ನೆಲ್ಯಾಡಿ: ಆಮುಂಜಗುತ್ತು ಬಾಲಕೃಷ್ಣ ಶೆಟ್ಟಿ-ಭಾಗೀರಥಿ ಶೆಟ್ಟಿ ದಂಪತಿ ವೈವಾಹಿಕ ಜೀವನದ ಸುವರ್ಣಮಹೋತ್ಸವ

0

ನೆಲ್ಯಾಡಿ; ಆಮುಂಜಗುತ್ತು ಬಾಲಕೃಷ್ಣ ಶೆಟ್ಟಿ ಹಾಗೂ ಕೋಡಂದೂರು ಅರಂತಾಡಿಗುತ್ತು ಭಾಗೀರಥಿ ಬಿ.ಶೆಟ್ಟಿ ಅವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸಂಭ್ರಮಾಚರಣೆ ಜೂ.16ರಂದು ನೆಲ್ಯಾಡಿ ಆಮುಂಜಗುತ್ತು ಮನೆಯಲ್ಲಿ ನಡೆಯಿತು.


ಸುವರ್ಣ ಮಹೋತ್ಸವ ಆಚರಿಸುತ್ತಿರುವ ಬಾಲಕೃಷ್ಣ ಶೆಟ್ಟಿ ಹಾಗೂ ಭಾಗೀರಥಿ ಶೆಟ್ಟಿ ದಂಪತಿ ಬೆಳಿಗ್ಗೆ ಕುಟುಂಬದ ದೈವ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಕುಟುಂಬಸ್ಥರು ದಂಪತಿಗೆ ಮದುರಂಗಿ ಶಾಸ್ತ್ರ ಮಾಡಿ ಮದುಮಕ್ಕಳಂತೆ ಶೃಂಗರಿಸಿ ವೇದಿಕೆಗೆ ಕರೆತಂದರು. ವೇದಿಕೆಯಲ್ಲಿ ದೀಪ ಬೆಳಗಿಸಿ ದಂಪತಿ ಪರಸ್ಪರ ಹಾರ ಬದಲಾಯಿಸಿಕೊಂಡರು. ಕೇಕ್ ಕಟ್ ಮಾಡಿ ಸಂಭ್ರಮಾಚರಿಸಲಾಯಿತು. ಬಾಲಕೃಷ್ಣ ಶೆಟ್ಟಿಯವರ ಬಾವ ವಿಶ್ವನಾಥ ರೈ ಕೊಡಂದೂರು ಅವರು ದಂಪತಿಯ ಕುರಿತು ಮಾತನಾಡಿ ಶುಭಹಾರೈಸಿದರು. ದಂಪತಿಯ ಕುಟುಂಬಸ್ಥರು, ಸ್ನೇಹಿತರು, ನೆಲ್ಯಾಡಿ ಜೆಸಿಐ ಅಧ್ಯಕ್ಷರು, ಸ್ತ್ರೀಶಕ್ತಿ, ಮಹಿಳಾಮಂಡಳಿ ಸದಸ್ಯೆಯರು, ಸಂಬಂಧಿಕರು ಸೇರಿದಂತೆ ಹಲವು ಗಣ್ಯರು ಆಗಮಿಸಿ ಬಾಲಕೃಷ್ಣ ಶೆಟ್ಟಿ ಹಾಗೂ ಭಾಗೀರಥಿ ಶೆಟ್ಟಿ ದಂಪತಿಗೆ ಶಾಲುಹಾಕಿ ಗೌರವಿಸಿ ಶುಭಹಾರೈಸಿದರು.


ಬಾಲಕೃಷ್ಣ ಶೆಟ್ಟಿ-ಭಾಗೀರಥಿ ದಂಪತಿಯ ಪುತ್ರಿ, ಅಂಗನವಾಡಿ ಕಾರ್ಯಕರ್ತೆ ಸಂಪಾವತಿ ಶೆಟ್ಟಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಪುತ್ರ ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಯಶೋಧರ ಶೆಟ್ಟಿ, ಸೊಸೆ ಶೀಲಾವತಿ ಶೆಟ್ಟಿ, ಅಳಿಯ ಬಾಲಕೃಷ್ಣ ಶೆಟ್ಟಿ ಪಟ್ಟೆಜಾಲು ನೆಲ್ಯಾಡಿ, ಮೊಮ್ಮಕ್ಕಳಾದ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ರೋಹಿತ್ ಶೆಟ್ಟಿ, ಮೋಹಿತ್ ಶೆಟ್ಟಿ, ಜೀವನ್ ಶೆಟ್ಟಿ, ಲಕ್ಷ್ಯ ಶೆಟ್ಟಿಯವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.


50 ವಿವಿಧ ಹಣ್ಣಿನ ಗಿಡ ವಿತರಣೆ:
ಬಾಲಕೃಷ್ಣ ಶೆಟ್ಟಿ ಹಾಗೂ ಭಾಗೀರಥಿ ಶೆಟ್ಟಿಯವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ನೀಲಂ ಮಾವು, ಕೆಂದಾಳಿ ತೆಂಗು, ಜಾಯಿಕಾಯಿ, ಲವಂಗ, ರಕ್ತ ಚಂದನ, ನೇರಳೆ, ಪುನರ್ಪುಳಿ ಸೇರಿದಂತೆ ವಿವಿಧ ಜಾತಿಯ 50 ಹಣ್ಣಿನ ಗಿಡಗಳನ್ನು ಮನೆಯವರು ಅತಿಥಿಗಳಿಗೆ ವಿತರಿಸಿದರು. ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ದಂಪತಿ ತೆಂಗಿನ ಸಸಿ ನೆಟ್ಟರು.

LEAVE A REPLY

Please enter your comment!
Please enter your name here