ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಪದ ಪ್ರದಾನ

0

ಲಯನ್ಸ್ ಸದಸ್ಯರು ಹಣಕಾಸಿನಲ್ಲಲ್ಲ, ಹೃದಯದಲ್ಲಿ ಶ್ರೀಮಂತರು-ಮೆಲ್ವಿನ್ ಡಿ’ಸೋಜ

ಪುತ್ತೂರು: ಸಂಘದಿಂದ ನಮಗೇನು ಲಾಭ ಅನ್ನುವುದು ಮುಖ್ಯವಲ್ಲ, ಬದಲಾಗಿ ಸಮಾಜಕ್ಕೆ ನಾವು ಏನು ಕೊಡುತ್ತೇವೆ ಎಂಬುದು ಬಹಳ ಮುಖ್ಯ. ಕ್ಲಬ್‌ನಲ್ಲಿನ ಸದಸ್ಯರು ಮನುಷ್ಯತ್ವ ಹಾಗೂ ಮಾನವೀಯತೆಗೆ ಬೆಲೆ ಕೊಡುವವರು. ಕ್ಲಬ್ ಸದಸ್ಯರು ಹಣಕಾಸಿನ ವಿಚಾರದಲ್ಲಿ ಶ್ರೀಮಂತರಲ್ಲ ಬದಲಾಗಿ ಹೃದಯದಲ್ಲಿ ಶ್ರೀಮಂತರು ಎಂದು 2023-೨24ರ ಲಯನ್ಸ್ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜರವರು ಹೇಳಿದರು


ಜೂ.14 ರಂದು ಸಂಜೆ ಪಡೀಲು ಎಂಡಿಎಸ್ ಟ್ರಿನಿಟಿ ಸಭಾಭವನದಲ್ಲಿ ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 6, ವಲಯ ಒಂದರ ಮಾಣಿ ಲಯನ್ಸ್ ಕ್ಲಬ್‌ರವರಿಂದ ಪ್ರಾಯೋಜಿಸಲ್ಪಟ್ಟ ನೂತನ ಕ್ಲಬ್ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು.


ಕ್ಲಬ್ ಜಿಲ್ಲೆಯಲ್ಲಿ ಹಿರಿಮೆ ಸಾಧಿಸುವಂತಹ ಕಾರ್ಯ ಮಾಡಲಿ-ಕುಡ್ಗಿ ಅರವಿಂದ್ ಶೆಣೈ:
ದ್ವಿತೀಯ ಉಪ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ ಮಾತನಾಡಿ, ಜಿಲ್ಲಾ ಗವರ್ನರ್ ರವರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪ್ರಾಂತೀಯ ಅಧ್ಯಕ್ಷ ಹಾಗೂ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಪ್ರಿಯಲತಾ ದಂಪತಿ ಹೊಸ ಕ್ಲಬ್ ಹುಟ್ಟು ಹಾಕುವ ಮೂಲಕ ಕಾರ್ಯ ನಿರ್ವಹಿಸಿದ್ದಾರೆ. ಕ್ಲಬ್ ಸ್ಥಾಪನೆ ಮಾಡುವುದು ಕಷ್ಟವೇ ಅಲ್ಲದೆ ಅದನ್ನು ಪೋಷಿಸಿ ಮುಂದುವರೆಸಿಕೊಂಡು ಹೋಗುವುದು ಮತ್ತೂ ಕಷ್ಟವೇ. ನೂತನ ಕ್ಲಬ್ ತನ್ನ ಹೆಸರಿಗೆ ತಕ್ಕಂತೆ ಜಿಲ್ಲೆಯಲ್ಲಿಯೇ ಹಿರಿಮೆ ಸಾಧಿಸುವಂತಹ ಕಾರ್ಯ ಮಾಡಲಿ ಎಂದರು.


