ನರಿಮೊಗರು ವಲಯ ಕಾಂಗ್ರೆಸ್ ವತಿಯಿಂದ ಪ್ರಕಾಶ್ ಪುರುಷರಕಟ್ಟೆಯವರ ಶ್ರದ್ಧಾಂಜಲಿ ಸಭೆ

0

ಪ್ರಕಾಶ್ ಅಗಲುವಿಕೆ ಪಕ್ಷಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟ-ಅಶೋಕ್ ರೈ

ಪುತ್ತೂರು: ಸಮಾಜದಲ್ಲಿ ಯಾವ ರೀತಿ ಬದುಕಬೇಕೆಂಬುವುದನ್ನು ಪ್ರಕಾಶ್ ಪುರುಷರಕಟ್ಟೆಯವರು ತೋರಿಸಿಕೊಟ್ಟಿದ್ದು ನಾವು ಜೀವನದಲ್ಲಿ ಮಾಡಿರುವ ಸತ್ಕಾರ್ಯಗಳು ಮಾತ್ರ ಶಾಶ್ವತ ಎಂಬುವುದನ್ನು ಪ್ರಕಾಶ್ ಅವರ ನಿಧನದ ಬಳಿಕ ಎಲ್ಲರೂ ಗಮನಿಸಿರಬಹುದು. ಒಬ್ಬ ಒಳ್ಳೆಯ ಸಂಘಟಕ, ನಾಯಕನನ್ನು ಈ ಸಮಾಜ ಕಳೆದುಕೊಂಡಿದೆ. ಪ್ರಕಾಶ್ ಅವರ ಅಗಲುವಿಕೆ ಪಕ್ಷಕ್ಕೂ, ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಜೂ.19ರಂದು ನರಿಮೊಗರು ವಲಯ ಕಾಂಗ್ರೆಸ್ ವತಿಯಿಂದ ಪುರುಷರಕಟ್ಟೆಯಲ್ಲಿರುವ ನರಿಮೊಗರು ಸಿ.ಎ ಬ್ಯಾಂಕ್ ಸಭಾಭವನದಲ್ಲಿ ನಡೆದ ಪ್ರಕಾಶ್ ಪುರುಷರಕಟ್ಟೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.ಪ್ರಕಾಶ್ ಅವರ ನಿಧನ ನಮಗೆಲ್ಲರಿಗೂ ಬೇಸರ ತಂದಿದೆ. ಅವರು ಅದೆಷ್ಟು ಜನರ ಸ್ನೇಹ ಸಂಪಾದಿಸಿದ್ದರು ಎಂಬುವುದಕ್ಕೆ ಅವರ ಅಂತಿಮ ಯಾತ್ರೆಯೇ ಸಾಕ್ಷಿ. ನನ್ನ ಜೊತೆ ಅನೇಕ ವರ್ಷಗಳಿಂದ ಸಂಪರ್ಕ ಹೊಂದಿದ್ದ ಪ್ರಕಾಶ್ ಅವರು ಟ್ರಸ್ಟ್‌ನ ಸೌಲಭ್ಯಗಳನ್ನು ಅವರ ಭಾಗದ ಜನರಿಗೆ ಒದಗಿಸಿಕೊಡುತ್ತಿದ್ದರು. ಚುನಾವಣೆ ಸಂದರ್ಭ ಅವರು ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದಿದ್ದು ನಾನು ಶಾಸಕನಾದ ಬಳಿಕ ವಾರದಲ್ಲಿ 2-3 ಬಾರಿ ಕರೆ ಮಾಡಿ ಜನರ ಬೇಡಿಕೆ, ಸ್ಥಳೀಯ ಸಮಸ್ಯೆ ಬಗ್ಗೆ ಹೇಳಿಕೊಂಡು ಅದನ್ನು ಪರಿಹರಿಸಲು ಚರ್ಚೆ ನಡೆಸುತ್ತಿದ್ದರು ಎಂದು ಶಾಸಕರು ಸ್ಮರಿಸಿಕೊಂಡರು.
ಹೋದ ಜೀವ ಮರಳಿ ಪಡೆಯಲು ಯಾರಿಗೂ ಸಾಧ್ಯವಿಲ್ಲ, ಆದರೆ ನಾವು ಮಾಡಿರುವ ಒಳ್ಳೆಯ ಕಾರ್ಯಗಳನ್ನು ಸಮಾಜ ನೆನಪಿನಲ್ಲಿಟ್ಟಿರುತ್ತದೆ ಎಂದ ಶಾಸಕರು, ಪ್ರಕಾಶ್ ಅವರ ಕುಟುಂಬದ ಜೊತೆ ನಾವಿದ್ದೇವೆ, ಪ್ರಕಾಶ್ ಅವರ ಮನೆಯವರು ಯಾವುದೇ ಸಂದರ್ಭದಲ್ಲೂ ನನ್ನನ್ನು ಸಂಪರ್ಕಿಸಿದರೆ ಸ್ಪಂದಿಸಲು ನಾನು ಸಿದ್ದನಿದ್ದೇನೆ ಎಂದು ಹೇಳಿದರು.


