ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ 19ನೇ ವಾರ್ಷಿಕ ಸಮಾರಂಭ, ಸತ್ಯನಾರಾಯಣ ಪೂಜೆ

0

ಪುತ್ತೂರು:ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘ ಪುತ್ತೂರು ತಾಲೂಕು ಇದರ 19ನೇ ವಾರ್ಷಿಕ ಸಮಾರಂಭ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ, ಸಮಾಜದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಜೂ.16ರಂದು ಬೆಳಿಗ್ಗೆ ಬಪ್ಪಳಿಗೆ ಜೈನಭವನದಲ್ಲಿ ಅದ್ದೂರಿಯಾಗಿ ನೆರವೇರಿತು.


ಕಾರ್ಯಕ್ರಮಗಳನ್ನು ದೀಪ ಬೆಳಗಿಸಿ ಉದ್ಘಾಟಿಸಿದ ರಾಗಾಳಿ ಕೇಶವ ಜಂಡಡ್ಕ್ ಮಾತನಾಡಿ, ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇನ್ನಷ್ಟು ಉತ್ತಮ ಕಾರ್ಯಕ್ರಮಗಳೊಂದಿಗೆ ಸಂಘವು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಪೆರ್ಣೆ ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಂತ ಪಾಟಾಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜಕೀಯ ಬಲವಿಲ್ಲದೆ ಎನೂ ಮಾಡಲು ಸಾಧ್ಯವಿಲ್ಲ. ಎಲ್ಲಾ ಸಮುದಾಯದವರೂ ರಾಜಕೀಯ ಕ್ಷೇತ್ರದಲ್ಲಿದ್ದಾರೆ. ಹೀಗಾಗಿ ನಮ್ಮ ಸಮುದಾಯದವರೂ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸಮಾಜದವರೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಪ್ರಭಾವ ತೋರಿಸಬೇಕು. ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಸಂಘಟನೆ ಬಲಿಷ್ಠ ಪಡಿಸಿಕೊಂಡು ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಸದೃಡರಾಗಬೇಕು. ಉನ್ನತ ವಿದ್ಯಾಭ್ಯಾಸ ಪಡೆದು ಸರಕಾರಿ ಸೇವೆಯಲ್ಲಿಯೂ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿ ತೊಡಗಿಸಿಕೊಳ್ಳಬೇಕು ಎಂದರು.


ದ.ಕ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ರಾಮ ಮಗ್ರೋಡಿ ಮಾತನಾಡಿ, ಜಿಲ್ಲೆಯಲ್ಲಿ ನಮ್ಮ ಸಂಘಟನೆಯನ್ನು ಭದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಐದು ಸಂಘಗಳ ಮುಖಾಂತರ ಸಮಾಜದ ಜಿಲ್ಲಾ ಸಂಘ ರಚನೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಜಿಲ್ಲಾ ಸಮಾವೇಶ ನಡೆಸಲಾಗುವುದು. ಯುವಕರು ಜಿಲ್ಲಾ ಸಮಿತಿಯಲ್ಲಿ ಸದಸ್ಯರಾಗಬೇಕು. ನಮ್ಮ ಸಮಾಜದಲ್ಲಿ ಕೆಲವೊಂದು ಸುಧಾರಣೆಗಳನ್ನು ಮಾಡಿಕೊಳ್ಳಬೇಕು. ಯುವ ಸಮುದಾಯವನ್ನು ಸೆಳೆಯುವ ನಿಟ್ಟಿನಲ್ಲಿ ವಿದ್ಯಾವಂತರು, ಪ್ರತಿಭಾವಂತರಿಗೆ ಸೂಕ್ತ ವೇದಿಕೆಗಳನ್ನು ಒಡಗಿಸಿಕೊಡಬೇಕು ಎಂದರು.
ನರಿಮೊಗರು, ಬೆಟ್ಟಂಪಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪರಮೇಶ್ವರಿ ಪ್ರಸಾದ್ ಮಾತನಾಡಿ, ಆಧುನಿಕತೆಯಲ್ಲಿ ಮೌಲ್ಯಯುತ ಜೀವನ ಕಳೆದುಕೊಂಡಿದ್ದೇವೆ. ಮಕ್ಕಳನ್ನು ಮೌಲಿಕ ವ್ಯಕ್ತಿಗಳನ್ನಾಗಿ ಮಾಡುವಲ್ಲಿ ಕುಟುಂಬ, ಸಮಾಜ, ಪರಿಸರದ ಪಾತ್ರ ಬಹುಮುಖ್ಯ. ಮಕ್ಕಳಲ್ಲಿ ಗುರುವಿನ ಮೇಲಿನ ವೃದ್ಧಿಸಬೇಕು. ಮಕ್ಕಳ ಮೌಲ್ಯ ಶಿಕ್ಷಣ ನೀಡಬೇಕು ಎಂದರು.


ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆಯ ವೈದ್ಯಾಧಿಕಾರಿ ಡಾ.ಭವ್ಯ ಎಂ., ಮಾತನಾಡಿ,ಪರಸ್ಪರ ಪ್ರೀತಿ, ಕರುಣೆ, ಸಹಕಾರ ಮನೋಭಾವ ಅಳವಡಿಸಿಕೊಂಡಾಗ ಜೀವನ ಸುಧಾರಣೆಯಾಗಲಿದೆ. ಸಂಘದ ಬೆಳವಣಿಗೆಯಲ್ಲಿ ಸಮಾಜ ಬಾಂಧವರೆಲ್ಲರೂ ಕೈ ಜೋಡಿಸಬೇಕು ಎಂದರು.
ಆಪಲ್ ಕಂಪನಿಯ ಸೀನಿಯರ್ ಮ್ಯಾನೇಜರ್ ದೀಕ್ಷಿತ್ ಬೆಳ್ಳಾರೆ ಮಾತನಾಡಿ, ಶಿಕ್ಷಣವೇ ದುಡಿಮೆ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ. ಶಿಕ್ಷಣದಿಂದ ಪ್ರಬುದ್ಧತೆ ಹಾಗೂ ಸ್ವಾವಲಂಬಿಯಾಗಿ ಬದುಕಲು ಅವಕಾಶವಿದ್ದು ಪ್ರತಿಯೊಬ್ಬರೂ ಶಿಕ್ಷಣವನ್ನೇ ಜೀವನದ ದೊಡ್ಡ ಗುರಿಯನ್ನಾಗಿಸಬೇಕು. ಹೀಗಾಗಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಂಘ ಹಾಗೂ ಕ್ಷೇತ್ರದ ಮೂಲಕ ಶಿಕ್ಷಣಕ್ಕೆ ಸಹಕಾರ, ಪ್ರೋತ್ಸಾಹ ನೀಡಬೇಕು ಎಂದರು.


ಅಧ್ಯಕ್ಷತೆ ವಹಿಸಿದ್ದ ಸಂಘ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ಸಮಾಜ ಬಾಂಧವರೇ ಕಾರಣಿಕರ್ತರು. ವಾರ್ಷಿಕ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವ ಮೂಲಕ ಸಂಘಟನೆಯ ಬೆಳವಣಿಗೆಯನ್ನು ತೋರ್ಪಡಿಸಿದ್ದಾರೆ. ಸಂಘಟನೆಯಲ್ಲಿ ಮಹಿಳೆಯರು, ಯುವಕರಿಗೂ ಸ್ಥಾನ ನೀಡಲಾಗುತ್ತಿದೆ. ನಮ್ಮ ಬೆಳವಣಿಗೆಯಲ್ಲಿ ಹಿರಿಯ ಕೊಡುಗೆಯಿದೆ. ಹಿರಿಯ ತ್ಯಾಗ, ಪರಿಶ್ರಮದಿಂದಾಗಿ ನಮಗೆ ಸ್ಥಾನ, ಗೌರವ ದೊರೆಯುತ್ತಿದೆ. ಇದಕ್ಕಾಗಿ ಕಾರ್ಯಕ್ರಮದಲ್ಲಿ ಹಿರಿಯತನವನ್ನು ಗೌರವಿಸಲಾಗುತ್ತಿದೆ. ಇಂದು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.


ವಾಣಿಯನ್/ಗಾಣಿಗ ಸಂಘವು 19 ವರ್ಷಗಳನ್ನು ಪೂರೈಸಿ 20ನೇ ವರ್ಷಕ್ಕೆ ಕಾಲಿಟ್ಟಿದೆ. ಇಪ್ಪತನೇ ವರ್ಷದಲ್ಲಿ ಸಂಘದ ಮುಖಾಂತರ ಇನ್ನಷ್ಟು ಕೆಲಸ ಕಾರ್ಯಗಳನ್ನು ನಡೆಸಲಾಗುವುದು. ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಸಂಘದ ಹೆಸರಿನಲ್ಲಿ ತೊಡಗಿಸಿಕೊಳ್ಳಬೇಕು. ಇಪ್ಪತ್ತನೇ ವರ್ಷದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದಕ್ಕಾಗಿ ಇಂದಿನಿಂದಲೇ ರೂಪರೇಷೆ ಹಾಕಿಕೊಳ್ಳಲಾಗುವುದು. ಸಂಘಟನೆಗೆ ಹಾಗೂ ಸಂಘದ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರ ಸಹಕಾರ ಯಾಚಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಪ್ರಸಾದ್ ಕಲ್ಲರ್ಪೆ ತಿಳಿಸಿದರು.


