ಕಲಿತ ಶಾಲೆಯ ಮೇಲಿನ ಅಭಿಮಾನ -ಮೂಲಸೌಕರ್ಯ ಅಭಿವೃದ್ಧಿಗೆ ಸೈಕಲ್ ಅಭಿಯಾನ

0

ಬರಹ: ಶರತ್ ಕುಮಾರ್ ಪಾರ

ಪುತ್ತೂರು: ತಾವು ಕಲಿತ ಶಾಲೆಯ ಬಗ್ಗೆ ಅಭಿಮಾನ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಲ್ಲೊಬ್ಬರು ಕಲಿತ ಶಾಲೆಯ ಅಭಿವೃದ್ಧಿಗೆ ಸೈಕಲ್ ಅಭಿಯಾನ ನಡೆಸಿ ದೇಣಿಗೆ ಸಂಗ್ರಹಿಸುವ ಮೂಲಕ ಶಾಲೆಯ ಋಣ ತೀರಿಸುವ ಕಾಯಕಕ್ಕೆ ತೊಡಗಿದ್ದಾರೆ.
ಪಾಣಾಜೆ ಗ್ರಾಮದ ಕಡಮ್ಮಾಜೆ ನಿವಾಸಿ ಜಗನ್ನಾಥ ರೈ ಮತ್ತು ಸಂಜೀವಿ ಜಿ. ರೈ ದಂಪತಿ ಪುತ್ರ, ಬೆಂಗಳೂರಿನಲ್ಲಿ ಈವೆಂಟ್ ಆರ್ಗನೈಸರ್ ಉದ್ಯೋಗ ನಡೆಸುತ್ತಿರುವ ರಾಕೇಶ್ ರೈ ಎಂಬವರೇ ಈ ಅಪ್ಪಟ ವಿದ್ಯಾಭಿಮಾನಿ. ತಾನು ಕಲಿತ ಪಾಣಾಜೆ ಸುಭೋಧ ಪ್ರೌಢಶಾಲೆಯ ಅಭಿವೃದ್ಧಿಗಾಗಿ “ಪರಿಕ್ರಮಣ 23-24” ಕನ್ನಡ ಶಾಲೆಯ ಅಭಿವೃದ್ಧಿಗೆ ಸೈಕಲ್ ಅಭಿಯಾನ ಹಮ್ಮಿಕೊಂಡಿದ್ದಾರೆ. ಪಾಣಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಬಳಿಕ 2002ರಲ್ಲಿ ಸುಭೋಧ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪೂರೈಸಿದ ಅವರು ಬೆಟ್ಟಂಪಾಡಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದರು. ಉತ್ತಮ ಕ್ರೀಡಾಪಟುವಾಗಿದ್ದ ಇವರು ವಿದ್ಯಾಭ್ಯಾಸ ಬಳಿಕ ಸ್ವಲ್ಪ ಸಮಯ ಮುಂಬೈಯಲ್ಲಿ ಉದ್ಯೋಗ ಮಾಡಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ದೂರಶಿಕ್ಷಣದ ಮೂಲಕ ಪಡೆದಿದ್ದಾರೆ.

ಪರಿಕ್ರಮಣ ಸೈಕಲ್ ಅಭಿಯಾನ:
ತಾನು ಕಲಿತ ಶಾಲೆಗೆ ಒಂದಿಷ್ಟು ಸಹಾಯ ಮಾಡಬೇಕೆಂದು ಹೊರಟ ರಾಕೇಶ್ ರೈರವರು ತನ್ನ ಉದ್ಯೋಗದ ಬಿಡುವಿನ ವೇಳೆಯಲ್ಲಿ ಸೈಕಲ್ ಅಭಿಯಾನ ಹಮ್ಮಿಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ತಾನು ವಾಸವಾಗಿರುವ ಇಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಸುತ್ತಮುತ್ತ ರಜಾದಿನಗಳಂದು ಸೈಕಲ್ ಪ್ರಯಾಣ ಮಾಡುತ್ತಾರೆ. ತಾನು ಹೊರಡುವ ಮೊದಲು ತನ್ನ ಆಪ್ತರಿಗೆ, ಸ್ನೇಹಿತರಿಗೆ ಹಾಗೂ ಪರಿಚಯಸ್ಥರಿಗೆ ತನ್ನ ಅಭಿಯಾನದ ಉದ್ದೇಶವನ್ನು ವಾಟ್ಸಾಪ್ ಮೂಲಕ ಕಳುಹಿಸುತ್ತಾರೆ. ಬಳಿಕ ಯಾನ ಆರಂಭಿಸುವ ಅವರು ದಿನದಲ್ಲಿ ಸುಮಾರು 50ರಿಂದ 60ಕಿ.ಮೀ.ವರೆಗೆ ಪ್ರಯಾಣ ಮಾಡುತ್ತಾರೆ. ಈವರೆಗೆ ಒಟ್ಟು 298 ಕಿ.ಮೀ.ನಷ್ಟು ಪ್ರಯಾಣ ಮಾಡಿ 1ಲಕ್ಷದ 16ಸಾವಿರ ರೂ. ದೇಣಿಗೆ ಸಂಗ್ರಹ ಮಾಡಿದ್ದಾರೆ.

