ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮಕ್ಕೆ ಪುನರಪಿ ಲಗ್ಗೆ ಇಟ್ಟಿರುವ ಕಾಡಾನೆಯು ಶುಕ್ರವಾರದಂದು ತನಗೆ ಬೇಕಾದ ಹಲಸಿನಹಣ್ಣನ್ನು ತಿಂದು ಕೃಷಿ ಕೃತಾವಳಿಗೆ ಹಾನಿಯನ್ನುಂಟು ಮಾಡದೆ ಶಾಂತವಾಗಿ ನಿರ್ಗಮಿಸಿದೆ.
ಬಂದಾರು ಗ್ರಾಮದ ಡ್ಯಾಮ್ ಬಳಿಯ ದಿವಂಗತ ನಾಣ್ಯಪ್ಪ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಯು ಕೃಷಿಕರ ಬವಣೆಯನ್ನು ಅರಿತಂತೆ ವರ್ತಿಸಿದ್ದು, ತೋಟದಲ್ಲಿನ ಮರದಲ್ಲಿದ್ದ ಹಲಸಿನ ಹಣ್ಣನ್ನು ಮಾತ್ರ ತಿಂದು ನೀರಕಟ್ಟೆ ಪರಿಸರಕ್ಕೆ ಸಂಚರಿಸಿದೆ.
ಗುರುವಾರ ನಸುಕಿನಲ್ಲಿ ಓಟೆಚ್ಚಾರು ಬಳಿಯ ನಾಗಳಿಕೆ ಎಂಬಲ್ಲಿ ಮಹೇಶ್ ಎಂಬವರ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿತ್ತು. ಒಟ್ಟಾರೆ ಬಂದಾರು ಗ್ರಾಮದಲ್ಲಿಯೇ ಅಲೆಯುತ್ತಿರುವ ಕಾಡಾನೆಯಿಂದ ಗ್ರಾಮಸ್ಥರು ಸಹಜ ಆತಂಕಕ್ಕೆ ಒಳಗಾಗಿದ್ದಾರೆ.