ಸನ್ಮಾನ, ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ:
ನಿವೃತ್ತ ಶಿಕ್ಷಕಿ ಸಾವಿತ್ರಿ ಎನ್., ನಿವೃತ್ತ ಯೋಧರಾದ ವಿದ್ಯಾಧರ ಎನ್.ಪಟ್ಟೆ, ಬಾಲಕೃಷ್ಣ ಎನ್, ಕಲ್ಲರ್ಪೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪುತ್ತೂರು ತಾಲೂಕು ಅಧ್ಯಕ್ಷ ನಾಗೇಶ್ ಪಾಟಾಳಿ ಪೆರುವಾಯಿ, ಕೆದಂಬಾಡಿ, ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಿತೇಶ್ ಮೇರ್ಲ, ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ದೀಕ್ಷಿತ್ ಕಲ್ಲಾಜೆಯವರನ್ನು ಸನ್ಮಾನಿಸಲಾಯಿತು. ಸಮಾಜದ ಹಿರಿಯ ಸದಸ್ಯರಾದ ಸುಶೀಲ ಚಂದ ಪಾಟಾಳಿ ದಂಪತಿ ಅಮೈ, ಸುಶೀಲ ಮಹಾಲಿಂಗ ಪಾಟಾಳಿ ದಂಪತಿ ಶರವು, ಲಲಿತಾ ಶಂಕರ ಪಾಟಾಳಿ ದಂಪತಿ ಈಶ್ವರಮಂಗಲ, ಸಿದ್ದಮ್ಮ ಕಣ್ಣ ಪಾಟಾಳಿ ದಂಪತಿ ಬೈರಮೂಲೆ, ಯಮುನಾ ಮಯ್ಯಾಳ, ಗೋಪಿ ಸರವು, ಮಾಕು ದೇರ್ಲ, ಪರಮೇಶ್ವರಿ ದೇರ್ಲ, ಕಲ್ಯಾಣಿ ದೇರ್ಲ, ಸೀತು ಮುಕ್ರಂಪಾಡಿ, ಸಂಘದ ಮಾಸಿಕ ಸಭೆ ನಡೆಸಲು ಸ್ಥಳಾವಕಾಶ ನೀಡುತ್ತಿರುವ ನೆಲ್ಲಿಕಟ್ಟೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಮತ್ತು ಶಾರದ ದಂಪತಿಯನ್ನು ಗೌರವಿಸಲಾಯಿತು. ೨೦೨೩-೨೪ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಾರ್ಷಿಕ ಸಮಾರಂಭದ ಅಂಗವಾಗಿ ಸಮಾಜ ಬಾಂಧವರಿಗೆ ನಡೆಸಲಾದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದರಿಗೆ ಬಹುಮಾನ ವಿತರಿಸಲಾಯಿತು.


ಸತ್ಯನಾರಾಯಣ ಪೂಜೆ:
ಸಂಘದ 19ನೇ ವಾರ್ಷಿಕ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ರವಿಚಂದ್ರ ನೆಲ್ಲಿತ್ತಾಯರವರ ನೇತೃತ್ವದಲ್ಲಿ ಗಣಹೋಮ ಹಾಗೂ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆ ನೆರವೇರಿತು.


ಸಂಘದ ಕಾರ್ಯದರ್ಶಿ ಜಯಲಕ್ಷ್ಮೀ ಡಿ.ಎಸ್ ಸ್ವಾಗತಿಸಿದರು. ಸೌಮ್ಯ ವಿನಯ್ ಹಾಗೂ ಗೀತಾ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಮನೋಹರ್ ವಂದಿಸಿದರು. ಮಹಾಲಿಂಗ ಪಂಜಳ, ಮಾಜಿ ಅಧ್ಯಕ್ಷ ಶಂಕರ ಪಾಟಾಳಿ, ಸ್ಥಾಪಕ ಅಧ್ಯಕ್ಷ ತಿಮ್ಮಪ್ಪ ಪಾಟಾಳಿ, ನಾರಾಯಣ ಅಟ್ಲಾರ್, ರವಿ ಬಾಕಿತ್ತಿಮಾರ್, ರಮೇಶ್ ಬಾಕಿತ್ತಿಮಾರ್, ವಿನಯ ಕುಮಾರ್ ಕಡಮಜಲು, ಹರಿಪ್ರಸಾದ್ ಡಿ.ಎಸ್., ಶಿಲ್ಪರಾಜೇಶ್, ದಾಮೋದರ ಪಾಟಾಳಿ, ಶಾರದಾ ಕೃಷ್ಣ, ಮಹೇಶ್ ಆಲಂಕಾರು, ಸುಬ್ಬಪ್ಪ ಪಟ್ಟೆ, ಅಕ್ಷತಾ ಕಲ್ಲರ್ಪೆ, ಧನುಷಾ ಹಾಗೂ ಸುಚೇತಾ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆಯ ನಂತರ ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಲೈಸಿದವು.

LEAVE A REPLY

Please enter your comment!
Please enter your name here