ಶಿಕ್ಷಕರ ಕೊರತೆಯಿಂದ ಮುಚ್ಚಿದ್ದ ಬೆಳಿಯೂರುಕಟ್ಟೆ ಅನುದಾನಿತ ಹಿ.ಪ್ರಾ. ಶಾಲೆ ಸರಕಾರಿ ಶಾಲೆಯಾಗಿ ಮುಂದುವರಿಸಿ ಶಿಕ್ಷಣ ಇಲಾಖೆ ಆದೇಶ

0

ವರದಿ: ಶರತ್ ಕುಮಾರ್ ಪಾರ

ಪುತ್ತೂರು:ಶಿಕ್ಷಕರ ಕೊರತೆಯ ಕಾರಣದಿಂದ ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ, ಶೂನ್ಯ ದಾಖಲಾತಿಯಿಂದ ಮುಚ್ಚಿರುವ ಮಂಗಳೂರು ಉತ್ತರ ವಲಯದ ಮುಕ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಳಿಯೂರುಕಟ್ಟೆ ಅನುದಾನಿತ ಶಾಲೆಯ ಕಟ್ಟಡಕ್ಕೆ ಡೈಸ್ ಕೋಡ್ ಸಹಿತ ಸ್ಥಳಾಂತರಿಸಿ 2024-25ನೇ ಸಾಲಿನಿಂದ ಶಾಲೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖಾ ಆಯುಕ್ತರಾದ ಬಿ.ಬಿ.ಕಾವೇರಿಯವರು ದ.ಕ.ಜಿಲ್ಲಾ ಉಪನಿರ್ದೇಶಕರಿಗೆ ಆದೇಶಿಸಿದ್ದಾರೆ.


ಬೆಳಿಯೂರುಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ(ಡೈಸ್ ಕೋಡ್ 29240401003)ಯನ್ನು ಶೂನ್ಯ ಶಿಕ್ಷಕರ ಕೊರತೆಯಿಂದ ನಡೆಸಲು ಸಾಧ್ಯವಾಗದ ಕಾರಣ 2023-24ನೇ ಸಾಲಿನಿಂದ ಈ ಶಾಲೆಯನ್ನು ಮುಚ್ಚಿ ಅಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರಿ ಶಾಲೆಯನ್ನಾಗಿ ಪರಿವರ್ತಿಸಲು ಅನುಮತಿಸುವಂತೆ ದ.ಕ.ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು.ಈ ಪ್ರಸ್ತಾವನೆಯ ಮೇರೆಗೆ ಶಿಕ್ಷಣ ಇಲಾಖಾ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ.


ಅನುದಾನಿತ ಶಾಲೆಯ ಇತಿಹಾಸ:
ಬೆಳಿಯೂರುಕಟ್ಟೆಯಲ್ಲಿ 1948ರಲ್ಲಿ ಊರ ಹಿರಿಯರ ಹಾಗೂ ವಿದ್ಯಾಭಿಮಾನಿಗಳ ಸಹಕಾರದಲ್ಲಿ ಗ್ರಾಮೀಣ ಪ್ರದೇಶದಲ್ಲಿ 1ರಿಂದ 7ನೇ ತರಗತಿವರೆಗೆ ಶಾಲೆ ಆರಂಭಗೊAಡಿತ್ತು.11 ಮಂದಿ ಸದಸ್ಯರನ್ನೊಳಗೊಂಡ ‘ಶಾಲಾ ಸ್ಥಾಪಕರ ಸಮಿತಿ’ ಎಂಬ ಆಡಳಿತ ಮಂಡಳಿ ವತಿಯಿಂದ ಶಾಲೆ ನಡೆಸಲ್ಪಡುತ್ತಿತ್ತು.ಬಲ್ನಾಡು ಹಾಗೂ ಪುಣಚ ಗ್ರಾಮಗಳಲ್ಲಿ ಆ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದ್ದದ್ದು ಇದೊಂದೇ ಶಾಲೆ.5.80 ಎಕರೆ ಜಾಗ ಹೊಂದಿರುವ ಈ ಶಾಲೆ ಶೌಚಾಲಯ, ಅಗತ್ಯ ಕೊಠಡಿಗಳು, ಆಟದ ಮೈದಾನ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಅಲ್ಲದೆ ಈ ಶಾಲೆಗೆ ಇತ್ತೀಚೆಗೆ ಯೂನಿಯನ್ ಬ್ಯಾಂಕ್ ವತಿಯಿಂದ ಆವರಣ ಗೋಡೆ ಹಾಗೂ ವಿದ್ಯಾರ್ಥಿಗಳಿಗೆ ಬೆಂಚು ಮತ್ತು ಡೆಸ್ಕ್ಗಳನ್ನು ನೀಡಲಾಗಿತ್ತು.ಸುಮಾರು 400ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿದ್ದ ಈ ಶಾಲೆಯಲ್ಲಿ ಕ್ರಮೇಣ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿತ್ತು.ಈ ಶಾಲೆಯಲ್ಲಿ 8 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದರು.ತದನಂತರ ಈ ಶಾಲೆಗೆ ಯಾವುದೇ ಖಾಯಂ ಶಿಕ್ಷಕರ ನೇಮಕವಾಗಿರಲಿಲ್ಲ.


ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲ:
ಶಾಲೆಯ ಒಂದೊಂದೇ ಶಿಕ್ಷಕರು ನಿವೃತ್ತಿಯಾದ ಬಳಿಕ ಸರಕಾರ ಇಲ್ಲಿಗೆ ಹೊಸ ಶಿಕ್ಷಕರನ್ನು ನೇಮಕ ಮಾಡಲಿಲ್ಲ.ಆದ ಕಾರಣ ಎಲ್ಲಾ ಶಿಕ್ಷಕರು ನಿವೃತ್ತಿ ಹೊಂದಿ ಕಳೆದ 6 ವರ್ಷದಿಂದ ಮುಖ್ಯ ಶಿಕ್ಷಕರಾಗಿದ್ದ ಜಯರಾಮ ಶೆಟ್ಟಿ ಓರ್ವರೇ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರು ನೇಮಕಗೊಂಡಿದ್ದರು.ಮುಖ್ಯ ಶಿಕ್ಷಕರಾಗಿದ್ದ ಜಯರಾಮ ಶೆಟ್ಟಿಯವರು 2023ರ ಮೇ31ರಂದು ನಿವೃತ್ತಿಗೊಂಡರು.ಆ ಸಂದರ್ಭದಲ್ಲಿ ಶಾಲೆಯಲ್ಲಿ 45 ವಿದ್ಯಾರ್ಥಿಗಳು ಕಲಿಯುತ್ತಿದ್ದರು.ಮುಖ್ಯ ಶಿಕ್ಷಕರು ನಿವೃತ್ತಿಗೊಂಡ ಮೇಲೆ ಶಾಲೆ ಮುಚ್ಚುವ ಹಂತಕ್ಕೆ ಬಂತು.ಶಾಲೆಯಲ್ಲಿ 45 ವಿದ್ಯಾರ್ಥಿಗಳಿದ್ದರೂ ಶಿಕ್ಷಕರಿಲ್ಲದೆ ಶಾಲೆ ಮುಚ್ಚುವ ಸಂದರ್ಭ ಎದುರಾಯಿತು.


ಮುಖ್ಯಶಿಕ್ಷಕರ ಪ್ರಯತ್ನದಿಂದ ಶಾಲೆ ಉಳಿಯಿತು:
ಮುಚ್ಚುವ ಹಂತಕ್ಕೆ ಬಂದ ಶಾಲೆಯನ್ನು ಪುನಃ ಆರಂಭಿಸುವಲ್ಲಿ ನಿವೃತ್ತಿ ಹೊಂದಿರುವ ಮುಖ್ಯಶಿಕ್ಷಕ ಜಯರಾಮ ಶೆಟ್ಟಿಯವರ ಪ್ರಯತ್ನ ಅಮೂಲ್ಯವಾದುದು.ತಾನು ನಿವೃತ್ತಿಗೊಂಡು ಶಾಲೆ ಕೂಡ ಮುಚ್ಚಿತು ಎಂಬ ಮಾತು ಸಾರ್ವಜನಿಕರಲ್ಲಿ ಬರಬಾರದು ಎಂಬ ದೃಷ್ಟಿಯಿಂದ ಇವರು ಕಳೆದ ಒಂದು ವರ್ಷದಿಂದ ಮುಖ್ಯಶಿಕ್ಷಕನಾಗಿ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.ತಾನು ನಿವೃತ್ತಿಗೊಂಡರೂ ಶಾಲೆಯ ಮಕ್ಕಳು ಅನಾಥರಾಗಬಾರದು ಎಂಬ ಕಾರಣಕ್ಕೆ, ಯಾವುದೇ ಸಂಬಳ ಪಡೆಯದೇ ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಲ್ಲದೆ ಮೂವರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಇವರಿಗೆ ಆಡಳಿತ ಮಂಡಳಿ ವತಿಯಿಂದ ಸಂಬಳ ನೀಡಲಾಗುತ್ತಿದೆ.ಪ್ರಸ್ತುತ ಆಡಳಿತ ಮಂಡಳಿಯಲ್ಲಿ ಎ.ಎಂ.ಚAದ್ರಹಾಸ ರೈ ಅಧ್ಯಕ್ಷರಾಗಿ, ರಾಧಾಕೃಷ್ಣ ರೈ ಅಗರ್ತಬೈಲು ಸಂಚಾಲಕರಾಗಿ ಹಾಗೂ ಮುಖ್ಯ ಶಿಕ್ಷಕರಾಗಿರುವ ಕೆ.ಜಯರಾಮ ಶೆಟ್ಟಿಯವರು ಕಾರ್ಯದರ್ಶಿಯಾಗಿ ಹಾಗೂ 6 ಮಂದಿ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.


