡಬ ಠಾಣಾ ಎಸ್.ಐ ಅಭಿನಂದನ್ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಈ ಅಕ್ರಮ ಚಟುವಟಿಕೆ ಎಸ್,ಐ, ಅವರ ಗಮನಕ್ಕೆ ಬಂದಿದ್ದು ಅವರು ಗಣಿ ಇಲಾಖೆಗೆ ಮಾಹಿತಿ ನೀಡುವ ಸಾದ್ಯತೆ ಇದೆ.

ಜವಾಬ್ದಾರಿಯಿಂದ ನುಣುಚಿಕೊಳ್ಳುವ ಯತ್ನದಲ್ಲಿ ಅರಣ್ಯ ಇಲಾಖೆ
ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಒಂದು ಬಾರಿ ಗಣಿಗಾರಿಕೆ ನಡೆದಿರುವ ಸ್ಥಳ ವ್ಯಕ್ತಿಯೋರ್ವರ ಪಟ್ಟಾ ಸ್ಥಳ, ಮೀಸಲು ಅರಣ್ಯ ಅಲ್ಲ ಎಂದು ಹೇಳಿದ್ದರು, ಆದರೆ ಕಡಬ ತಹಸೀಲ್ದಾರ್ ಅವರು ಪ್ರತಿಕ್ರಿಯೆ ನೀಡಿ ಗಣಿಗಾರಿಕೆ ನಡೆದಿರುವ ಸ್ಥಳ ಮೀಸಲು ಅರಣ್ಯ ಎಂದು ಹೇಳಿದ್ದಾರೆ. ಬಳಿಕ ಉಲ್ಟಾ ಹೊಡೆದಿರುವ ವಲಯ ಅರಣ್ಯಾಧಿಕಾರಿಗಳು ಗಣಿಗಾರಿಕೆ ನಡೆದಿರುವ ಸ್ಥಳ ಮೀಸಲು ಅರಣ್ಯಕ್ಕೆ ಸ್ವಲ್ಪ ಹೊಂದಿಕೊಂಡಿದೆ ಎಂದು ಹೇಳಿದ್ದಾರೆ.

ಗಣಿ ಇಲಾಖೆಗೆ ಮಾಹಿತಿ ನೀಡುವವರು ಯಾರು?
ಗಣಿಗಾರಿಕೆಗೆ ಇಲಾಖೆಯ ಪರವಾನಿಗೆ ಪಡೆಯದೆ ಅಕ್ರಮವಾಗಿ ಕೆಂಪು ಕಲ್ಲು ಗಣಿಗಾರಿಕೆ ನಡೆದಿದ್ದರೂ ಇದನ್ನು ಕೇಳುವವರಾರು ಎಂಬ ಪ್ರಶ್ನೆ ಉದ್ಭವಿಸಿದೆ ,ಅರಣ್ಯ ಇಲಾಖೆಯವರು ಗಣಿ ಇಲಾಖೆಗೆ ಮಾಹಿತಿ ನೀಡಬೇಕಿದ್ದು ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಅವರು ಮಾಹಿತಿ ನೀಡಲಿದ್ದಾರೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದೆ.

LEAVE A REPLY

Please enter your comment!
Please enter your name here