ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ವಿಶ್ವ ಯೋಗ ದಿನಾಚರಣೆ, ಗಿಡ ನೆಡುವ ಕಾರ್ಯಕ್ರಮ

0

ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಮಾತ್ರ ಪರಿಸರ ಬೆಳೆಯುತ್ತದೆ-ಸುಬ್ಬಯ್ಯ ನಾಯ್ಕ್
ಗಿಡಗಳ ರಕ್ಷಣೆಗೆ ಬೇಲಿ ಕೊಡುಗೆಯ ಭರವಸೆ-ಪಂಜಿಗುಡ್ಡೆ ಈಶ್ವರ ಭಟ್

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಸಹಯೋಗದೊಂದಿಗೆ ಯೋಗಕೇಂದ್ರ ಪುತ್ತೂರು ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ಜೂ.21ರಂದು ವಿಶ್ವ ಯೋಗ ದಿನವನ್ನು ಆಚರಣೆ ಮಾಡಲಾಯಿತು.


ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮೂಹಿಕ ಯೋಗಾಸನ ಅಭ್ಯಾಸ ಮಾಡಲಾಯಿತು. ಸುದಾನ ಶಾಲೆ ಹಾಗೂ ಕಾಣಿಯೂರು ಪ್ರಗತಿ ಶಾಲೆಯ ವಿದ್ಯಾರ್ಥಿಗಳು ಉದ್ಘಾಟಿಸಿದರು. ಯೋಗ ಕೇಂದ್ರ ಪುತ್ತೂರು ಕಾರ್ಯದರ್ಶಿ ಪ್ರಸಾದ್ ಪಾಣಾಜೆಯವರು ಮಾರ್ಗದರ್ಶನ ನೀಡಿದರು. ಯೋಗಕೇಂದ್ರ ಪುತ್ತೂರು ಅಧ್ಯಕ್ಷ, ವಕೀಲರಾದ ಶ್ರೀಗಿರೀಶ ಮಳಿಯವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಬಳಿಕ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಸುತ್ತ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಚಾಲನೆ ನೀಡಿದರು. ಹಲಸು, ಹೆಬ್ಬಲಸು, ರೆಂಜೆ ಹೀಗೆ ಹಲವು ಜಾತಿಯ ಒಟ್ಟು 60 ಗಿಡಗಳನ್ನು ನೆಡಲಾಯಿತು.


ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಮಾತ್ರ ಪರಿಸರ ಬೆಳೆಯುತ್ತದೆ:
ಯೋಗ ಕಾರ್ಯಕ್ರಮದ ಬಳಿಕ ಗಿಡ ನೆಡುವ ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ ಅವರು ಮಾತನಾಡಿ ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಕೇವಲ ಅರಣ್ಯ ಇಲಾಖೆ ಮಾತ್ರ ಭಾಗವಹಿಸುವುದಲ್ಲ. ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಮಾತ್ರ ಪರಿಸರ ಉಜ್ವಲವಾಗಿ ಬೆಳೆಯುತ್ತದೆ. ಇಲಾಖೆಯೊಂದಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನಮ್ಮಲ್ಲಿರುವ ವಿವಿಧ ನರ್ಸರಿಗಳಲ್ಲಿ ಗಿಡಗಳನ್ನು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಅದನ್ನು ಉಪಯೋಗಿಸಿಕೊಂಡು ಎಲ್ಲರೂ ಪರಿಸರ ಬೆಳೆಸಲು ಸಹಕಾರ ನೀಡಬೇಕು ಎಂದು ಹೇಳಿದರು.


ಗಿಡಗಳ ರಕ್ಷಣೆಗೆ ಬೇಲಿ ಕೊಡುಗೆಯ ಭರವಸೆ:
ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ನಾನು ಕೂಡ ಓರ್ವ ಕೃಷಿಕ. ಇಂದು ನಾವು ಪ್ರಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ನೂರು ವರ್ಷ ಬಾಳಿದ ಮರ ಇನ್ನೂ ನೂರು ವರ್ಷಕ್ಕೆ ಉಪಯೋಗಕ್ಕೆ ಬರುತ್ತದೆ. ಆದರೆ ನೂರು ವರ್ಷ ಬದುಕಿದ ಮನುಷ್ಯ ಮೂರೇ ದಿನದಲ್ಲಿ ಮಣ್ಣಾಗುತ್ತೇವೆ. ಯೋಗ ಕೇಂದ್ರದ ಅಧ್ಯಕ್ಷ ಶ್ರೀಗಿರೀಶ ಮಳಿಯವರೇ ಖುದ್ದು ತೆರಳಿ ನರ್ಸರಿಯಿಂದ ಗಿಡಗಳನ್ನು ಆರಿಸಿ ತಂದಿದ್ದಾರೆ. ಇಂದು ನೆಟ್ಟ ಗಿಡ ಮುಂದಿನ ಪೀಳಿಗೆಗೆ ಫಲ ನೀಡುತ್ತದೆ. ಈಗ ನೆಟ್ಟ ಗಿಡಗಳನ್ನು ಉಳಿಸುವ ಕೆಲಸವನ್ನು ದೇವಸ್ಥಾನದ ವತಿಯಿಂದ ಮಾಡಬೇಕು. ಈ ಗಿಡಗಳಿಗೆ ಬೇಲಿಯ ವ್ಯವಸ್ಥೆ ಆಗಬೇಕಿದ್ದರೆ ಬನ್ನೂರು ರೈತರ ಸೇವಾ ಸಹಕಾರಿ ಸಂಘದಿಂದ ಸಹಾಯ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್, ಪುತ್ತೂರು ವಲಯ ಅರಣ್ಯ ಇಲಾಖೆಯ ಡೆಪ್ಯುಟಿ ರೇಂಜರ್ ಉಲ್ಲಾಸ್, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಸಂಚಾಲಕ ಮಧುಸೂದನ್ ನಾಯಕ್, ಯೋಗಕೇಂದ್ರದ ಕಾರ್ಯದರ್ಶಿ ಪ್ರಸಾದ್ ಪಾಣಾಜೆ, ಕೋಶಾಧಿಕಾರಿ ಹರಿಕೃಷ್ಣ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ. ಯೋಗಕೇಂದ್ರದ ಸದಸ್ಯರಾದ ರಾಮಚಂದ್ರ ಭಟ್, ಮಂಜುಳಾ ಗಿರೀಶ್ ಮಳಿ, ನ್ಯಾಯವಾದಿ ರಾಜನಾರಾಯಣ ಮಳಿ, ಹಿರಿಯ ಪತ್ರಕರ್ತ ಅಮೃತ್ ಮಲ್ಲ, ಮಹಾಲಿಂಗೇಶ್ವರ ದೇವಸ್ಥಾನ ಕಚೇರಿ ಸಿಬ್ಬಂದಿ ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು. ದೇವಸ್ಥಾನದ ಚಾಕ್ರಿಯವರಾದ ರವಿ, ಶರತ್ ಕುಮಾರ್, ಆನಂದ, ರಾಜೇಶ್, ಗಿರೀಶ್ ಸಹಕರಿಸಿದರು. ಯೋಗಕೇಂದ್ರದ ಅಧ್ಯಕ್ಷ, ವಕೀಲರಾದ ಶ್ರೀಗಿರೀಶ ಮಳಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here