ಸರಕಾರಿ ಶಾಲೆ ಆರಂಭಿಸಲು ಪ್ರಸ್ತಾವನೆ:
45 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಈ ಶಾಲೆಯ 3-4 ಕಿ.ಮೀ. ಅಂತರದಲ್ಲಿ ಬೇರೆ ಯಾವುದೇ ಶಾಲೆಗಳು ಇರುವುದಿಲ್ಲ.ಅಲ್ಲದೆ ದೂರದ ಶಾಲೆಗೆ ಈ ವಿದ್ಯಾರ್ಥಿಗಳನ್ನು ದಾಖಲು ಮಾಡಿದಲ್ಲಿ ಅಲ್ಲಿಗೆ ಹೋಗಿ ಬರಲು ಕಷ್ಟವಾಗುತ್ತದೆ.ಈ ಶಾಲೆಯು ಅಗತ್ಯ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿರುವುದರಿAದ ಸದರಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಶಾಲೆಯಲ್ಲಿ 2023-24ನೇ ಸಾಲಿನಿಂದ ಸರಕಾರಿ ಶಾಲೆಯನ್ನು ಆರಂಭಿಸಲು ಆಡಳಿತ ಮಂಡಳಿ ವತಿಯಿಂದ ಅನುಮತಿ ಕೋರಲಾಗಿತ್ತು.ಆಡಳಿತ ಮಂಡಳಿಯ ಕೋರಿಕೆಯಂತೆ ಶಿಕ್ಷಕರ ಕೊರತೆಯಿಂದ ಈ ಅನುದಾನಿತ ಶಾಲೆಯನ್ನು ನಿಯಮಾನುಸಾರ ಮುಚ್ಚಿ ಸದರಿ ಶಾಲೆಯ ಎಲ್ಲಾ ಚರ ಮತ್ತು ಸ್ಥಿರಾಸ್ತಿಗಳನ್ನು ಸರಕಾರದ ವಶಕ್ಕೆ ಪಡೆದು, 2018-19ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಿಂದ ತಾತ್ಕಾಲಿಕವಾಗಿ ಮುಚ್ಚಿರುವ ಮಂಗಳೂರು ಉತ್ತರ ವಲಯದ ಮುಕ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಡೈಸ್ ಸಂಖ್ಯೆ 29240308802)ಯನ್ನು ಬೆಳಿಯೂರುಕಟ್ಟೆ ಅನುದಾನಿತ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಿ 2024-25ನೇ ಸಾಲಿನಿಂದ ಶಾಲೆ ನಡೆಸಲು ಅನುಮತಿ ನೀಡುವಂತೆ ದ.ಕ.ಜಿಲ್ಲಾ ಉಪನಿರ್ದೇಶಕರು ದಾಖಲೆ ಸಹಿತ ಪ್ರಸ್ತಾವನೆ ಸಲ್ಲಿಸಿದ್ದರು.