ಪ್ರಕಾಶ್ ಅವರ ನೆನಪು ಶಾಶ್ವತವಾಗಿ ಇರಲಿದೆ-ಎಂ.ಬಿ ವಿಶ್ವನಾಥ ರೈ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ ಪ್ರಕಾಶ್ ಪುರುಷರಕಟ್ಟೆಯವರ ನಿಧನದ ಸುದ್ದಿಯನ್ನು ಈ ಭಾಗದ ನಮ್ಮ ಕಾರ್ಯಕರ್ತ ಸಲೀಂ ಪಾಪು ಅವರು ನನಗೆ ಕರೆ ಮಾಡಿ ತಿಳಿಸಿದಾಗ ನನಗೆ ನಂಬಲು ಸಾಧ್ಯವೇ ಆಗಿಲ್ಲ, ಅಷ್ಟೊಂದು ಆರೋಗ್ಯವಾಗಿದ್ದ ಪ್ರಕಾಶ್ ಅವರ ನಿಧನ ವಾರ್ತೆ ಕೇಳಿ ಒಂದು ಕ್ಷಣ ಶಾಕ್ ಆಗಿತ್ತು ಎಂದು ಹೇಳಿದರು. ಒಬ್ಬ ವ್ಯಕ್ತಿ ಸತ್ತಾಗ ಸಮಾಜ ಕಣ್ಣೀರಿಟ್ಟರೆ ಆ ವ್ಯಕ್ತಿಯ ಬದುಕು ಸಾರ್ಥಕ ಎನ್ನಲಾಗುತ್ತದೆ, ಅದನ್ನು ನೋಡಿದರೆ ಪ್ರಕಾಶ್ ಅವರ ಅಗಲುವಿಕೆಗೆ ಇಡೀ ಸಮಾಜ ಕಣ್ಣೀರಿಟ್ಟಿದೆ. ಪಕ್ಷ ಸಂಘಟನೆಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದ ಪ್ರಕಾಶ್ ಅವರು ನಾವು ಹೇಳಿದ ಯಾವುದೇ ವಿಚಾರವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು, ಅವರ ನೆನಪು ನಮ್ಮಲ್ಲಿ ಶಾಶ್ವತವಾಗಿ ಇರಲಿದೆ ಎಂದು ಅವರು ಹೇಳಿದರು.


ಅಮೂಲ್ಯ ರತ್ನವೊಂದನ್ನು ಕಳೆದುಕೊಂಡಿದ್ದೇವೆ-ಹೇಮನಾಥ ಶೆಟ್ಟಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಸಮಾಜದಲ್ಲಿ ಅಪಾರ ಜನರ ಪ್ರೀತಿ ಸಂಪಾದಿಸಿ, ಎಲ್ಲರನ್ನೂ ನಮ್ಮವರಾಗಿ ಕಾಣುತ್ತಿದ್ದ ಅಮೂಲ್ಯ ರತ್ನವೊಂದನ್ನು ನಾವು ಕಳೆದುಕೊಂಡಿದ್ದೇವೆ. ಪ್ರಕಾಶ್ ಯಾರು ಎನ್ನುವುದು ಅವರ ಅಂತಿಮ ಯಾತ್ರೆ ಸಂದರ್ಭ ಸೇರಿದ ಜನರನ್ನು ನೋಡಿದರೆ ಎಂತವರಿಗೂ ತಿಳಿಯುತ್ತಿತ್ತು ಎಂದು ಹೇಳಿದರು.
ನನಗೆ ಬಹಳ ವರ್ಷಗಳಿಂದ ಪ್ರಕಾಶ್ ಅವರ ಪರಿಚಯ. ಅವರು ಸಂಘಟಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೆ, ಅವರಲ್ಲಿ ಒಳ್ಳೆಯ ನಾಯಕತ್ವ ಮತ್ತು ಸಂಘಟನಾತ್ಮಕ ಶಕ್ತಿ ಇತ್ತು, ಉನ್ನತ ಮಟ್ಟಕ್ಕೆ ತಲುಪುವ ಅವಕಾಶ ಅವರಿಗಿತ್ತು, ಆದರೆ ಅವರು ಬೇಗನೇ ನಮ್ಮಿಂದ ಅಗಲಿದ್ದಾರೆ, ಇದು ನಮಗೆಲ್ಲಾ ತುಂಬಲಾರದ ನಷ್ಟ ಎಂದು ಹೇಳಿದರು. ಪ್ರಕಾಶ್ ಅವರು ಇನ್ನು ನಮಗೆ ಸಿಗಲು ಸಾಧ್ಯವಿಲ್ಲ, ಎಲ್ಲರ ಅವಸ್ಥೆಯೂ ಅಷ್ಟೇ, ಇದ್ದಷ್ಟು ದಿನ ಒಳ್ಳೆಯವರಾಗಿ ಜೀವನ ನಡೆಸಿದರೆ ಅದು ಸಾರ್ಥಕ ಬದುಕು ಎಂದು ಹೇಮನಾಥ ಶೆಟ್ಟಿ ಹೇಳಿದರು.