ಕ್ಯೂ ಆರ್ ಕೋಡ್ ಮೂಲಕ ಪಾವತಿಗೆ ಅವಕಾಶ
ಸೈಕಲ್ ಯಾನದಲ್ಲಿ ದೇಣಿಗೆ ನೀಡುವವರಿಗೆ ಸುಭೋಧ ಪ್ರೌಢಶಾಲೆಗೆ ಸಂಬಂಧಿಸಿದ ಅಕೌಂಟ್‌ನ ಕ್ಯೂಆರ್ ಕೋಡ್ ನೀಡಿ ಅದಕ್ಕೆ ನೇರವಾಗಿ ದೇಣಿಗೆ ನೀಡುವಂತೆ ತಿಳಿಸುತ್ತಾರೆ. ನಗದು ನೀಡುವವರಿಗೆ ಇಲ್ಲಿ ಅವಕಾಶವಿಲ್ಲ. ಇದರಿಂದ ಹಣ ನೇರವಾಗಿ ಶಾಲೆಯ ಅಕೌಂಟ್‌ಗೆ ಪಾವತಿಯಾಗುತ್ತದೆ.

ದೇಣಿಗೆಗೆ ವ್ಯಾಲ್ಯೂ ಬರುತ್ತದೆ:
ಶಾಲೆಗೆ ದೇಣಿಗೆ ಸಂಗ್ರಹಣೆಗೆ ಹಲವು ದಾರಿಗಳಿರುತ್ತದೆ. ಆದರೆ ಕಷ್ಟಪಟ್ಟು ದೇಣಿಗೆ ಸಂಗ್ರಹಿಸಿ ನೀಡಿದರೆ ಅದಕ್ಕೊಂದು ಮೌಲ್ಯ ಬರುತ್ತದೆ ಎಂಬುದು ರಾಕೇಶ್ ರೈ ಅನಿಸಿಕೆ. ಹಾಗಾಗಿ ಸೈಕಲ್ ಯಾನ ಮಾಡಿ ದೇಣಿಗೆ ಸಂಗ್ರಹ ಮಾಡಲು ಹೊರಟಿದ್ದಾರೆ.

ಶಾಲೆಯ ಮೂಲಸೌಕರ್ಯ ಅಭಿವೃದ್ಧಿಯ ಗುರಿ
ಸೈಕಲ್ ಅಭಿಯಾನದಿಂದ ಸಂಗ್ರಹವಾದ ಹಣದಿಂದ ಪಾಣಾಜೆ ಸುಭೋಧ ಪ್ರೌಢಶಾಲೆಯ ಮೂಲಸೌಕರ್ಯ ಅಭಿವೃದ್ಧಿ ಮಾಡುವ ಕನಸು ರಾಕೇಶ್ ರೈರವರದ್ದು. 1970ರಲ್ಲಿ ಪ್ರಾರಂಭವಾದ ಶಾಲೆ ಸ್ವರ್ಣ ಮಹೋತ್ಸವ ಆಚರಿಸುವ ಮೊದಲು ಕೆಲವು ಅವಶ್ಯಕತೆಗಳನ್ನು ಪೂರೈಸುವುದು ಅವರ ಉದ್ಧೇಶವಾಗಿದೆ. ಕಟ್ಟಡಕ್ಕೆ ಪ್ಲಾಸ್ಟರಿಂಗ್, ಕಂಪ್ಯೂಟರ್ ಕೊಠಡಿ, ಪ್ರಯೋಗಶಾಲೆ ನಿರ್ಮಾಣ, ಆಟದ ಮೈದಾನ ವಿಸ್ತರಣೆ, ಆವರಣ ಗೋಡೆ ರಚನೆ, ಗ್ರಂಥಾಲಯ ನಿರ್ಮಾಣ ಮುಂತಾದ ಮೂಲಭೂತ ಸೌಕರ್ಯ ಒದಗಿಸುವುದು ಇವರ ಉದ್ಧೇಶವಾಗಿದೆ.

700 ಕಿ.ಮೀ. ಯಾಣ, 5ಲಕ್ಷ ರೂ ಸಂಗ್ರಹ ಗುರಿ
ಸಣ್ಣದಿಂದಲೇ ಸೈಕಲ್ ಪ್ರಯಾಣದ ಕ್ರೇಜ್ ಹೊಂದಿರುವ ರಾಕೇಶ್ ರೈರವರು ತನ್ನ ಸ್ನೇಹಿತರ ಜೊತೆ ಸೈಕಲ್ ಯಾನ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ನಸುಕಿಗೆ ಪ್ರಯಾಣ ಆರಂಭಿಸಿ ಮಧ್ಯಾಹ್ನ 11 ಗಂಟೆಯವರೆಗೆ ಸ್ನೇಹಿತರ ಜತೆ ಸೈಕಲ್ ಯಾನ ಕೈಗೊಳುತ್ತಾರೆ. ಇದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬ ದೃಷ್ಟಿಯಿಂದ 2023ರಲ್ಲಿ ದೇಣಿಗೆ ಸಂಗ್ರಹಣೆಗೆ ಸೈಕಲ್ ಅಭಿಯಾನ ಆರಂಭಿಸುತ್ತಾರೆ. ಸೈಕಲ್ ಅಭಿಯಾನದಲ್ಲಿ ಇವರು 700 ಕಿ.ಮೀ. ಯಾನದ ಗುರಿ ಇಟ್ಟುಕೊಂಡಿದ್ದು ಸುಮಾರು 3ರಿಂದ 5ಲಕ್ಷದವರೆಗೆ ದೇಣಿಗೆ ಸಂಗ್ರಹಿಸುವ ಗುರಿ ಹೊಂದಿದ್ದಾರೆ.

LEAVE A REPLY

Please enter your comment!
Please enter your name here