ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮಠ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ರಸ್ತೆ ಬದಿಯ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ಮತ್ತು ಕೊಳಚೆ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆ ಬದಿಯ ಮನೆ ಅಂಗಳಕ್ಕೆ ನುಗ್ಗಿ ಹರಿಯುತ್ತಿದ್ದು, ಸಂಕಷ್ಟ ಎದುರಿಸುತ್ತಿರುವ ಮಹಿಳೆಯ ಮನೆಗೆ ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚತುಷ್ಪಥ ಹೆದ್ದಾರಿ ಸಂದರ್ಭ ನಡೆಸಿದ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಮಠದಲ್ಲಿ ಚರಂಡಿಯ ನೀರು ಮನೆಯ ಬಳಿಗೆ ನುಗ್ಗಿ ಕುಟುಂಬವೊಂದು ಸಮಸ್ಯೆಯನ್ನೆದುರಿಸುವ ಬಗ್ಗೆ ಪತ್ರಿಕೆಯಲ್ಲಿ ಜೂ.12ರಂದು ವರದಿ ಪ್ರಕಟವಾಗಿತ್ತು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ಜೂ.13ರಂದು ಸಂತೃಸ್ಥೆ ಮಹಿಳೆ ಉಪ್ಪಿನಂಗಡಿ ಗ್ರಾಮದ ಮಠ ನಿವಾಸಿ ಕಮಲಾ ಯಾನೆ ಗಿರಿಜಾ ಎಂಬವರ ಮನೆಗೆ ಭೇಟಿ ನೀಡಿ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ, ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ಮನೆ ಅಂಗಳಕ್ಕೆ ನೀರು ಬಾರದಂತೆ ತಕ್ಷಣದಿಂದಲೇ ಕೆಲಸ ಆರಂಭಿಸುವಂತೆ ಸೂಚಿಸಿದರು. ಮನೆಯ ಬದಿಯಲ್ಲಿ ಪ್ರತ್ಯೇಕವಾಗಿ ಚರಂಡಿ ನಿರ್ಮಿಸಿ ನೀರು ಹರಿದು ಹೋಗುವಂತೆ ತುರ್ತು ಪರಿಹಾರೋಪಾಯವನ್ನು ಕಲ್ಪಿಸಿದರು.
10 ಸಾವಿರ ರೂಪಾಯಿ ಪರಿಹಾರಕ್ಕೆ ಶಿಫಾರಸ್ಸು: ಚಂದ್ರ ನಾಯ್ಕ್
ಪುತ್ತೂರು ಉಪವಿಭಾಗಾಧಿಕಾರಿಯವರ ನಿರ್ದೇಶನ ಮತ್ತು ತಹಸೀಲ್ದಾರ್ ಮಾರ್ಗದರ್ಶನದಂತೆ ಕಮಲಾ ಅವರ ಮನೆಗೆ ಭೇಟಿ ನೀಡಿದ್ದು, ಮನೆಯ ಹಿಂಭಾಗದಲ್ಲಿಯೂ ನೀರು ನಿಂತು ಸಮಸ್ಯೆ ಇದೆ. ಅಲ್ಲಿನ ತುರ್ತು ಕೆಲಸಕ್ಕಾಗಿ ಕಂದಾಯ ಇಲಾಖೆಯಿಂದ ಪ್ರಾಕೃತಿಕ ವಿಕೋಪ ಅಡಿಯಲ್ಲಿ 10 ಸಾವಿರ ರೂ. ಪರಿಹಾರ ಧನ ಒದಗಿಸುವ ಬಗ್ಗೆಯೂ ಸರಕಾರಕ್ಕೆ ವರದಿ ಸಲ್ಲಿಸಿ ಶಿಫಾರಸ್ಸು ಮಾಡಲಾಗಿದೆ. ಅಲ್ಲದೇ, ವಿಧವೆ ಮಹಿಳೆ ಕಮಲಾ ಅವರಿಂದ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸ್ವೀಕರಿಸಿ ಅವರಿಗೆ ಮಾಸಿಕ ವೇತನ ಬರುವಂತೆ ಕ್ರಮಕೈಗೊಳ್ಳಲಾಗುವುದು ಎಂದು ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್ ತಿಳಿಸಿದ್ದಾರೆ.