ಸೇವಾ ಚಟುವಟಿಕೆಯೊಂದಿಗೆ ಕ್ಲಬ್‌ನ ಸೇವಾ ಪಯಣಕ್ಕೆ ಶುಭವಾಗಲಿ-ಓಸ್ವಾಲ್ಸ್ ಡಿ’ಸೋಜ:
ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಓಸ್ವಾಲ್ಡ್ ಡಿ’ಸೋಜ ಮಾತನಾಡಿ, ನೂತನ ಈ ಕ್ಲಬ್ ಉತ್ತಮ ಸದಸ್ಯರಿಂದ ಕೂಡಿದ್ದು ಸದೃಢ ಕ್ಲಬ್ ಸ್ಥಾಪನೆಯಾಗಿದೆ ಎಂಬ ಹೆಮ್ಮೆ ನನಗಿದೆ. ತನ್ನ ಸೇವಾ ಚಟುವಟಿಕೆ ಮೂಲಕ ಕ್ಲಬ್ ಒಳ್ಳೆಯ ಹೆಸರನ್ನು ಗಳಿಸುತ್ತದೆ ಎಂಬ ಭರವಸೆ ನಮ್ಮದಾಗಿದ್ದು ಕ್ಲಬ್ ಸೇವಾ ಪಯಣಕ್ಕೆ ಶುಭವಾಗಲಿ ಎಂದರು.


ನೂತನ ಕ್ಲಬ್ ಸದಸ್ಯರು ನಮ್ಮೊಂದಿಗಿದ್ದಾರೆ, ನಾವೂ ಕೂಡ ನಿಮ್ಮೊಂದಿಗಿದ್ದೇವೆ-ಲ್ಯಾನ್ಸಿ ಮಸ್ಕರೇನ್ಹಸ್:
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಹಾಗೂ ನೂತನ ಕ್ಲಬ್ ವಿಸ್ತರಣಾಧಿಕಾರಿ ಲ್ಯಾನ್ಸಿ ಮಸ್ಕರೇನ್ಹಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಉಪ್ಪಿನಂಗಡಿ ಹಾಗೂ ಸವಣೂರಿನಲ್ಲಿ ಲಯನ್ಸ್ ಕ್ಲಬ್ ರಚಿಸಬೇಕು ಎನ್ನುವ ಕನಸು ಇತ್ತಾದರೂ ಅದು ಆಗಿಲ್ಲ ಎಂಬ ಕೊರಗು ಇದೆ. ಆದರೆ ಬನ್ನೂರಿನಲ್ಲಿ ಕೇವಲ ಹದಿನೈದು ದಿನಗಳೊಳಗೆ ರಚನೆಯಾಗಿರುವುದು ಬಹಳ ಹೆಮ್ಮೆ ಎನಿಸಿದೆ. ನೂತನ ಕ್ಲಬ್ ಸದಸ್ಯರು ನಮ್ಮೊಂದಿಗಿದ್ದಾರೆ, ನಾವೂ ಕೂಡ ನಿಮ್ಮೊಂದಿಗಿದ್ದೇವೆ ಎಂದರು.


ಸೇವಾ ಚಟುವಟಿಕೆಗಳು:
ನೂತನ ಕ್ಲಬ್ ಪದ ಪ್ರದಾನ ಪ್ರಯುಕ್ತ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್‌ರವರ ಪ್ರಾಯೋಜಕತ್ವದಲ್ಲಿ ರೂಪಕಲಾರವರ ವಿಶೇಷ ಚೇತನ ಪುತ್ರಿಯ ವ್ಯಾಸಂಗಕ್ಕೆ, ಕಾರ್ಯದರ್ಶಿ ಲೀನಾ ಮಚಾದೋರವರ ಪ್ರಾಯೋಜಕತ್ವದಲ್ಲಿ ಸರಿತಾ ಮಸ್ಕರೇನ್ಹಸ್ ರವರ ಆರೋಗ್ಯಕ್ಕೆ, ಜೊತೆ ಕಾರ್ಯದರ್ಶಿ ನಿಶಾ ಮಿನೇಜಸ್ ರವರ ಪ್ರಾಯೋಜಕತ್ವದಲ್ಲಿ ವಿಶೇಷ ಚೇತನ ಪ್ರಿಯಾ ಪಾಯಿಸ್ ರವರ ಔಷಧಿ ವೆಚ್ಚಕ್ಕೆ ಧನ ಸಹಾಯವನ್ನು ಕ್ಲಬ್ ಸೇವಾ ಚಟುವಟಿಕೆಯಾಗಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.


