ಕೊಕ್ಕಡ ಗ್ರಾಮದ ಕುಡಾಲ ಮತ್ತು ಉಪ್ಪಾರು ಬೈಲಿನಲ್ಲಿ ಶನಿವಾರ ರಾತ್ರಿ ಆನೆ ಸಂಚರಿಸಿರುವ ಬಗ್ಗೆ ಭಾನುವಾರ ಬೆಳಗ್ಗೆ ಕುರುಹುಗಳು ಪತ್ತೆಯಾಗಿವೆ.
ಇಲ್ಲಿನ ಕುಡಾಲ,ಉಪ್ಪಾರು, ಪುದ್ಯಂಗ, ಪುಂಚೆತ್ತಿಮಾರು, ಉಪ್ಪಾರುಗುತ್ತು, ಜಾರಿಗೆತ್ತಡಿ ನಿವಾಸಿಗಳ ತೋಟಗಳಲ್ಲಿ ಆನೆ ಸಂಚರಿಸಿದ ಹೆಜ್ಜೆಗಳು ಪತ್ತೆಯಾಗಿದ್ದು ಯಾವುದೇ ರೀತಿ ಕೃಷಿ ನಾಶವಾಗಿಲ್ಲ.
ಜಾರಿಗೆತ್ತಡಿ ಭಾಗದಿಂದ ಆನೆಯು ತಿಪ್ಪಮಜಲು ಕಡೆಗೆ ಸಾಗಿರುವ ಹೆಜ್ಜೆ ಗುರುತು ಕಂಡುಬಂದಿದ್ದು ನೆಲ್ಯಾಡಿ ಕಡೆಗೆ ಸಾಗಿರಬಹುದು ಎಂದು ಹೇಳಲಾಗಿದೆ. ಇದಕ್ಕೆ ಪೂರಕವೆಂಬಂತೆ ಭಾನುವಾರ ನೆಲ್ಯಾಡಿಯ ಪಡ್ಡಡ್ಕ, ಪಡುಬೆಟ್ಟು ಭಾಗದಲ್ಲಿ ಆನೆ ಕಾಣಿಸಿಕೊಂಡಿರುವ ಬಗ್ಗೆ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಕುಡಾಲ ಮತ್ತು ಉಪ್ಪಾರು ಬೈನಲ್ಲಿ ಸಂಚರಿಸಿದ ಆನೆಯೂ ತೋಟಗಳ ಮಧ್ಯೆ ಸಂಚರಿಸಿದರು ಕೂಡ ಯಾವುದೇ ರೀತಿಯ ಕೃಷಿಯನ್ನು ನಾಶ ಮಾಡಿಲ್ಲ. ಜೊತೆಗೆ ಇದು ಬೃಹತ್ ಆನೆಯಾಗಿರಬಹುದು ಎಂದು ಹೆಜ್ಜೆಯಿಂದ ತಿಳಿದು ಬಂದಿದೆ. ಆನೆ ಈ ಭಾಗದಲ್ಲಿ ಇದೇ ಮೊದಲ ಬಾರಿ ಕಾಣಿಸಿಕೊಂಡಿದ್ದು ಪರಿಸರದ ಜನತೆ ಆತಂಕದಲ್ಲಿದ್ದಾರೆ.
ಅಲ್ಲದೆ ಯಾವುದೇ ರೀತಿ ಕೃಷಿ ನಾಶ ಮಾಡದ ಕಾರಣ ಆನೆಯ ಬಗ್ಗೆ ಕುತೂಹಲವು ಸ್ಥಳೀಯ ನಿವಾಸಿಗಳಲ್ಲಿ ಮೂಡಿದೆ. ಪರಿಸರದ ಜನತೆ ಭಾನುವಾರ ಬೆಳಗ್ಗಿನಿಂದಲೂ ಒಬ್ಬರಿಗೊಬ್ಬರು ದೂರವಾಣಿ ಕರೆ ಮಾಡಿ ನಿಕ್ಲೆನ ಅಂಚಿ ದೇವೆರ್ (ಆನೆ ) ಬತ್ತೆರ ಎಂದು ಕೇಳುತ್ತಿದ್ದದ್ದು ಸಾಮಾನ್ಯವಾಗಿತ್ತು.