ಸಮಾಜ ಸೇವೆಗಾಗಿ ರಾಜಕೀಯದಲ್ಲಿದ್ದರು-ಡಾ.ರಾಜಾರಾಮ್:
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ ಮಾತನಾಡಿ ಪುರುಷರಕಟ್ಟೆಯ ಪ್ರಕಾಶವೊಂದು ನಂದಿ ಹೋಯಿತು. ರಾಜಕೀಯ ಲಾಭದ ಬದಲು ಸಮಾಜ ಸೇವೆಗಾಗಿ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲರನ್ನು ಒಟ್ಟಿಗೆ ಸೇರಿಸಿಕೊಂಡು ಮುನ್ನಡೆಯುತ್ತಿದ್ದ ಅವರ ಗುಣವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಕಾಶ್ ಅವರು ಕಂಡ ಕನಸನ್ನು ನನಸು ಮಾಡುವುದು ಮತ್ತು ಅವರು ಕೆಲಸ ಕಾರ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ ಎಂದ ಅವರು ಇಂದು ಇದ್ದವರು ನಾಳೆ ಇದ್ದೇವಾ ಎನ್ನುವ ಗ್ಯಾರಂಟಿ ನಮಗಿಲ್ಲ, ಇರುವಷ್ಟು ಸಮಯ ಪರಸ್ಪರ ಪ್ರೀತಿ ಹಂಚಿಕೊಂಡು ಸಹಬಾಳ್ವೆಯಿಂದ ಜೀವನ ನಡೆಸೋಣ ಎಂದು ಹೇಳಿದರು. ಕೋವಿಡ್ ನಂತರ ಹೃದಯ, ಕಿಡ್ನಿ ಮೊದಲಾದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ ಎನ್ನುವ ಯಕ್ಷ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದ್ದು ವೈದ್ಯ ಲೋಕ ಕೂಡಾ ಈ ಬಗ್ಗೆ ಚರ್ಚೆಯಲ್ಲಿದೆ ಎಂದು ಡಾ.ರಾಜಾರಾಮ್ ಕೆ.ಬಿ ಹೇಳಿದರು.


ಪ್ರಕಾಶ್ ಅಗಲುವಿಕೆ ಬಹಳ ದುಃಖ ತಂದಿದೆ-ಬಾಬು ಶೆಟ್ಟಿ:
ಪ್ರಸ್ತಾವನೆಗೈದ ನರಿಮೊಗರು ಗ್ರಾ.ಪಂ ಸದಸ್ಯ ಬಾಬು ಶೆಟ್ಟಿ ವೀರಮಂಗಲ ಮಾತನಾಡಿ ನಮ್ಮ ಒಡನಾಡಿಯಾಗಿದ್ದ ಪ್ರಕಾಶ್ ಅವರು ನಮ್ಮನ್ನಗಲಿದ್ದು ಬಹಳ ದುಖಃ ತಂದಿದೆ, ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆಂದು ಯಾರೂ ಊಹಿಸಿರಲಿಲ್ಲ, ಒಬ್ಬ ಉತ್ತಮ ಕ್ರೀಡಾ ಪಟು, ಸಂಘಟಕ, ಆತ್ಮೀಯ ಸ್ನೇಹಿತನನ್ನು ನಾವೆಲ್ಲಾ ಕಳೆದುಕೊಂಡಿದ್ದೇವೆ ಎಂದು ಹೇಳಿದರು. 2020-21ರಲ್ಲಿ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಅವರು ಪಕ್ಷದ ಎಲ್ಲ ಕೆಲಸಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದರು. ಬಡವರ ಬಗ್ಗೆಯೂ ಅವರಿಗೆ ಕಾಳಜಿಯಿತ್ತು, ಇನ್ನೇನಿದ್ದರೂ ಅವರ ನೆನಪು ಮಾತ್ರ, ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಮನೆಯವರಿಗೆ ನೀಡಲಿ ಎಂದು ಅವರು ಪ್ರಾರ್ಥಿಸಿದರು.


