ಪುತ್ತೂರು: ಅಕ್ರಮ ಸಕ್ರಮ ಕಡತಗಳು ಈ ಹಿಂದೆ ಮ್ಯಾನುವಲ್ ಆಗಿ ನಡೆಯುತ್ತಿತ್ತು ಕಳೆದ ವರ್ಷದಿಂದ ಇದು ಡಿಜಿಟಲೀಕರಣಗೊಂಡಿದ್ದು ಹೊಸ ಆ್ಯಪ್ ಮೂಲಕ ವಿಲೇವಾರಿ ಮಾಡಲಾಗುತ್ತಿದ್ದು ಈ ಆ್ಯಪ್‌ನಲ್ಲಿರುವ ಲೋಪದೋಷಗಳನ್ನು ಪರಿಹರಿಸುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕಠಾರಿಯಾ ಅವರಿಗೆ ಶಾಸಕರಾದ ಅಶೋಕ್ ರೈ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ಇಲಾಖಾ ಕಚೇರಿಗೆ ಭೇಟಿ ನೀಡಿದ ಶಾಸಕರು ಹೊಸ ಆ್ಯಪ್ ಒಳ್ಳೆಯದೇ ಆದರೂ ಇದರಿಂದ ಆರಂಭದಲ್ಲಿ ಅನೇಕ ಸಮಸ್ಯೆಗಳು ಉಂಟಾಗಿದೆ. ಕಡತಗಳನ್ನು ಆನ್‌ಲೈನ್ ಮೂಲಕ ದಾಖಲಿಸುವ ವೇಳೆ ಕೆಲವೊಂದು ಅನಗತ್ಯ ದಾಖಲೆಗಳನ್ನು ಕೇಳುತ್ತಿದ್ದು ಇದರಿಂದ ದಾಖಲೀಕರಣಕ್ಕೆ ಕಷ್ಟವಾಗುತ್ತಿದೆ. ಆನ್ ಲೈನ್ ಮೂಲಕ ಮಾಹಿತಿಯನ್ನು ದಾಖಲಿಸುವ ವೇಳೆ ಅದನ್ನು ಸುಲಭೀಕರಣಗೊಳಿಸಬೇಕು ಮತ್ತು ಇದರಲ್ಲಿರುವ ತಾಂತ್ರಿಕ ದೋಷಗಳನ್ನು ನಿವಾರಣೆ ಮಾಡಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಅಕ್ರಮ ಸಕ್ರಮ ಕಡತಗಳು ಬಾಕಿ ಇದ್ದು ಅವುಗಳನ್ನು ವಿಲೇವಾರಿ ಮಾಡುವಲ್ಲಿ ಇಲಾಖೆಯ ಸಹಕಾರವನ್ನು ಕೋರಿದರು.
94 ಸಿ ಮತ್ತು 94 ಸಿಸಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇದ್ದು ತಾಂತ್ರಿಕ ದೋಷಗಳಿಂದಾಗಿ ನೂರಾರು ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಬಡವರು ಅನೇಕ ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಕೆಲವೊಂದು ದಾಖಲೆಗಳ ಕೊರತೆ ಮತ್ತು ಮನೆ ಕಟ್ಟಿಕೊಂಡಿರುವ ಜಾಗದ ಸಮಸ್ಯೆಯಿಂದಾಗಿ ಅವರು ಹಕ್ಕು ಪತ್ರ ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. 94 ಸಿ ಮತ್ತು 94 ಸಿಸಿ ಹಕ್ಕು ಪತ್ರ ನೀಡುವಲ್ಲಿ ಈಗಾಗಲೇ ಇರುವ ಕಾನೂನಿನಲ್ಲಿ ಸ್ವಲ್ಪ ಸಡಿಲಿಕೆ ಮಾಡುವ ಮೂಲಕ ಮನೆ ವಾರಿಸುದಾರರಿಗೆ ಅಥವಾ ಅರ್ಜಿದಾರರಿಗೆ ಹಕ್ಕು ಪತ್ರ ನೀಡುವಲ್ಲಿ ಇಲಾಖೆಯ ಸಹಕಾರವನ್ನು ಕೋರಿದರು.
ನಾಡಕಚೇರಿ ದುರಸ್ಥಿಗೆ ಅನುದಾನ
ವಿಟ್ಲ, ಉಪ್ಪಿನಂಗಡಿ ಮತ್ತು ನೆಟ್ಟಣಿಗೆ ಮುಡ್ನೂರುನಲ್ಲಿರುವ ನಾಡಕಚೇರಿಯ ದುರಸ್ಥಿಗಾಗಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಕಂದಾಯ ಸಚಿವರಿಗೆ ಈ ಸಂದರ್ಭದಲ್ಲಿ ಮನವಿ ಮಾಡಿದರು.