ಸುದಾನ ಪಿಯು ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಶಿಬಿರ

0

ಅತಿಯಾದ ಆತ್ಮವಿಶ್ವಾಸ ಸೋಲಿನೆಡೆಗೆ ದೂಡುತ್ತದೆ, ಆತ್ಮವಿಶ್ವಾಸದಿಂದ ಮುಂದುವರಿಯಿರಿ -ಸುನಿಲ್ ಪಿ.ಜೆ

ಪುತ್ತೂರು: ವಿದ್ಯಾರ್ಥಿಗಳು ತಮ್ಮ ಗುರಿಯ ಬಗ್ಗೆ ಆಲೋಚನೆ ಮಾಡಬೇಕು. ಸಕಾರಾತ್ಮಕವಾದ ಚಿಂತನೆಗಳು ವಿದ್ಯಾರ್ಥಿಗಳನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಅತಿಯಾದ ಆತ್ಮವಿಶ್ವಾಸವು ನಮ್ಮನ್ನು ಸೋಲಿನೆಡೆಗೆ ದೂಡುತ್ತದೆ. ಹಾಗಾಗಿ ಆತ್ಮವಿಶ್ವಾಸದಿಂದ ಮುಂದುವರಿಯಿರಿ ಎಂದು ಮಂಗಳೂರು ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ತರಬೇತುದಾರ ಸುನಿಲ್ ಪಿ.ಜೆರವರು ಹೇಳಿದರು.


ಜೂ.15 ರಂದು ಮಂಜಲ್ಪಡ್ಪು ಇಲ್ಲಿನ ಸುದಾನ ಸಮೂಹ ವಿದ್ಯಾಸಂಸ್ಥೆಗಳಲ್ಲೊಂದಾದ ಸುದಾನ ಪದವು ಪೂರ್ವ ಕಾಲೇಜಿನಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಶಿಬಿರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕನಸು ಕಾಣುವುದರ ಜೊತೆಗೆ ಪರಿಶ್ರಮ ಕೂಡ ಅತಿ ಮುಖ್ಯ. ಇದು ವಿದ್ಯಾರ್ಥಿಯನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಯಾವತ್ತು ಸಾಧನೆಯನ್ನು ಸಾಧಿಸುವುದಕ್ಕೆ ಸಾಧ್ಯ ಎಂದರು.


ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಡಾ|ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿ ವಿದ್ಯಾರ್ಥಿಯಲ್ಲಿ ಸಾಧಿಸುತ್ತೇನೆ ಎಂಬ ಗುರಿಯ ಮನೋಭಾವವನ್ನು ಬೆಳೆಸಿಕೊಂಡಾಗ ಸಾಧನೆಯ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಮತ್ತು ಶ್ರೇಷ್ಟತೆಯ ಹಿರಿಮೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಾವು ಭವಿಷ್ಯದಲ್ಲಿ ಏನಾಗಬಲ್ಲೆವು ಎಂಬ ತಮ್ಮ ಭವಿಷ್ಯದ ನಿರ್ಧಾರವನ್ನು ಇಂದೇ ತಳೆಯುವಂತಾಗಬೇಕು. ಕಾರ್ಯಾಗಾರದಲ್ಲಿನ ಪ್ರತಿಯೊಂದು ವಿಚಾರಗಳನ್ನು ಮನದಟ್ಟು ಮಾಡಿಕೊಂಡು ಮುಂದಡಿಯಿಡಿ ಎಂದರು.
ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿಪರ ಕೋರ್ಸ್‌ಗಳಲ್ಲಿ ಆಳವಾದ ಜ್ಞಾನದ ಅಗತ್ಯವಿದ್ದು ಸಂಸ್ಥೆಯು ಅವನ್ನು ಸಕರಾತ್ಮಕವಾಗಿ ಪೂರೈಸುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸ್ಥಿರತೆ ಹಾಗೂ ವಿಧೇಯತೆಯನ್ನು ಮೈಗೂಡಿಸಿಕೊಂಡಾಗ ಜೊತೆಗೆ ಹಿರಿ-ಕಿರಿಯರನ್ನು ಗೌರವಿಸುವ ಮೂಲಕ ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದರು.


ಸುದಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಆಸ್ಕರ್ ಆನಂದ್, ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ವಸ್ತಿ ಶೆಟ್ಟಿ ಮತ್ತು ಬಳಗ ಪ್ರಾರ್ಥಿಸಿದರು. ಉಪನ್ಯಾಸಕಿ ರಮ್ಯಶ್ರೀ ಸ್ವಾಗತಿಸಿ, ಉಪನ್ಯಾಸಕಿ ಕಸ್ತೂರಿ ವಂದಿಸಿದರು. ಉಪನ್ಯಾಸಕಿ ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಪ್ರಶ್ನಿಸುವ, ಉತ್ತರಿಸುವ ಗುಣವಿರಬೇಕು..
ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮತ್ತು ಉತ್ತರಿಸುವ ಗುಣ ಇದ್ದಾಗ ವಿಜಯದ ಗುರಿಯ ಕಡೆಗೆ ಖುಷಿಯಿಂದಲೇ ತಲುಪಬಲ್ಲೆವು. ನಿಮ್ಮ ಬಗ್ಗೆ ನೀವು ತಿಳಿದುಕೊಳ್ಳುವ ಮೂಲಕ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. ನಮ್ಮ ಭವಿಷ್ಯಕ್ಕಾಗಿ ನಮ್ಮನ್ನು ನಾವೇ ತಯಾರು ಮಾಡುವ ಮೂಲಕ ವಿಜಯದ ನಗೆ ಮೂಡಿಸಿ. ಗಮನಕೇಂದೀಕರಿಸುವುದಕ್ಕೆ ಸಮಯ ಬೇಕು. ಅದನ್ನು ವಿದ್ಯಾರ್ಥಿಗಳು ಆರ್ಜಿಸಿಕೊಳ್ಳಲು ಆರಂಭಿಸಿದಾಗ ಜಯ ಹತ್ತಿರವಾಗುತ್ತದೆ. ಸವಾಲುಗಳನ್ನು ಎದುರಿಸಿಕೊಳ್ಳುವುದಕ್ಕೆ ಸಿದ್ಧರಿರಬೇಕು. ಆಗ ಜೀವನದ ಖುಷಿ ಏನು, ಪರಿಶ್ರಮ ಏನು ಎಂಬುದನ್ನು ತಿಳಿದುಕೊಳ್ಳುತ್ತೀರಿ. ಪ್ರತಿಯೊಂದರ ಬಗ್ಗೆ ನಂಬಿಕೆ, ಸಮಯ, ಸಹನೆ, ಪರಿಶ್ರಮ ಅತಿ ಮುಖ್ಯ.
-ಸುನಿಲ್ ಪಿ.ಜೆ, ಉಪನ್ಯಾಸಕರು, ಎಸ್‌ಡಿಎಂ ಪಿಯು ಕಾಲೇಜು

LEAVE A REPLY

Please enter your comment!
Please enter your name here