ಶಿಕ್ಷಣ ಇಲಾಖೆಯಿಂದ ಆದೇಶ:
ಈ ಬಗ್ಗೆ ಆದೇಶ ಹೊರಡಿಸಿದ ಶಿಕ್ಷಣ ಇಲಾಖೆ, 2024-25ನೇ ಶೈಕ್ಷಣಿಕ ಸಾಲಿನಿಂದ ಸದರಿ ಅನುದಾನಿತ ಶಾಲೆಯನ್ನು ಮುಚ್ಚಲು ಕರ್ನಾಟಕ ಶಿಕ್ಷಣ ಕಾಯ್ದೆ 1983ರಂತೆ ಉನಿರ್ದೇಶಕರು ನಿಯಮಾನುಸಾರ ಸೂಕ್ತ ಕ್ರಮವಹಿಸಲು ಹಾಗೂ ನಂತರ ಸದರಿ ಶಾಲೆಯ ಮಾನ್ಯತೆ ಮತ್ತು ಅನುದಾನನ್ನು ಹಿಂಪಡೆಯಲು ಅಗತ್ಯ ಕ್ರಮಗಳನ್ನು ವಹಿಸಬೇಕು. 2018-19ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಿಂದ ಮುಚ್ಚಿರುವ ಮಂಗಳೂರು ಉತ್ತರ ವಲಯದ ಮುಕ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಿಳಿಯೂರುಕಟ್ಟೆ ಅನುದಾನಿತ ಶಾಲೆಯ ಕಟ್ಟಡಕ್ಕೆ ಡೈಸ್ ಕೋಡ್ ಸಹಿತ ಸ್ಥಳಾಂತರಿಸಿ 2024-25ನೇ ಸಾಲಿನಿಂದ ಶಾಲೆ ನಡೆಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸಬೇಕು. ಈ ಕುರಿತು ಕೆಲವು ನಿಬಂಧನೆಗಳನ್ನು ಸಂಬಂಧಿಸಿದವರು ಪಾಲಿಸಬೇಕು. ಈ ಅನುದಾನಿತ ಶಾಲೆಯ ಎಲ್ಲಾ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಸದರಿ ಶಾಲಾ ಆಡಳಿತ ಮಂಡಳಿಯ ಕೋರಿಕೆಯಂತೆ ಸರಕಾರಕ್ಕೆ/ ಶಾಲಾ ಶಿಕ್ಷಣ ಇಲಾಖೆಗೆ/ ಸದರಿ ಸರಕಾರಿ ಶಾಲೆಗೆ ದಾನವಾಗಿ ಪಡೆದುಕೊಂಡು ನೋಂದಣಿ ಮಾಡಿಸಿ ಖಾತೆ ಮಾಡಿಸಿ ಸಂರಕ್ಷಿಸಿಕೊAಡು ಹೋಗಲು ಹಾಗೂ ಶೈಕ್ಷಣಿಕ ಉದ್ದೇಶಗಳಿಗ ಮಾತ್ರ ಬಳಸಿಕೊಳ್ಳಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ಕೂಡಲೇ ವಹಿಸುವಂತೆ ದ.ಕ.ಜಿಲ್ಲಾ ಉಪನಿರ್ದೇಶಕರಿಗೆ ತಿಳಿಸಿದ್ದಾರೆ.

ಶಾಲೆ ಅಭಿವೃದ್ಧಿಯಾದರೆ ಊರೇ ಅಭಿವೃದ್ಧಿ
ಆಂಗ್ಲ ಮಾಧ್ಯಮ ವ್ಯಾಮೋಹದಿಂದ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿತ್ತು. ಸರಕಾರ ಕೂಡ ಆಂಗ್ಲ ಮಾಧ್ಯವನ್ನು ಸರಕಾರಿ ಶಾಲೆಯಲ್ಲಿ ಆರಂಭಿಸಬೇಕು ಶಾಲೆ ಅಭಿವೃದ್ಧಿ ಆದರೆ ಊರೇ ಅಭಿವೃದ್ಧಿಯಾಗುತ್ತದೆ-
| ರಾಧಾಕೃಷ್ಣ ರೈ ಅಗರ್ತಬೈಲು,ಸಂಚಾಲಕರು

ಶಿಕ್ಷಣಾಧಿಕಾರಿ, ಉಪನಿರ್ದೇಶಕರು ಸಹಕಾರ ನೀಡಿದ್ದಾರೆ
ನಾನು ಶಾಲೆಯಿಂದ ನಿವೃತ್ತಿಯಾದಾಗ ಶಾಲೆ ಮುಚ್ಚಿ ಹೋಗಬಾರದು ಎಂಬ ಕಾರಣಕ್ಕೆ ಪ್ರಯತ್ನ ಪಟ್ಟಿದ್ದೇನೆ.ಇವರು ನಿವೃತ್ತಿಗೊಂಡು ಶಾಲೆಯನ್ನು ಮುಚ್ಚಿದರು ಎಂಬ ಅಪವಾದ ನನ್ನ ಮೇಲೆ ಬರಬಾರದು.ಆದ್ದರಿಂದ ಶಾಲೆಯನ್ನು ಪುನರಾರಂಭ ಮಾಡಿದ್ದೇವೆ.ಸರಕಾರಿ ಶಾಲೆಯಾಗಿ ಪರಿವರ್ತನೆಯಾಗಲು ಪುತ್ತೂರು ಕ್ಷೇತ್ರ ಶಿಕ್ಷಣಾಽಕಾರಿ ಹಾಗೂ ದ.ಕ.ಜಿಲ್ಲಾ ಉಪನಿರ್ದೇಶಕರು ಉತ್ತಮ ಸಹಕಾರ ನೀಡಿದ್ದಾರೆ
-ಕೆ.ಜಯರಾಮ ಶೆಟ್ಟಿ,ಮುಖ್ಯ ಶಿಕ್ಷಕರು

LEAVE A REPLY

Please enter your comment!
Please enter your name here