ಪ್ರಕೃತಿಯ ಮಿತ್ರರಾಗಿ ಬಾಳಬೇಕು – ಕಡಮಜಲು ಸುಭಾಸ್ ರೈ
ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ ಕೆದಂಬಾಡಿ ಗ್ರಾಮ ಸಮಿತಿಯ ಆಶ್ರಯದಲ್ಲಿ ವನಮಹೋತ್ಸವ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆಯು ಕೆದಂಬಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂ. 26 ರಂದು ನಡೆಯಿತು.
ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಬಶೀರ್ ಬೂಡಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಗತಿಪರ ಕೃಷಿಕ ಕಡಮಜಲು ಸುಭಾಸ್ ರೈಯವರು ಮಾತನಾಡಿ ʻವನವಿದ್ದರೆ ಜೀವನ, ಹಸಿರಿದ್ದರೆ ಉಸಿರು, ನಾವೆಲ್ಲರೂ ಪ್ರಕೃತಿಯ ಮಿತ್ರರಾಗಿ ಬಾಳಬೇಕುʼ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಆರ್‌ಡಿಎಫ್ ಕೆದಂಬಾಡಿ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕೆದಂಬಾಡಿ ಗ್ರಾ.ಪಂ. ಸದಸಯ ಕೃಷ್ಣಕುಮಾರ್ ಇದ್ಯಪೆ, ಮುಖ್ಯಗುರು ನಾಗವೇಣಿ ಕೆ. ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಗೆ ಚಿತ್ರಕಲಾ ಪುಸ್ತಕ ನೀಡಲಾಯಿತು. ಶಾಲಾ ಆವರಣದಲ್ಲಿ ಗಿಡ ನೆಡಲಾಯಿತು. ಪ್ರತಿಷ್ಠಾನದ ವತಿಯಿಂದ ಪ್ರತೀ ವಿದ್ಯಾರ್ಥಿಯ ಮನೆಗೆ ಗಿಡ ವಿತರಿಸಲಾಯಿತು. ಪ್ರತಿಷ್ಠಾನದ ಸದಸ್ಯರಾದ ಕರುಣಾಕರ ರೈ ಕೋರಂಗ, ಶಿಕ್ಷಕರು, ವಿದ್ಯಾರ್ಥಿಗಳು ವಿವಿಧ ಜವಾಬ್ದಾರಿ ನಿರ್ವಹಿಸಿದರು. ಶಿಕ್ಷಕಿ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.