ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸ್ಥಾಪಕರ ದಿನಾಚರಣೆ 

0

ಜಯರಾಮ ಕೆದಿಲಾಯರದ್ದು ದಾರ್ಶನಿಕ ವ್ಯಕ್ತಿತ್ವ

ಪುತ್ತೂರು: ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ಹೊಂದಿರುವ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಸ್ಥಾಪಕರ ದಿನಾಚರಣೆ ಜೂ. 26 ರಂದು ಜರಗಿತು. ಸಂಸ್ಥೆಯ ಸ್ಥಾಪಕರಾದ ಜಯರಾಮ ಕೆದಿಲಾಯರ 75 ನೇ ವರ್ಷದ ಹುಟ್ಟುಹಬ್ಬವನ್ನು ಸ್ಥಾಪಕರ ದಿನವನ್ನಾಗಿ ಆಚರಿಸಲಾಯಿತು.

ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷರೂ, ಹಾಲಿ ಅಧ್ಯಕ್ಷರೂ ಆಗಿರುವ ಜಯರಾಮ ಕೆದಿಲಾಯರು ಮಾತನಾಡಿ ‘ಆರಾಧ್ಯದೇವನಾದ ಕೃಷ್ಣನ ಅನುಗ್ರಹದಿಂದಾಗಿ ನನ್ನಲ್ಲಿದ್ದ ಕನಸುಗಳು ವಿದ್ಯಾಸಂಸ್ಥೆಯಾಗಿ ಹುಟ್ಟಿತು. ನೂರಾರು ವರ್ಷಗಳ ಕಾಲ ನನ್ನ ಕನಸುಗಳು ಬದುಕಲಿ ಎಂಬ ಆಲೋಚನೆಯೊಂದಿಗೆ ಶಾಲೆ ಆರಂಭಿಸಿದೆವು. ಶಾಲೆಯು ಮಕ್ಕಳ ಬೆಳವಣಿಗೆಯ ಆರಾಧನಾ ಸ್ಥಳವಾಗಿ ಮುಂದುವರಿಯಬೇಕಾದರೆ ಒಂದಷ್ಟು ಚಿಂತಕರು ಬರಬೇಕು’ ಎಂದು ಹೇಳಿ ತನ್ನಲ್ಲಿ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾದ ಕೆಲವು ಪುಸ್ತಕಗಳ ಬಗ್ಗೆ ಮೆಲುಕು ಹಾಕಿದರು.

ಹಲವು ವ್ಯಕ್ತಿಗಳಿಗೆ ಶಕ್ತಿಯಾದವರು – ಭಾಸ್ಕರ ಆಚಾರ್
ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು ರವರು ಮಾತನಾಡಿ ‘ಯೋಚನೆ ಒಳ್ಳೆಯದಿದ್ದರೆ ಸಾಧನೆಯೂ ಉತ್ತಮವಾಗಿರುತ್ತದೆ. ಸಮಾಜದ ಹಲವು ವ್ಯಕ್ತಿಗಳಿಗೆ ಶಕ್ತಿಯಾಗಿ ಪ್ರೇರಣೆ ನೀಡಿದವರು. ಅವರ ಇನ್ನಷ್ಟು ಪ್ರೇರಣಾ ಶಕ್ತಿ ಈ ಸಂಸ್ಥೆಯ ಏಳಿಗೆಗೆ ಕಾರಣವಾಗಲಿ’ ಎಂದರು.

ಹಣ ಸದ್ವಿನಿಯೋಗಕ್ಕೆ ಕೆದಿಲಾಯರು ಉದಾಹರಣೆ – ಎಸ್.ಜಿ. ಕೃಷ್ಣ
ಆಡಳಿತ ಮಂಡಳಿ ಸದಸ್ಯ, ಸಾಹಿತಿ ಎಸ್.ಜಿ. ಕೃಷ್ಣ ಮಾತನಾಡಿ  ಹಣ ಗಳಿಸಿದರೆ ಸಾಲದು, ಸದ್ವಿನಿಯೋಗವಾಗಬೇಕು’ ಎಂಬ ಮಾತಿಗೆ ಜಯರಾಮ ಕೆದಿಲಾಯರು ಉತ್ತಮ ಉದಾಹರಣೆ. ಶಾಲೆಯ ಬಗೆಗಿನ ಅವರ ಕಳಕಳಿ ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ‌’ ಎಂದರು.