ದೇಣಿಗೆ ಹಸ್ತಾಂತರ:
ಲಯನ್ಸ್ ಎಕ್ಸ್ಟೆಂಶನ್ ಚೇರ್‌ಪರ್ಸನ್ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ಪ್ರಿಯಲತಾ ಡಿ’ಸಿಲ್ವ ದಂಪತಿ ಹಾಗೂ ವಿನ್ನಿ ಮಸ್ಕರೇನ್ಹಸ್ ಜಿಲ್ಲಾ ಗವರ್ನರ್‌ರವರ ಯೋಜನೆಗಳಿಗೆ ದೇಣಿಗೆ ಹಸ್ತಾಂತರಿಸಲಾಯಿತು.
ಜಿಲ್ಲಾ ಲಿಯೋ ಅಧ್ಯಕ್ಷೆ ರಂಜಿತಾ ಶೆಟ್ಟಿ, ರೀಜನ್ 6, ವಲಯ 2ರ ವಲಯ ಚೇರ್‌ಪರ್ಸನ್ ಪಾವನ ರಾಮ, ಗೈಡಿಂಗ್ ಲಯನ್ಸ್‌ಗಳಾಗಿ ರೀಜನ್ 6, ವಲಯ ಒಂದರ ವಲಯ ಚೇರ್‌ಪರ್ಸನ್ ವಿನ್ನಿ ಮಸ್ಕರೇನ್ಹಸ್, ಜಿಲ್ಲಾ ಲಯನ್ಸ್ ಕ್ಲಬ್ ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ಕೋಶಾಧಿಕಾರಿ ಗಣೇಶ್ ಪೂಜಾರಿರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನೂತನ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ಪ್ರಾರ್ಥಿಸಿದರು. ಶಾರದಾ ಅರಸ್‌ರವರು ಧ್ವಜ ವಂದನೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಯಿತು. ನೂತನ ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ ನೀತಿ ಸಂಹಿತೆಯನ್ನು ಓದಿದರು. ನೂತನ ಕ್ಲಬ್ ಸದಸ್ಯರ ಪರಿಚಯವನ್ನು ಮಾಣಿ ಲಯನ್ಸ್ ಕ್ಲಬ್ ಸದಸ್ಯರಾದ ವಿನ್ಸೆಂಟ್ ಪಾಯಿಸ್, ನೂತನ ಕ್ಲಬ್‌ನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯವರ ಪರಿಚಯವನ್ನು ಮಾಣಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ವಿನ್ಸೆಂಟ್ ಲಸ್ರಾದೋ, ಜಿಲ್ಲಾ ರಾಜ್ಯಪಾಲರ ಪರಿಚಯವನ್ನು ಮಾಣಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಉಮೇಶ್ ಪಿ.ರವರು ನೀಡಿದರು. ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೂಸಪ್ಪ ಪೂಜಾರಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಲೀನಾ ಮಚಾದೋ ವಂದಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಮಾಣಿ ಕಾರ್ಯಕ್ರಮ ನಿರೂಪಿಸಿದರು.

