ಮಾಡಾವು: ವಾಹನದಲ್ಲಿ ಬಂದವರು ಶಾಲಾ ಮಕ್ಕಳಿಗೆ ಹಲಸಿನ ಹಣ್ಣು ನೀಡಿದ ವಿಚಾರ-ವಾಹನವನ್ನು ಬೆನ್ನಟ್ಟಿದ ಸಾರ್ವಜನಿಕರು,ಕುಂಬ್ರದಲ್ಲಿ ವಾಹನವನ್ನು ತಡೆದ ಪೊಲೀಸರು

0

ಪುತ್ತೂರು: ವಾಹನವೊಂದರಲ್ಲಿ ಬಂದವರು ಶಾಲಾ ಮಕ್ಕಳಿಗೆ ಹಲಸಿನ ಹಣ್ಣು ಇರುವ ಪ್ಲಾಸ್ಟಿಕ್ ಚೀಲವನ್ನು ಕೊಟ್ಟು ತೆರಳುತ್ತಿದ್ದನ್ನು ನೋಡಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಪೊಲೀಸರ ಸಹಾಯದಿಂದ ವಾಹನವನ್ನು ಹಿಡಿದು ಠಾಣೆಗೆ ಒಪ್ಪಿಸಿದ ಘಟನೆ ಜೂ.22 ರಂದು ಮಾಡಾವು ಅಂಕತ್ತಡ್ಕದಿಂದ ವರದಿಯಾಗಿದೆ.


ಸಂಜೆ ಶಾಲೆ ಬಿಡುವ ಸಮಯದಲ್ಲಿ ಬೆಳ್ಳಾರೆ ಕಡೆಯಿಂದ ಬಂದ ಅಶೋಕ್ ಲೈಲ್ಯಾಂಡ್‌ನ ಮಿನಿ ಪಿಕಪ್‌ವೊಂದರಲ್ಲಿದ್ದವರು (ಕೆಎ 19 ಎಡಿ 9924) ರಾಂಗ್ ಸೈಡ್‌ನಲ್ಲಿ ವಾಹನವನ್ನು ತಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳ ಬಳಿಯಲ್ಲಿ ನಿಲ್ಲಿಸಿ ಅವರಿಗೆ ಕಟ್ಟೊಂದನ್ನು ನೀಡಿದ್ದಾರೆ. ಇದನ್ನು ಗಮನಿಸಿದ ಎಸ್‌ಡಿಎಂಸಿ ಅಧ್ಯಕ್ಷ ಪ್ರವೀಣ್ ಭಂಡಾರಿಯವರು ಅಂಕತ್ತಡ್ಕ ಸೆಲೂನ್‌ಗೆ ಬಂದಿದ್ದ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಶರತ್ ಕುಮಾರ್‌ರವರು ಪ್ರವೀಣ್ ಭಂಡಾರಿಯವರನ್ನು ತನ್ನ ಕಾರಲ್ಲಿ ಕುಳ್ಳಿರಿಸಿಕೊಂಡು ಮಿನಿ ಪಿಕಪ್ ವಾಹವನ್ನು ಬೆನ್ನಟ್ಟಿದ್ದಾರೆ. ಸಂಪ್ಯ ಪೊಲೀಸರಿಗೆ ವಿಷಯ ತಿಳಿಸಿದ್ದರು.


ಕುಂಬ್ರದಲ್ಲಿ ವಾಹನವನ್ನು ತಡೆದ ಪೊಲೀಸರು:
ವೇಗವಾಗಿ ಬರುತ್ತಿದ್ದ ಮಿನಿ ಪಿಕಪ್ ವಾಹನವನ್ನು ಕುಂಬ್ರದಲ್ಲಿ ಹೈವೇ ಪೊಲೀಸರು ತಡೆದು ನಿಲ್ಲಿಸಿದ್ದರು. ಅಲ್ಲಿಂದ ವಾಹನವನ್ನು ಸಂಪ್ಯ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.ಮಂಗಳೂರು ನೋಂದಣಿ ಹೊಂದಿರುವ ಈ ವಾಹನದಲ್ಲಿ ಆನ್‌ಲೈನ್‌ನಿಂದ ಖರೀದಿಸಿದ ಹಾಸಿಗೆ ಇತ್ಯಾದಿಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಪಿಕಪ್‌ನಲ್ಲಿ ಶಹಬಾದ್ ಮತ್ತು ಪುನೀತ್ ಎಂಬವರಿದ್ದು ಇದರಲ್ಲಿ ಚಾಲಕ ಶಹಬಾದ್ ಎಂಬವರು ಮಕ್ಕಳಿಗೆ ಹಲಸಿನ ಹಣ್ಣನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಶಹಬಾದ್‌ರವರನ್ನು ಕೇಳಿದರೆ ನಾವು ಬೆಳ್ಳಾರೆ ಸಮೀಪ ಹಲಸಿನ ಹಣ್ಣು ತೆಗೆದುಕೊಂಡಿದ್ದು ನಾವು ತಿಂದು ಹೆಚ್ಚಾಗಿರುವುದರನ್ನು ಮಕ್ಕಳಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.


