ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ನೈಪುಣ್ಯ ಕಾರ್ಯಗಾರದ ಉದ್ಘಾಟನೆ

0

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಂಸ್ಕಾರಯುತ ಜೀವನಕ್ಕೆ ಚೌಕಟ್ಟು ನಿರ್ಮಾಣ ಅನಿವಾರ್ಯ- ರೂಪಲೇಖ

  • ಹದಿಹರೆಯದ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಗೂ ನಿಭಾವಣೆ ಕುರಿತಂತೆ ಡಾ. ವಿರೂಪಾಕ್ಷ ದೇವರಮನೆ ಇವರಿಂದ ಉಪನ್ಯಾಸಕರಿಗಾಗಿ ಕಾರ್ಯಗಾರ

ಪುತ್ತೂರು: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿವೇಕ ನೈಪುಣ್ಯ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮ ವಿವೇಕಾನಂದ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆಯಿತು. ಹದಿಹರೆಯದ ವಿದ್ಯಾರ್ಥಿಗಳು ಎದುರಿಸುವ ಹಲವು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ವಿವಿಧ ಹಂತಗಳಲ್ಲಿ ನಡೆಸಲಾಗುವ ಈ ಕಾರ್ಯಗಾರವನ್ನು ಸಂಪನ್ಮೂಲ ವ್ಯಕ್ತಿಗಳಾದ ಲೇಖಕರು ಹಾಗೂ ಡಾ. ಎ.ವಿ ಬಾಳಿಗ ಆಸ್ಪತ್ರೆ, ಉಡುಪಿ ಇಲ್ಲಿನ ಖ್ಯಾತ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಇವರು ವಿವಿಧ ಅವಧಿಗಳಲ್ಲಿ ನಡೆಸಿಕೊಟ್ಟರು. ವಿವೇಕಾನಂದ ವಿದ್ಯಾವರ್ಧಕ ಸಂಘ ಸ್ಥಾಪನೆಯಾದ ಮೂಲ ಉದ್ದೇಶವೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಂಸ್ಕಾರಯುತ ಜೀವನಕ್ಕೆ ಚೌಕಟ್ಟನ್ನು ನಿರ್ಮಿಸಿ, ಜೀವನ ಮೌಲ್ಯಗಳನ್ನು ಕಲಿಸಿ, ವ್ಯಕ್ತಿತ್ವ ನಿರ್ಮಾಣದೊಂದಿಗೆ ರಾಷ್ಟ್ರೀಯ ಜಾಗೃತಿ ಮೂಡಿಸುವುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಜತೆಕಾರ್ಯದರ್ಶಿಯಾದ ರೂಪಲೇಖ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೋ, ಅಷ್ಟೇ ಮಹತ್ತರವಾದ ಪಾತ್ರವನ್ನು ಇಂದು ಶಿಕ್ಷಕರೂ ನಿಭಾಯಿಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘವು ಆಪ್ತ ಸಮಾಲೋಚನೆಯ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಚಿಂತನೆಯನ್ನು ನಡೆಸಿದೆ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಿಗಾಗಿ ಏರ್ಪಡಿಸಲಾದ ಕಾರ್ಯಗಾರ ವಿವೇಕ ನೈಪುಣ್ಯ ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಕಾರ್ಯಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಂದ್ರ ಪಿ.ಮಾತನಾಡಿ, ನಮ್ಮ ಸಂಸ್ಥೆಯ ಚಿಂತನೆಯ ಪ್ರಕಾರ, ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಸಂಪೂರ್ಣ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸುವಂತವರಾಗಬೇಕು. ಮಕ್ಕಳ ಸಮಸ್ಯೆಗೆ ಪರಿಹಾರ ಕೊಡುವುದು ಒಬ್ಬ ಶಿಕ್ಷಕನ ಕರ್ತವ್ಯವೂ ಆಗಿರುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವ ಸಾರ್ಥಕವಾಗುವಂತಹ, ಆಲದ ಮರದಂತೆ ಮತ್ತೊಬ್ಬರಿಗೆ ನೆರಳು ನೀಡುವಂತಹ ಜೀವನವನ್ನು ತನ್ನದಾಗಿಸಿಕೊಳ್ಳಬೇಕು. ಅದಕ್ಕಾಗಿ ಇಂತಹ ಕಾರ್ಯಗಾರ ಅತ್ಯಗತ್ಯ ಎಂದ ಅವರು ಕಾರ್ಯಕ್ರಮದ ಸಫಲತೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ , ಡಾ. ಕೆ.ಎನ್.‌ ಸುಬ್ರಹ್ಮಣ್ಯ , ಪ್ರಾಂಶುಪಾಲರಾದ ಮಹೇಶ್‌ ನಿಟಿಲಾಪುರ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್‌ಶ್ಯಾನುಭೋಗ್‌, ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ದೇವಿಚರಣ್‌ ರೈ, ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ನರೇಂದ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ ಸ್ವಾಗತಿಸಿದರು.ಡಾ. ಶ್ರುತಿ ಎಂ.ಎಸ್‌ ಕಾರ್ಯಕ್ರಮವನ್ನುನಿರೂಪಿಸಿ, ವಂದಿಸಿದರು. ಉಪನ್ಯಾಸಕಿ ವಿದ್ಯಾ ಪಾರ್ವತಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here