ಕ್ಲಬ್ ಅಭಿವೃದ್ಧಿಗೆ ಶಕ್ತಿ ಮೀರಿ ದುಡಿಯುತ್ತೇನೆ..
ಕ್ಲಬ್ ಸದಸ್ಯರು ನನ್ನಲ್ಲಿ ವಿಶ್ವಾಸವಿಟ್ಟು ಅಧ್ಯಕ್ಷೆಯನ್ನಾಗಿ ಮಾಡಿರುವುದು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಧ್ಯಕ್ಷೆಯಾಗಲು ಪ್ರಥಮವಾಗಿ ಹೆದರಿದ್ದೆ. ಆದರೆ ಇಂದಿನ ಕಾರ್ಯಕ್ರಮ ನೋಡಿದಾಗ ಆ ಹೆದರಿಕೆ ಮಾಯವಾಗಿದೆ. ಹೆದರಬೇಡಿ ನಾವಿದ್ದೇವೆ ಎಂದು ಕ್ಲಬ್ ನ ಅನುಭವಿ ಸದಸ್ಯರು ನನ್ನಲ್ಲಿ ಧೈರ್ಯ ತುಂಬಿದ್ದಾರೆ. ಚರ್ಚ್ ನ ಕೆಲವು ಸಂಘಟನೆಗಳಲ್ಲಿ ದುಡಿದ ಅನುಭವ ನನಗಿದ್ದು ಈ ನೂತನ ಕ್ಲಬ್ ಅನ್ನು ಎಲ್ಲರ ವಿಶ್ವಾಸದೊಂದಿಗೆ ಅಭಿವೃದ್ಧಿಯತ್ತ ಕೊಂಡೊಯ್ಯಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ.
-ವಿಲ್ಮಾ ಗೊನ್ಸಾಲ್ವಿಸ್, ನೂತನ ಅಧ್ಯಕ್ಷೆ, ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್

ಸನ್ಮಾನ..
ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜ, ನೂತನ ಕ್ಲಬ್ ಆಗಲು ಶ್ರಮಿಸಿದ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ನೂತನ ಕ್ಲಬ್ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರುಗಳನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಪದ ಪ್ರದಾನ…
ನೂತನ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಕಾರ್ಯದರ್ಶಿ ಲೀನಾ ಮಚಾದೊ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜ, ಪ್ರಥಮ ಉಪಾಧ್ಯಕ್ಷ ವಿಶ್ವನಾಥ ಗೌಡ, ದ್ವಿತೀಯ ಉಪಾಧ್ಯಕ್ಷ ಆಂಟನಿ ಒಲಿವೆರಾ, ಜೊತೆ ಕಾರ್ಯದರ್ಶಿ ನಿಶಾ ಮಿನೇಜಸ್, ಜೊತೆ ಕೋಶಾಧಿಕಾರಿ ಸನತ್ ಕುಮಾರ್, ಮೆಂಬರ್‌ಶಿಪ್ ಚೇರ್‌ಮ್ಯಾನ್ ಲ್ಯಾನ್ಸಿ ಮಸ್ಕರೇನ್ಹಸ್, ಸರ್ವಿಸ್ ಚೇರ್‌ಮ್ಯಾನ್ ಸಿಪ್ರಿಯನ್ ವೇಗಸ್, ಮಾರ್ಕೆಟಿಂಗ್ ಚೇರ್‌ಮ್ಯಾನ್ ಲಿಡ್ವಿನ್ ಸೆರಾವೋ, ಎಲ್‌ಸಿಐಎಫ್ ಸಂಯೋಜಕ ನೋಯೆಲ್ ಸೆರಾವೋ, ಟೇಮರ್ ರೋಶನ್ ಡಾಯಸ್, ಟೇಯ್ಲ್ ಟ್ವಿಸ್ಟರ್ ಐರಿನ್ ಡಿ’ಸೋಜ, ಫಂಡ್ ರೈಸ್ ಚೇರ್‌ಪರ್ಸನ್ ಲೀನಾ ರೇಗೊ, ಮಾಹಿತಿ ತಂತ್ರಜ್ಞಾನ ಅನಿತಾ ಜ್ಯೋತಿ ಡಿ’ಸೋಜ, ನಿರ್ದೇಶಕರುಗಳಾದ ಪೀಟರ್ ಡಿ’ಸೋಜ, ವೆರೋನಿಕ ಮಸ್ಕರೇನ್ಹಸ್, ಚಂಚಲಾಕ್ಷಿ, ಶಾರದಾ ಅರಸ್, ಜೇಮ್ಸ್ ಸಿ.ಆರ್, ಐವನ್ ಫೆರ್ನಾಂಡೀಸ್‌ರವರುಗಳಿಗೆ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜರವರು ಪದ ಪ್ರದಾನ ನೆರವೇರಿಸಿ, ಪ್ರಮಾಣವಚನ ಬೋಧಿಸಿದರು.

LEAVE A REPLY

Please enter your comment!
Please enter your name here