ಸಮರ್ಥ ನಾಯಕನನ್ನು ಕಳೆದುಕೊಂಡಿದ್ದೇವೆ-ಜುನೈದ್ ಪಿ.ಕೆ:
ಯಂಗ್ ಬ್ರಿಗೇಡ್ ರಾಜ್ಯಾಧ್ಯಕ್ಷ ಜುನೈದ್ ಪಿ.ಕೆ ಮಾತನಾಡಿ ಪ್ರಕಾಶ ಎನ್ನುವ ಸಮರ್ಥ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಜನರ, ಆತ್ಮೀಯರ ಸಮಸ್ಯೆ ನೋವು ನಲಿವುಗಳಿಗೆ ಸ್ಪಂದಿಸುವುದೇ ಅವರ ಧರ್ಮವಾಗಿತ್ತು. ಅವರ ನಿಧನ ನರಿಮೊಗರಿನ ಪ್ರತೀ ಮನೆಯಲ್ಲೂ ಮೋಡ ಕವಿದ ವಾತಾವರಣ ಸೃಷ್ಟಿಸಿತ್ತು ಎಂದು ಹೇಳಿದರು. ಸ್ಥಳೀಯವಾಗಿ ಹಲವಾರು ಮಂದಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿದ್ದ ಅವರು ಎಲ್ಲರೊಂದಿಗೂ, ಎಲ್ಲ ಪಕ್ಷದವರೊಂದಿಗೂ ಅನ್ಯೋನ್ಯವಾಗಿದ್ದರು, ಆದರೆ ಸೈದ್ದಾಂತಿಕ ವಿಚಾರಗಳು ಬಂದಾಗ ಯಾರೇ ಆದರೂ ನೇರವಾಗಿ ಮಾತನಾಡುತ್ತಿದ್ದರು ಎಂದ ಅವರು ಪಕ್ಷ ಸಂಘಟನೆಯಲ್ಲಿ ಮತ್ತು ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ಪ್ರಕಾಶ್ ಅವರ ಕೊಡುಗೆ ಅನನ್ಯ ಎಂದು ಹೇಳಿದರು. ಇತ್ತೀಚೆಗೆ ನರಿಮೊಗರಿನಲ್ಲಿ ಏರ್ಪಡಿಸಿದ್ದ ಟಿಪಿಎಲ್ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಕಾಶ್ ಅವರು ಮಾಡಿರುವ ಭಾಷಣವೊಂದು ಭಾರೀ ವೈರಲ್ ಆಗಿದ್ದು ಸಮಾಜಕ್ಕೆ ಮೌಲ್ಯಯುತವಾದ ಸಂದೇಶವನ್ನು ಅವರು ಆ ಭಾಷಣದಲ್ಲಿ ಮಾಡಿದ್ದರು, ಅವರು ನಮ್ಮಿಂದ ಮರೆಯಾದರೂ ಅವರ ನೆನಪು ನಮ್ಮಿಂದ ಮರೆಯಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.


ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ-ಅಮಳ ರಾಮಚಂದ್ರ:
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಮಾತನಾಡಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಭೇದಭಾವವಿಲ್ಲದ ಸ್ನೇಹಿತನನ್ನು ನಾವು ಕಳೆದುಕೊಂಡಿದ್ದು ಶರಣರ ಗುಣ ಮರಣದಲ್ಲಿ ನೋಡು ಎಂಬಂತೆ ಪ್ರಕಾಶ್ ಅವರು ಏನು ಎಂಬುವುದು ಅವರ ಮರಣ ನಂತರ ಇಡೀ ಜಿಲ್ಲೆಗೆ ಗೊತ್ತಾಗಿದೆ ಎಂದು ಹೇಳಿದರು. ರಕ್ತದಾನದ ಜಾಗೃತಿಯಾಗಿ ಫೆಸ್‌ಬುಕ್ ಖಾತೆಯಲ್ಲಿ ತನ್ನ ಹೆಸರಿನ ಮುಂದೆ ರಕ್ತದ ಗುಂಪನ್ನು ಹಾಕಿಕೊಂಡಿದ್ದ ವಿಶ್ವದ ಏಕೈಕ ವ್ಯಕ್ತಿಯೆಂದರೆ ಅದು ಪ್ರಕಾಶ್ ಪುರುಷರಕಟ್ಟೆ ಮಾತ್ರ, ಅಂತಹ ಸಮಾಜ ಸೇವಕ, ಪಕ್ಷ ಸಂಘಟಕನನ್ನು ಕಳೆದುಕೊಂಡಿರುವುದು ಬಹಳ ನೋವು ತಂದಿದೆ ಎಂದು ಅವರು ಹೇಳಿದರು.


ಪ್ರಕಾಶ್ ಕುಟುಂಬದೊಂದಿಗೆ ನಾವು ನಿಲ್ಲಬೇಕಾಗಿದೆ-ಕೃಷ್ಣಪ್ರಸಾದ್ ಆಳ್ವ:
ಭೂ ನ್ಯಾಯ ಮಂಡಳಿ ಸದಸ್ಯ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಪ್ರಕಾಶ್ ಅವರು ಒಬ್ಬ ಅತ್ಯುತ್ತಮ ಸಂಘಟಕರಾಗಿದ್ದು ಪಕ್ಷ ಸಂಘಟನೆಗಾಗಿ ಅವರು ಬಹಳ ಶ್ರಮ ಪಡುತ್ತಿದ್ದರು. ಕಾರ್ಯಕರ್ತರ ವಿಚಾರಗಳನ್ನು ನಾಯಕರ ಗಮನಕ್ಕೆ ತರುವ ಮೂಲಕ ಕಾಯಕರ್ತರ ಜೊತೆ ಗಟ್ಟಿಯಾಗಿ ನಿಲ್ಲುತ್ತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಹೇಳಿದರು. ಪ್ರಕಾಶ್ ಅವರು ನನ್ನ ಆತ್ಮೀಯರಾಗಿದ್ದು ಒಳ್ಳೆಯ ಗುಣ ಅವರಲ್ಲಿತ್ತು. ಅವರ ಮೃತದೇಹದ ಅಂತಿಮ ಯಾತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ಅಂತಹ ಅಂತಿಮ ಯಾತ್ರೆಯನ್ನೇ ನೋಡಿರಲಿಲ್ಲ, ನಮ್ಮನ್ನಗಲಿರುವ ಪ್ರಕಾಶ್ ಅವರ ಮನೆಯವರ, ಕುಟುಂಬದ ಜೊತೆ ನಾವು ನಿಲ್ಲಬೇಕಾಗಿದೆ, ಅವರ ಕುಟುಂಬದ ಕಣ್ಣೀರೊರೆಸುವುದು ನಮ್ಮ ಬಾಧ್ಯತೆಯಾಗಿದೆ ಎಂದು ಅವರು ಹೇಳಿದರು.


