ಮನಮೋಹನ್‌ರವರ ಜೇನು ಕೃಷಿ ಅದ್ಬುತ ಸಾಧನೆಯಾಗಿದೆ-ಶಾಸಕ ಅಶೋಕ್ ರೈ
ಪುತ್ತೂರು:ಪ್ರಾಮಾಣಿಕತೆ ಮತ್ತು ಕೆಲಸ ಮಾಡುವ ಇಚ್ಚಾಶಕ್ತಿ ಇದ್ದಲ್ಲಿ ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದು ಎಂಬುದಕ್ಕೆ ಬೆಟ್ಟಂಪಾಡಿ ಅರಂಬ್ಯ ನಿವಾಸಿ ಮನಮೋಹನ್ ರವರ ಜೇನು ಕೃಷಿ ಸಾಕ್ಷಿಯಾಗಿದ್ದು, ಇವರು ಈ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ಬುತವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪ್ರಶಸ್ತಿ ವಿಜೇತ ಪ್ರಗತಿಪರ ಜೇನು ಕೃಷಿಕ ಮನಮೋಹನ್‌ರವರನ್ನು ಸನ್ಮಾನಿಸಿ ಮಾತನಾಡಿದರು. ಮನಮೋಹನ್‌ರವರು ಜೇನು ಕೃಷಿಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ ಎಂದು ಅನೇಕರು ನನ್ನ ಬಳಿ ಹೇಳಿಕೊಂಡಿದ್ದರು. ಇವರನ್ನು ಕಂಡು ಇವರ ಸಾಧನೆಯನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಇವರ ಮನೆಗೇ ಬಂದು ಸನ್ಮಾನ ಮಾಡಿದ್ದು ನನಗೆ ಅತೀವ ಸಂತಸವನ್ನು ತಂದಿದೆ ಎಂದು ಹೇಳಿದರು.
ಪುತ್ತೂರಿನಲ್ಲಿ ಉದ್ಯಮ ಮತ್ತು ಉದ್ಯಮಿಗಳು ಬೆಳೆಯಬೇಕು ಎಂಬ ಕನಸು ನನ್ನಲ್ಲಿದೆ, ಈ ಕಾರಣಕ್ಕಾಗಿ ಅನೇಕ ಉದ್ಯಮಗಳನ್ನು ಪುತ್ತೂರಿಗೆ ತರಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದೇನೆ. ಜೇನು ಕೃಷಿಯಲ್ಲಿ ನನ್ನ ಕ್ಷೇತ್ರದ ಯುವಕ ಇಷ್ಟೊಂದು ದೊಡ್ಡ ಸಾಧನೆ ಮಾಡಿದ್ದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಜೇನು ಕೃಷಿ ಬೆಳೆಸುವಲ್ಲಿ ಇವರಿಗೆ ಏನು ಸಹಕಾರ ಬೇಕೋ ಅದನ್ನು ಸರಕಾರದ ವತಿಯಿಂದ ನೀಡಲಾಗುವುದು, ಈಗಾಗಲೇ ಅನೇಕ ಮಂದಿಗೆ ಜೇನು ಕೃಷಿ ತರಬೇತಿಯನ್ನು ನೀಡಿರುವ ಇವರು ಹಲವು ಮಂದಿಗೆ ಉದ್ಯೋಗವನ್ನು ಕೊಡಿಸಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.
ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ ಮಾತನಾಡಿ ನಮ್ಮೂರಿನ ಯುವಕ ಜೇನು ಕೃಷಿಯಲ್ಲಿ ದೊಡ್ಡ ಸಾಧನೆಯನ್ನು ಮಾಡಿದ್ದು ಮಾತ್ರವಲ್ಲದೆ ಅನೇಕ ಮಂದಿಗೆ ಉದ್ಯೋಗವನ್ನು ಕೊಡಿಸಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಜೇನಿಗೆ ಬೇಡಿಕೆ ಇದ್ದು ಜೇನು ತುಪ್ಪದ ಜೊತೆಗೆ ಜೇನಿನ ವಿವಿಧ ಉತ್ಪನ್ನಗಳನ್ನು ಪರಿಚಯ ಮಾಡುವ ಮೂಲಕ ಜೇನು ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಇವರ ಸಾಧನೆಯನ್ನು ಕಂಡು ಶಾಸಕರೇ ಸ್ವಯಂ ಆಗಿ ಇವರ ಮನೆಗೇ ಬಂದು ಸನ್ಮಾನ ಮಾಡಿದ್ದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.
ಭೂ ನ್ಯಾಯ ಮಂಡಳಿ ಸದಸ್ಯ ಕೆ ಪಿ ಆಳ್ವರವರು ಮಾತನಾಡಿ ಪ್ರಾಮಾಣಿಕತೆ , ಕೆಲಸದಲ್ಲಿ ಶ್ರದ್ದೆ ಮತ್ತು ಆಸಕ್ತಿ ಇದ್ದಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದನ್ನು ಮನಮೋಹನ್‌ರವರು ತೋರಿಸಿಕೊಟ್ಟಿದ್ದಾರೆ. ಚಿಕ್ಕ ಪ್ರಾಯದಲ್ಲೇ ಜೇನು ಕೃಷಿ ಪ್ರಾರಂಭ ಮಾಡಿರುವ ಇವರು ಇಂದು ಸುಮಾರು 4000 ಕ್ಕೂ ಮಿಕ್ಕಿ ಜೇನು ಪೆಟ್ಟಿಗೆಗಳ ಒಡೆಯನಾಗಿದ್ದಾರೆ. ಹಲವಾರು ಮಂದಿ ಇವರ ಬಳಿ ತರಬೇತಿ ಪಡೆದು ಸ್ವ ಉದ್ಯೋಗವನ್ನು ಪ್ರಾರಂಭ ಮಾಡಿದ್ದು ಅನೇಕ ಕುಟುಮಬಗಳಿಗೆ ಆಶ್ರಯದಾತರಾಗಿದ್ದಾರೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ದಯಾನಂದ ರೈ ಕೊರ್ಮಂಡ, ಗ್ರಾಪಂ ಸದಸ್ಯರಾದ ಮೊಯಿದುಕುಂಞಿ, ಸುಮಲತಾ, ಅಬೂಬಕ್ಕರ್ ಕೊರಿಂಗಿಲ, ಸದಾಶಿವ ರೈ ಚೆಲ್ಯಡ್ಕ, ಕಾರ್ತಿಕ್ ಉಪ್ಪಳಿಗೆ, ಪ್ರವೀಣ್ ರೈ ಪಂಜೊಟ್ಟು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.