ರಜತ ಸಂಭ್ರಮಕ್ಕೆ ಸೂಕ್ತ – ಕೃಷ್ಣಪ್ರಸಾದ್ ಕೆದಿಲಾಯ
ಆಡಳಿತ ಮಂಡಳಿ ಕಾರ್ಯದರ್ಶಿ ಶಿಬರ ಕೃಷ್ಣಪ್ರಸಾದ್ ಕೆದಿಲಾಯರು ಮಾತನಾಡಿ ‘ರಜತ ಸಂಭ್ರಮದತ್ತ ಸಾಗುತ್ತಿರುವ ಶಾಲೆಯ ಮುಂದಿನ ಯೋಜನೆಗಳ ರೂಪುರೇಷೆ, ಅನುಷ್ಠಾನಗಳಿಗಾಗಿ ಈ ಕಾರ್ಯಕ್ರಮ ಸೂಕ್ತವಾಗಿದೆ. ಜಯರಾಮ ಕೆದಿಲಾಯರು ಹಲವು ಪ್ರಥಮಗಳನ್ನು ಮಾಡಿದವರು‌. ಅವರಂತಹ ಆದರ್ಶ ವ್ಯಕ್ತಿತ್ವ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನುಸರಣೀಯವಾದುದು’ ಎಂದರು.

ಕೆದಿಲಾಯರು ರೋಲ್ ಮಾಡೆಲ್ – ಪ್ರಸನ್ನ ಭಟ್
ಆಡಳಿತ ಮಂಡಳಿ ಸದಸ್ಯ, ಸಿವಿಲ್ ಇಂಜಿನಿಯರ್ ಪ್ರಸನ್ನ ಭಟ್ ರವರು ಮಾತನಾಡಿ ‘ಜಯರಾಮ ಕೆದಿಲಾಯರು ರೋಲ್ ಮಾಡೆಲ್, ಶಿಕ್ಷಣದ ಬಗೆಗೆ ಅವರು ಹೊಂದಿರುವಷ್ಟು ಅಪಾರ ಪ್ರೀತಿ ಬೇರೆ ಯಾರಲ್ಲೂ ಸಿಗಲು ಸಾಧ್ಯವಿಲ್ಲ’ ಎಂದರು.

ಪಾರಂಪರಿಕ ಚಿಂತನೆಗಳನ್ನು ನೆನಪಿಸಿಕೊಳ್ಳಬೇಕು – ಹರೀಶ್ ಪುತ್ತೂರಾಯ
ಆಡಳಿತ ಮಂಡಳಿ ಇನ್ನೋರ್ವ ಸದಸ್ಯ ಹರೀಶ್ ಪುತ್ತೂರಾಯರು ಮಾತನಾಡಿ ‘ನಮ್ಮ ಸಂಸ್ಕೃತಿ ಮತ್ತು ಪಾರಂಪರಿಕ ಚಿಂತನೆಯನ್ನು ಮತ್ತೆ ನೆನಪಿಸಿಕೊಳ್ಳುವುದಕ್ಕಾಗಿ ಸ್ಥಾಪಕರ ದಿನಾಚರಣೆ. ಜಯರಾಮ ಕೆದಿಲಾಯರ ಆದರ್ಶಗಳು ನೂರಾರು ಕಾಲ ಅನುಸರಣೀಯವಾದುದು’ ಎಂದರು.

ಶ್ರೀಮತಿ ಕುಮಾರಿ ಕೆದಿಲಾಯ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಸದಸ್ಯ ಅಶೋಕ್ ಕುಮಾರ್ ಪುತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಪರವಾಗಿ ಅಧ್ಯಕ್ಷರಿಗೆ ಹಾರಾರ್ಪಣೆ ಮಾಡಿ ಗೌರವಿಸಲಾಯಿತು. ಶಿಕ್ಷಕ ವೃಂದದವರು ಹಾರಾರ್ಪಣೆ ಮಾಡಿ ಗೌರವಿಸಿದರು. ವಿದ್ಯಾರ್ಥಿಗಳು ಪುಷ್ಪಗುಚ್ಛವನ್ನು ಅಧ್ಯಕ್ಷರಿಗೆ ನೀಡಿ ಆಶೀರ್ವಾದ ಪಡೆದುಕೊಂಡರು‌.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕರಾದ ಪ್ರಮೀಳಾ, ರೋಹಿತ್ ಅಧ್ಯಕ್ಷರ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಾದ ಅಕ್ಷರ, ಪ್ರತೀಕ್ ಎನ್.ಎಸ್. ಸ್ಥಾಪಕರ ಬಗ್ಗೆ ಮಾತನಾಡಿ, ಅವರ ಸಾಮಾಜಿಕ ಸೇವೆ ಮತ್ತು ಶಾಲೆಯ ಬಗೆಗಿನ ಕಾಳಜಿ, ಪರಿಶ್ರಮದ ಬಗ್ಗೆ ಹೇಳಿದರು.