ಗುರುತು ಪರಿಚಯ ಇಲ್ಲದವರು ಮಕ್ಕಳಿಗೆ ತಿನ್ನಲು ಕೊಡುವುದು ಸರಿಯಲ್ಲ:
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಯ್ಯೂರು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರು ಶಾಲಾ ಮಕ್ಕಳಿಗೆ ಯಾರೇ ಆಗಲಿ ಏನನ್ನೇ ಆಗಲಿ ತಿನ್ನಲು ಕೊಡುವುದು ಸರಿಯಲ್ಲ. ಅದರಲ್ಲೂ ಗುರುತು ಪರಿಚಯ ಇಲ್ಲದವರು ವಾಹನದಲ್ಲಿ ಬಂದು ಹಲಸಿನ ಹಣ್ಣು ಕೊಡುವುದು ಎಷ್ಟು ಸರಿ? ಇದಲ್ಲದೆ ಹಣ್ಣಿನ ಕಟ್ಟನ್ನು ಮಕ್ಕಳ ಕೈಗೆ ಕೊಟ್ಟು ಅತೀ ವೇಗದಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋದದ್ದು ಯಾಕೆ? ನಾವು ವಾಹನವನ್ನು ನಿಲ್ಲಿಸುವಂತೆ ಹೇಳಿದರೂ ನಮ್ಮ ಕಾರಿಗೆ ಡಿಕ್ಕಿ ಹೊಡೆಯಲು ಬಂದದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮೂರಿನಲ್ಲಿ ನಮ್ಮ ಮಕ್ಕಳ ಮೇಲೆ ಯಾವುದೇ ರೀತಿಯ ತೊಂದರೆ ಆಗುವುದಕ್ಕೆ ನಾವು ಬಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಮಕ್ಕಳಿಗೆ ದಾರಿಯಲ್ಲಿ ಹೋಗುವಾಗ ಗುರುತು ಪರಿಚಯ ಇಲ್ಲದ ವ್ಯಕ್ತಿಯೊಬ್ಬ ಆಹಾರ ಪದಾರ್ಥಗಳನ್ನು ನೀಡುವುದು ಅಪರಾಧವಾಗಿದೆ. ಇತ್ತೀಚಿಗೆ ಕೆಯ್ಯೂರಿನಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸಭೆ ನಡೆದಿದ್ದು ಇದರಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ. ಅಂಗಡಿಗಳಲ್ಲಿ ಕೂಡ ಕಂಪೆನಿಯ ಹೆಸರಿಲ್ಲದೆ ಇರುವ ಚಾಕಲೇಟ್ ಅನ್ನು ಮಕ್ಕಳಿಗೆ ಮಾರಾಟ ಮಾಡಬಾರದು ಎಂಬ ಕಾನೂನು ಇದೆ. ಅಂಕತ್ತಡ್ಕದಲ್ಲಿ ನಡೆದ ಘಟನೆಯನ್ನು ಗಮನಿಸಿದರೆ ಆತನಿಗೆ ಮಕ್ಕಳಿಗೆ ಹಲಸಿನ ಹಣ್ಣನ್ನು ಕೊಡುವ ಅವಶ್ಯಕತೆ ಏನಿತ್ತು? ಹಾಗೇ ಕೊಡುವುದಿದ್ದರೂ ಶಾಲೆಗೆ ಹೋಗಿ ಎಸ್‌ಡಿಎಂಸಿ, ಶಿಕ್ಷಕರ ಅನುಮತಿ ಮೇರೆಗೆ ಕೊಡಬಹುದಿತ್ತಲ್ವಾ? ಎಲ್ಲಿಂದಲೋ ವಾಹನದಲ್ಲಿ ಬಂದವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳಿಗೆ ಹಲಸಿನ ಹಣ್ಣು ಕೊಟ್ಟಿರುವುದು ಕಾನೂನು ಬಾಹಿರ. ಆತ ಹಣ್ಣಿನಲ್ಲಿ ಏನನ್ನು ಬೇಕಾದರೂ ಬೆರೆಸಿ ಕೊಟ್ಟಿರಲೂಬಹುದು. ಈ ಬಗ್ಗೆ ಮಕ್ಕಳು ಕೂಡ ಜಾಗೃತರಾಗಬೇಕಾಗಿದೆ.ಅಪರಿಚಿತರು ಅಥವಾ ಗುರುತು ಪರಿಚಯ ಇಲ್ಲದವರು ಏನೇ ಆಹಾರ ಪದಾರ್ಥ, ಚಾಕಲೇಟ್ ಇತ್ಯಾದಿ ಏನನ್ನೇ ಕೊಟ್ಟರೂ ತಿನ್ನಬಾರದು.ಈ ಬಗ್ಗೆ ಹೆತ್ತವರಿಗೆ, ತಂದೆ ತಾಯಿಗೆ ವಿಷಯ ತಿಳಿಸಬೇಕು.
ಕಸ್ತೂರಿ ಬೊಳುವಾರು, ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು, ತಾಲೂಕು ಸಂಯೋಜಕರು

LEAVE A REPLY

Please enter your comment!
Please enter your name here