ಬೆಟ್ಟಂಪಾಡಿ ಪದವಿ ಕಾಲೇಜಿನ ಎನ್ನೆಸ್ಸೆಸ್ ವಾರ್ಷಿಕ ಚಟುವಟಿಕೆಗಳ ಮೌಲ್ಯಮಾಪನ

0

 ಕಾರ್ಯಗಳ ಯಶಸ್ವಿ ಅನುಷ್ಠಾನಕ್ಕೆ ಅನುಭವ ಮತ್ತು ಆಸಕ್ತಿ ಅತ್ಯಗತ್ಯ- ಲಕ್ಷ್ಮೀಕಾಂತ ರೈ ಅನಿಕೂಟೇಲ್
 
 ಪುತ್ತೂರು: ಯಾವುದೇ ಒಂದು ಕಾರ್ಯದ ಯಶಸ್ವಿ ಅನುಷ್ಠಾನಕ್ಕೆ ಆಸಕ್ತಿ ಮತ್ತು ಅನುಭವಗಳು ಅತ್ಯಗತ್ಯ. ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಶಿಕ್ಷಣ ಅಂಕಗಳಿಗೆ ಮಾತ್ರ ಸೀಮಿತವಾಗುತ್ತದೆ. ಜೀವನದ ಜಂಜಾಟಗಳ ಬಗೆಗೆ ಅರಿವಾಗಬೇಕಾದರೆ ಸಮಾಜದೊಂದಿಗೆ ಬೆರೆಯಬೇಕು. ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸಕ್ರಿಯವಾದ ಭಾಗವಹಿಸುವಿಕೆ ಸ್ವಯಂಸೇವಕರಲ್ಲಿ ಕಾರ್ಯಕ್ರಮಗಳ ಆಯೋಜನೆ, ಜವಾಬ್ದಾರಿಗಳ ನಿರ್ವಹಣೆ, ಸೇವಾ ಮನೋಭಾವ, ದೇಶಪ್ರೇಮ ಹಾಗೂ ಸಾಮಾಜಿಕ ಅರಿವುಗಳನ್ನು ಮೂಡಿಸುತ್ತದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ರೈ ಅನಿಕೂಟೇಲ್ ಹೇಳಿದರು.
 
ಅವರು ಸರಕಾರಿ ಪ್ರಥಮದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಅಂತಿಮ ಮೌಲ್ಯಮಾಪನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್ ಚಂದುಕೂಡ್ಲು ಮಾತನಾಡಿ ಎನ್ನೆಸ್ಸೆಸ್ ನ ವಾರ್ಷಿಕ ವಿಶೇಷ ಶಿಬಿರದಲ್ಲಿ ಸರಕಾರಿ ಶಾಲೆಯೊಂದರ ಅಭಿವೃದ್ಧಿಯಲ್ಲಿ ಸಹಕರಿಸಿದ ಸ್ವಯಂಸೇವಕರ ಕಾರ್ಯಗಳು ಪ್ರಶಂಸನೀಯವಾದುದು. ಇಂತಹ ಯೋಜನೆಗಳು ಸಾಮಾಜಿಕ ಬಂಧ ಹಾಗೂ ಜೀವನ ಪಾಠಗಳನ್ನು ಕಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾಲೇಜಿನ ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ಯೋಗೀಶ್ ಎಲ್ ಎನ್ ಮಾತನಾಡಿ ಸ್ವಯಂ ಸೇವಕರ ಪಾಲ್ಗೊಳ್ಳುವಿಕೆಯು ನಮ್ಮನ್ನು ಪ್ರೋತ್ಸಾಹಿಸಿ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾಡಿದೆ. ನಮ್ಮ ಎನ್ನೆಸ್ಸೆಸ್ ಘಟಕಗಳು ಈಗಾಗಲೇ ಒಂದು ರೀತಿಯ ಮಾನದಂಡವನ್ನು ಸ್ಥಾಪಿಸಿದ್ದು ಮುಂದಿನ ದಿನಗಳಲ್ಲಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಆದುದರಿಂದ ಸಮಾಜಕ್ಕೆ, ಈ ಕಾಲೇಜಿಗೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಏಳಿಗೆಗೆ ಪೂರಕವಾಗಿ ಕೆಲಸಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಸ್ತುತ ಕಿರಿಯ ಸ್ವಯಂ ಸೇವಕರು ಸಿದ್ದರಾಗುವಂತೆ ಕರೆ ನೀಡಿದರು.
 
ಯೋಜನಾಧಿಕಾರಿ ಡಾ.ಲೋಯ್ಡ್ ವಿಕ್ಕಿ ಡಿಸೋಜ ಮಾತನಾಡಿ ಯೋಜನೆಯ ನಿರ್ವಹಿಸುವಿಕೆಯ ಜವಾಬ್ಧಾರಿಯು ಅದ್ಭುತ ಅನುಭವಗಳನ್ನು ಕಲ್ಪಿಸಿಕೊಟ್ಟಿದೆ. ಸ್ವಯಂಸೇವಕರ ಹುರುಪು ಮತ್ತು ಎಲ್ಲರ ಸಹಕಾರ ವರ್ಷದುದ್ದಕ್ಕೂ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಪ್ರೇರೇಪಿಸಿತು ಎಂದರು.ಈ ಸಂದರ್ಭದಲ್ಲಿ ಎನ್ನೆಸ್ಸೆಸ್ ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸಹಕರಿಸಿದ ಶ್ರೀ ಶ್ರೀನಿವಾಸ ಭಟ್ ಚಂದುಕೂಡ್ಲುರವರನ್ನು ಗೌರವಿಸಲಾಯಿತು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ಸರಕಾರಿ ಕಾಲೇಜುಗಳು ವಿದ್ಯಾರ್ಥಿಗಳ ವಿಶೇಷ ಸಾಧನೆಗಳಿಂದ ಎಲ್ಲೆಡೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ.ಕಾಲೇಜಿನ ಎನ್ನೆಸ್ಸೆಸ್ ಘಟಕವು ಸಕ್ರಿಯವಾಗಿ ಕಾರ್ಯಕ್ರಮಗಳನ್ನೂ ಶ್ರಮದಾನವನ್ನು ನಡೆಸುತ್ತಾ ಬಂದಿದ್ದು ಸ್ವಯಂ ಸೇವಕರ ಸಾಧನೆಯನ್ನು ಅಭಿನಂದಿಸಿ ಶುಭ ಹಾರೈಸಿದರು.
 
ಘಟಕ ನಾಯಕಿ ಕೃತಿಕಾ ಎನ್ನೆಸ್ಸೆಸ್ ನ ವಾರ್ಷಿಕ ವರದಿಯನ್ನು ವಾಚಿಸಿದರು. ಕಾಲೇಜಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಏನ್ನೆಸ್ಸೆಸ್ ಯೋಜನಾಧಿಕಾರಿಗಳು, ಘಟಕ ನಾಯಕರುಗಳು, ಉಪನ್ಯಾಸಕರು, ಎನ್ನೆಸ್ಸೆಸ್ ಸ್ವಯಂಸೇವಕರು ಉಪಸ್ಥಿತರಿದ್ದರು. ಘಟಕ ನಾಯಕ ರಕ್ಷಣ್ ರೈ ಸ್ವಾಗತಿಸಿ ಪ್ರಜ್ವಲ್ ಆರ್ ಸಿ ವಂದಿಸಿದರು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here