ಪಾಂಗಳಾಯಿ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

0

ಪುತ್ತೂರು:ಪುತ್ತೂರಿನ ಶೈಕ್ಷಣಿಕ ಕ್ಷೇತ್ರದ ಇತಿಹಾಸದಲ್ಲಿ ಶೈಕ್ಷಣಿಕವಾಗಿ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮುಂಚೂಣಿ ಸಂಸ್ಥೆಯಾದ ದರ್ಬೆ ಪಾಂಗಳಾಯಿಯ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಂಫದ ಮಹಾಸಭೆಯು ಜೂ.22ರಂದು ಶಾಲಾ ಸಭಾಂಗಣದಲ್ಲಿ ನೆರವೇರಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೋ. ಸೆವ್ರಿನ್ ಪಿಂಟೋ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪೋಷಕರು ಮತ್ತು ಶಿಕ್ಷಕರು ಎರಡು ಕಂಬಗಳಿದ್ದಂತೆ. ಎರಡು ಕಂಬಗಳಲ್ಲಿ ಒಂದು ಅಲ್ಲಾಡಿದರೂ ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿ. ಆ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗಬೇಕು. ಮಕ್ಕಳ ಶೈಕ್ಷಣಿಕ ಪಯಣ ಅತೀ ಅಮೂಲ್ಯ ಈ ಸಂದರ್ಭದಲ್ಲಿ ವೈಯಕ್ತಿಕ ಮೊಬೈಲ್ ಅನಿವಾರ್ಯತೆ ಇದೆಯೇ? ಇದ್ದರೆ ಆಗುವ ಅನಾಹುತಗಳ ಬಗ್ಗೆ ಪೋಷಕರು ಗಂಭೀರ ಆಲೋಚಿಸುವ ಅಗತ್ಯವಿದೆ ಎಂದರು. ಬೆಥನಿ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ನಮ್ಮ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಲ್ಲಿರುವ ಶಿಸ್ತು ಬದ್ದ ಜೀವನ ಶೈಲಿ ಇತರರಿಗೆ ಅನುಕರಣೀಯ ಎಂದು ಬೆಥನಿ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಡಾ.ಎಡ್ವಿಡ್ ಸಂತಾನ್ ಡಿ’ಸೋಜ ಮಾತನಾಡಿ, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರಂತೆ ಪೋಷಕರ ಜವಾಬ್ದಾರಿ ಹೆಚ್ಚಾಗಿದ್ದು ಮಕ್ಕಳು ಕೇಳುವ ಪ್ರತಿ ಪ್ರಶ್ನೆಗೆ ಉತ್ತರಿಸುವ ಕನಿಷ್ಠ ಸೌಜನ್ಯ ನಮ್ಮಲ್ಲಿದ್ದರೆ, ನಮ್ಮ ಮಕ್ಕಳು ನಮ್ಮ ಮಾತನ್ನು ಕೇಳುವ ಮಕ್ಕಳಾಗಿ ಬೆಳೆಯುತ್ತಾರೆ. ಹಾಗಾಗಿ ಮಕ್ಕಳ ಭಾವನೆಗಳಿಗೆ ಬೆಲೆ ಇರಲಿ ಎಂದರು.


ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಭಗಿನಿ ಪ್ರಶಾಂತಿ ಬಿ.ಎಸ್. ಮಾತನಾಡಿ, 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99.21 ಫಲಿತಾಂಶ ಬರುವಲ್ಲಿ ಪ್ರಮುಖ ಪಾತ್ರವಹಿಸಿದ ಮುಖ್ಯ ಶಿಕ್ಷಕಿ, ಶಿಕ್ಷಕ-ಶಿಕ್ಷಕಿಯರು ಹಾಗೂ ಸಹಕರಿಸಿದ ಪೋಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.


ಅಭಿನಂದನೆ:
2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು(97.6% )ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದ ವೃದ್ಧಿ ರೈ ಯವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ವೃದ್ಧಿಯ ತಂದೆ ಪೆರ್ನೆ ಶ್ರೀರಾಮ ಪದವಿ ಪೂರ್ವ ಕಾಲೇಜಿನ ಶೇಖರ್ ರೈ ಉಪಸ್ಥಿತರಿದ್ದರು. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 45 ವಿದ್ಯಾರ್ಥಿಗಳನ್ನು ಗೌರವದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.


ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷೆ ಆಶಾ ನಾಯಕ್ ಹಾಗೂ ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಭಗಿನಿ ಶಾಂತಿ ಆಗ್ನೇಸ್ ಶಾಲಾ ಶೈಕ್ಷಣಿಕ ಮಾಹಿತಿ ಹಾಗೂ ಗತವರ್ಷದ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಯ ಬಗ್ಗೆ ವರದಿ ನೀಡಿದರು. ಶಿಕ್ಷಕಿಯರಾದ ಚಂದ್ರಾವತಿ ಸ್ವಾಗತಿಸಿ, ಬೃಂದಾ ಕೆ.ಎಂ ವರದಿ ವಾಚಿಸಿದರು. ಸೌಮ್ಯ ವಂದಿಸಿದರು. ಬೃಂದಾ ಕೆ. ಎಂ, ಪವಿತ್ರ ವಿ ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ಬಳಿಕ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ ರಘುನಾಥ ರೈ ಹಾಗೂ ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷರಾಗಿ ಸುನೀತಾ ದಲ್ಮೆದಾ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here