ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ನದಿಯ ಹಳೇ ಸೇತುವೆಯಲ್ಲಿ ಅಳವಡಿಸಲಾಗಿದ್ದ ಬಿ ಎಸ್ ಎನ್ ಎಲ್ ಸಂಸ್ಥೆಯ ತಾಮ್ರದ ಕೇಬಲ್ ಗಳ ಪೈಕಿ ಒಂದಷ್ಟು ಪ್ರಮಾಣದ ಕೇಬಲ್ ಕಳ್ಳರ ಪಾಲಾದ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಲ್ಲೇ ಎಚ್ಚೆತ್ತ ಬಿಎಸ್‌ಎನ್‌ಎಲ್ ಇಲಾಖಾಧಿಕಾರಿಗಳು ಸೇತುವೆಯಲ್ಲಿದ್ದ ಕೇಬಲ್ ಗಳನ್ನು ತೆರವುಗೊಳಿಸಿದ ಬಗ್ಗೆ ವರದಿಯಾಗಿದೆ.
ಬಿ ಎಸ್ ಎನ್ ಎಲ್ ಸಂಸ್ಥೆಯು ಈ ಹಿಂದೆ ಒದಗಿಸುತ್ತಿದ್ದ ಟೆಲಿಕಾಂ ಸಂವಹನ ಸೇವೆಗಳಿಗೆ ತಾಮ್ರದ ಕೇಬಲ್ ಗಳನ್ನು ಬಳಕೆ ಮಾಡುತ್ತಿದ್ದು, ಈ ಕಾರಣಕ್ಕೆ ಭೂಮಿಯಲ್ಲಿ ಅಂತರ್ಗತ ಕೇಬಲ್ ಅಳವಡಿಕೆಯ ಕಾರ್ಯಗಳು ನಡೆದಿದ್ದವು. ನದಿಯನ್ನು ಹಾದು ಹೋಗುವ ಸಮಯದಲ್ಲಿ ಅಲ್ಲಿನ ಸೇತುವೆಯ ಮೂಲಕ ಕೇಬಲ್ ಅಳವಡಿಕೆ ಮಾಡಲಾಗುತ್ತಿತ್ತು. ತಾಮ್ರದ ಕೇಬಲ್ ಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಲಭಿಸುತ್ತಿದ್ದ ಕಾರಣ ಸೇತುವೆಯಲ್ಲಿ ಅಳವಡಿಸಲಾಗುತ್ತಿದ್ದ ಕೇಬಲ್ ಗಳು ಪದೇ ಪದೇ ಕಳ್ಳರ ಪಾಲಾಗುತ್ತಿತ್ತು. ಈ ಕಾರಣಕ್ಕೆ ಕೇಬಲ್ ಮೇಲೆ ಸಿಮೆಂಟ್ ಕಾಂಕ್ರೀಟ್ ಹಾಕಿ ಕೇಬಲ್ ಗಳನ್ನು ರಕ್ಷಿಸಲಾಗುತ್ತಿತ್ತು.
ಇದೀಗ ಸಂಸ್ಥೆಯು ಪೈಬರ್ ಕೇಬಲ್ ಸೇವೆಗೆ ಒತ್ತು ನೀಡಿದ್ದ ಕಾರಣ , ತಾಮ್ರದ ಕೇಬಲ್ ಬಳಕೆ ನಿಂತು ಹೋಯಿತು. ಇದರ ಸುಳಿವು ಪಡೆದ ಕಳ್ಳರು ಸೇತುವೆಯಲ್ಲಿನ ಸಿಮೆಂಟ್ ಕಾಂಕ್ರೀಟ್ ಒಡೆದು ಅದರೊಳಗಿದ್ದ ತಾಮ್ರದ ಕೇಬಲ್ ಗಳನ್ನು ಕದಿಯಲು ಪ್ರಾರಂಭಿಸಿದ್ದರು. ಈ ಬಗ್ಗೆ ಪತ್ರಿಕಾ ವರದಿ ಪ್ರಕಟವಾದ ಬೆನ್ನಿಗೆಯೇ ಎಚ್ಚೆತ್ತ ಇಲಾಖಾಧಿಕಾರಿಗಳು ಶುಕ್ರವಾರದಂದು ಸೇತುವೆಯಲ್ಲಿ ಉಳಿಕೆಯಾದ ಕೇಬಲ್ ಗಳನ್ನು ತೆರವುಗೊಳಿಸಿ ರಕ್ಷಿಸಿದರು.