ಶೇಖಮಲೆ: ಹೆದ್ದಾರಿ ಕಾಮಗಾರಿ ವೇಳೆ ತೋಡಿಗೆ ಮಣ್ಣು-ಮಳೆನೀರು ತೋಟಕ್ಕೆ ನುಗ್ಗುವ ಆತಂಕ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ಸಮೀಪದ ಶೇಖಮಲೆಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನ ಸೇತುವೆ ನಿರ್ಮಾಣ-ಹೆದ್ದಾರಿ ಕಾಮಗಾರಿಯ ವೇಳೆ ಪಕ್ಕದ ತೋಡಿನ ಬದಿಗೆ ಮಣ್ಣು ಸುರಿದಿರುವುದರಿಂದ ಮಳೆಗಾಲದಲ್ಲಿ ಮಳೆನೀರು ಪಕ್ಕದ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಹಾನಿಯಾಗುವ ಆತಂಕ ಎದುರಾಗಿದೆ.


ಶೇಖಮಲೆಯಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ಆ ಭಾಗದಲ್ಲಿ ಹೆದ್ದಾರಿಯನ್ನು ನೇರಗೊಳಿಸುವ ಕಾಮಗಾರಿ ನಡೆದಿದ್ದು, ಕಾಮಗಾರಿಯ ವೇಳೆ ಮಳೆನೀರು ಹರಿದು ಹೋಗುವ ಹೆದ್ದಾರಿ ಪಕ್ಕದ ತೋಡಿನ ಬದಿಗೆ ಮಣ್ಣು ಹಾಕಲಾಗಿದೆ. ತೋಡಿನ ಬದಿಗೆ ಸುರಿದ ಮಣ್ಣನ್ನು ಮಳೆಯ ನೀರು ಕೊಚ್ಚಿಕೊಂಡು ಬಂದು ಮಣ್ಣು ತೋಡನ್ನೇ ಆವರಿಸಿಕೊಂಡಿದೆ. ಇದರಿಂದಾಗಿ ತೋಡಿನ ಅಗಲ ಮತ್ತು ಗಾತ್ರ ಕಿರಿದಾಗಿದೆ. ಮಳೆಗಾಲದಲ್ಲಿ ಈ ತೋಡಿನಲ್ಲಿ ಮಳೆನೀರು ತುಂಬಿ ಹರಿಯುತ್ತಿದ್ದು, ತೋಡಿನ ಬದಿಗೆ ಮಣ್ಣು ಹಾಕಿರುವ ಕಾರಣ ಮಳೆನೀರಿನ ಹರಿವಿಗೆ ತಡೆಯಾಗಿ ನೀರು ಪಕ್ಕದ ತೋಟಗಳಿಗೆ ನುಗ್ಗಲಿದೆ ಎಂಬುವುದು ಅಲ್ಲಿನ ಕೃಷಿಕರ ಆತಂಕ.

ಶೇಖಮಲೆ ಮಸೀದಿಯ ಮಾಜಿ ಅಧ್ಯಕ್ಷ ಎಸ್.ಎಂ ಬಸೀರ್ ಹಾಜಿ, ಚಂದ್ರಶೇಖರ್ ರೈ ಅರಿಯಡ್ಕ, ಗಣೇಶ್ ರೈ ಅರಿಯಡ್ಕ ಅವರ ಕೃಷಿ ತೋಟದ ಬದಿಯಲ್ಲೇ ತೋಡು ಇದ್ದು, ಮಳೆಗಾಲದಲ್ಲಿ ನೀರು ತೋಟಕ್ಕೆ ಬಂದು ಕೃಷಿ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಶೇಖಮಲೆ ವ್ಯಾಪ್ತಿಯಲ್ಲಿ ಕಾಮಗಾರಿಯ ವೇಳೆ ಹೆದ್ದಾರಿ ಬದಿಯಲ್ಲೇ ಮಣ್ಣು ಹಾಕಲಾಗಿದ್ದು, ಸೂಕ್ತ ತಡೆಗೋಡೆ ನಿರ್ಮಿಸುವ ಕೆಲಸವೂ ನಡೆದಿಲ್ಲ. ಇದರಿಂದಾಗಿ ಈ ಭಾಗದಲ್ಲಿ ಅಪಘಾತಗಳು ನಡೆಯುವ ಸಾಧ್ಯತೆಗಳು ಇದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುವುದು ಅಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

LEAVE A REPLY

Please enter your comment!
Please enter your name here