ಮುಖ್ಯಗುರು ಜಯಮಾಲಾ ಸ್ವಾಗತಿಸಿ, ಬಂಗಾರದಂತಹ ಜ್ಞಾನವಂತರನ್ನು ಸಮಾಜಕ್ಕೆ ನೀಡಿದ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ ಜಯರಾಮ ಕೆದಿಲಾಯರು ನಮಗೆಲ್ಲಾ ಪ್ರಾತಃಸ್ಮರಣೀಯರಾಗಿದ್ದಾರೆ’ ಎಂದರು. ಶಿಕ್ಷಕಿ ಗೀತಾ ರವರು ವಂದಿಸಿದರು‌. ಸಹಶಿಕ್ಷಕ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅಧ್ಯಕ್ಷರು ಶ್ರೀಕೃಷ್ಣನ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ವಿದ್ಯಾರ್ಥಿಗಳಾದ ಪುನೀತ್, ಯಜ್ಞ, ಗಾನವಿ, ಹೃತ್ವಿಕ್ ರವರು ತಮ್ಮ ಹುಟ್ಟುಹಬ್ಬವನ್ನು ಇದೇ ವೇಳೆ ಆಚರಿಸಿಕೊಂಡರು. ಜಯರಾಮ ಕೆದಿಲಾಯರು ಮಕ್ಕಳಿಗೆ ಉಡುಗೊರೆ ನೀಡಿ ಶುಭಹಾರೈಸಿದರು. ಪ್ರಸನ್ನ ಭಟ್ ಅಧ್ಯಕ್ಷರಿಗೆ ಹಾರಾರ್ಪಣೆ ಮಾಡಿ ಸ್ವಾಗತಿಸಿದರು.  ಮುಖ್ಯ ಶಿಕ್ಷಕಿ ಜಯಮಾಲಾ, ಸಹಾಯಕ ಶಿಕ್ಷಕರಾದ, ಪ್ರಸನ್ನ, ರಮೇಶ್, ಸುಪ್ರೀತ್, ನವೀನ್, ಶಿವಕುಮಾರ್, ಮುರಳೀಕೃಷ್ಣರವರು ಅತಿಥಿಗಳನ್ನು ಗೌರವಿಸಿದರು. ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಸ್ಥಾಪಕರ ಹುಟ್ಟುಹಬ್ಬ ಸಂಸ್ಥೆಯ ಸ್ಥಾಪಕರ ದಿನ
ಶಾಲೆಯ ಸ್ಥಾಪಕರಾದ ಜಯರಾಮ ಕೆದಿಲಾಯರ ಹುಟ್ಟಿದ ದಿನವನ್ನು ಸ್ಥಾಪಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ಜಯರಾಮ ಕೆದಿಲಾಯರು 75 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅಧ್ಯಕ್ಷರನ್ನು ಗೌರವಿಸಿದರು.

ಧರ್ಮ ಮತ್ತು ಶಿಕ್ಷಣ ಜೊತೆಜೊತೆಯಾಗಿ ಸಾಗಬೇಕು – ಜಯರಾಮ ಕೆದಿಲಾಯ
ಹಿಂದು ಧರ್ಮದಲ್ಲಿ ದೇವಸ್ಥಾನ ಮತ್ತು ಶಾಲೆ ಪ್ರತ್ಯೇಕವಾಗಿದೆ. ಮಗುವಿನಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆದು ಸಮಾಜಕ್ಕೆ ಅವನು ಸತ್ಪ್ರಜೆಯಾಗಿ ದೊರೆಯಬೇಕಾದರೆ ಧರ್ಮ ಮತ್ತು ಶಿಕ್ಷಣ ಜೊತೆ ಜೊತೆಯಾಗಿ ಸಾಗಬೇಕೆಂಬ ಆಶಯದಿಂದ ಆರಂಭಿಸಿದ ಶಿಕ್ಷಣ ಸಂಸ್ಥೆ ಇಂದು ಸಮಾಜಕ್ಕೆ ಅನೇಕ ಸಜ್ಜನ, ಶ್ರೇಷ್ಠ ವ್ಯಕ್ತಿಗಳನ್ನು ನಿರ್ಮಿಸುವ ಹಾದಿಯಲ್ಲಿ ಸಾಗುತ್ತಿದೆ’ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಜಯರಾಮ‌ ಕೆದಿಲಾಯರು ಹೇಳಿದರು.

LEAVE A REPLY

Please enter your comment!
Please enter your name here