ಸಭೆಯಲ್ಲಿ ಪತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ ನರಿಮೊಗರು, ನರಿಮೊಗರು ಗ್ರಾ.ಪಂ ಸದಸ್ಯ ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ಸಿ.ಎ ಬ್ಯಾಂಕ್ ನಿರ್ದೇಶಕ ಪರಮೇಶ್ವರ ಭಂಡಾರಿ, ನಗರಸಭೆ ಮಾಜಿ ಸದಸ್ಯ ಅನ್ವರ್ ಖಾಸಿಂ, ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್, ಮಾಜಿ ಸದಸ್ಯ ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಆರ್ಯಾಪು ಗ್ರಾ.ಪಂ ಮಾಜಿ ಸದಸ್ಯ ರಮೇಶ್ ರೈ ಡಿಂಬ್ರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹಬೀಬ್ ಕಣ್ಣೂರು, ನರಿಮೊಗರು ಗ್ರಾ.ಪಂ ಮಾಜಿ ಅಧ್ಯಕ್ಷ ಇಸಾಕ್ ಮುಕ್ವೆ, ನರಿಮೊಗರು ವಲಯ ಕಾಂಗ್ರೆಸ್ ಉಪಾಧ್ಯಕ್ಷ ಇಲ್ಯಾಸ್ ಮಣಿಯ, ಪ್ರಧಾನ ಕಾರ್ಯದರ್ಶಿ ಅಝೀಝ್ ನೆರಿಗೇರಿ, ನಿಕಟಪೂರ್ವ ಅಧ್ಯಕ್ಷ ಬೇಬಿ ಜಾನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಪದ್ಮನಾಭ ಪೂಜಾರಿ, ನರಿಮೊಗರು ಗ್ರಾ.ಪಂ ಸದಸ್ಯರಾದ ಸುಧಿರ್ ಶೆಟ್ಟಿ, ಕುದ್ರೆಪ್ಪಾಡಿ, ನಾಗಮ್ಮ ಬಾಲಕೃಷ್ಣ, ಆಶಾ ಸಚ್ಚೀಂದ್ರ, ನರಿಮೊಗರು ಸಿ.ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಮಧುಕರ ಎಚ್, ಮಾಜಿ ನಿರ್ದೇಶಕರಾದ ಕುಶಾಲಪ್ಪ ಗೌಡ, ಲತಾ ಮೋಹನ್ ಗೌಡ ಪಾದೆ, ನರಿಮೊಗರು ಗ್ರಾಮ ಬೂತ್ ಅಧ್ಯಕ್ಷ ಸಲೀಂ ಮುಕ್ವೆ, ಬೂತ್ ಅಧ್ಯಕ್ಷ ವಸಂತ ಪೂಜಾರಿ ದೋಳ, ನರಿಮೊಗರು ಗ್ರಾ.ಪಂ ಮಾಜಿ ಸದಸ್ಯ ಕೆ ನಾಗರಾಜ ದೋಳ, ನರಿಮೊಗರು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹರಿಣಾಕ್ಷಿ ಬೊಳ್ಳಡ್ಕ, ಶಿಬರ ಬೂತ್ ಅಧ್ಯಕ್ಷ ಚೆನ್ನಪ್ಪ ಗೌಡ ಕೋಲಾಡಿ, ನರಿಮೊಗರು ವಲಯ ಕಾಂಗ್ರೆಸ್ ಕಾರ್ಯದರ್ಶಿ ಝುಬೈರ್ ಪಿ.ಕೆ, ಯಂಗ್ ಬ್ರಿಗೇಡ್ ಉಪಾಧ್ಯಕ್ಷ ರಾಘವೇಂದ್ರ ನಾಯಕ್, ನರಿಮೊಗರು ವಲಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ರಫೀಕ್ ಮಣಿಯ, ಕರಾವಳಿ ರೈಸ್ ಆಂಡ್ ಆಯಿಲ್ ಮಿಲ್‌ನ ಮಾಲಕ ಶರೀಫ್ ಪಿ.ಕೆ, ವೀರಮಂಗಲ ಬೂತ್ ಅಧ್ಯಕ್ಷ ಅಶೋಕ್ ರೈ, ನರಿಮೊಗರು ವಲಯ ಯೂತ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಕಿಶನ್ ಸರೋಳಿ, ಯುವ ಕಾಂಗ್ರೆಸ್ ಪುತ್ತೂರು ತಾಲೂಕು ಮಾಜಿ ಉಪಾಧ್ಯಕ್ಷ ಸಲೀಂ ಪಾಪು, ಜಮಾಲ್ ಎಂ.ಜಿ ರೋಡ್, ದಿನೇಶ್ ಕರ್ಕೇರಾ ಕೋಲಾಡಿ, ಜಮಾಲ್ ಎಂ.ಎ, ಮಂಜುನಾಥ ಶೇಖ ಶಿಬರ, ಜಯದೀಪ್ ಆನಡ್ಕ, ಶರೀಫ್ ಅಳಕ್ಕೆ, ಹುಸೈನ್ ಬಾಂಬೆ ಮುಕ್ವೆ, ಅಶ್ರಫ್ ಎಂ.ಜಿ ರೋಡ್ ಹಾಗೂ ಪ್ರಕಾಶ್ ಪುರುಷರಕಟ್ಟೆಯವರ ಸಹೋದರ ಸತೀಶ್ ಪುರುಷರಕಟ್ಟೆ ಮತ್ತಿತರ ಹಲವಾರು ಮಂದಿ ಉಪಸ್ಥಿತರಿದ್ದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ ಅವರು ದೀಪ ಪ್ರಜ್ವಲನೆ ಮಾಡಿದರು. ಸೇರಿದ್ದವರು ಪ್ರಕಾಶ್ ಪುರುಷರಕಟ್ಟೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here