ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಬಾಲಕೃಷ್ಣ ಭಟ್ ರವರು ಜನರ ಪ್ರೀತಿ ವಿಶ್ವಾಸ ಗಳಿಸಿದ ವ್ಯಕ್ತಿ. ಕೃಷಿಕನಾಗಿ, ಸಹಕಾರಿಯಾಗಿ, ಪಂಚಾಯತ್ ಆಡಳಿತಗಾರನಾಗಿ ಛಾಪು ಮೂಡಿಸಿ ಜನಾನುರಾಗಿಯಾದವರು – ಮಾಜಿ ಶಾಸಕ ಸಂಜೀವ ಮಠಂದೂರು
ಪಾಣಾಜೆ: ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಬಿಜೆಪಿಯ ಹಿರಿಯ ಧುರೀಣರಾಗಿದ್ದ ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಬಾಲಕೃಷ್ಣ ಭಟ್ ಬಿ. (74ವ.) ರವರು ಜೂ. 28 ರಂದು ಮುಂಜಾನೆ ಹೃದಯಾಘಾತದಿಂದ ವಿಧಿವಶರಾದರು.ಆರೋಗ್ಯವಾಗಿ ಕ್ರಿಯಾಶೀಲರಾಗಿದ್ದ ಭಟ್ ರವರಿಗೆ ಮಧ್ಯರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಮನೆಯವರು ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಬಾಲಕೃಷ್ಣ ಭಟ್ ರವರು ಜನಸಂಘದ ಕಾಲದಿಂದಲೂ ಭಾಜಪದಲ್ಲಿ ಗುರುತಿಸಿಕೊಂಡವರು. ಪಾಣಾಜೆ ಮಂಡಲ ಪ್ರಧಾನರಾಗಿ, ಪಂಚಾಯತ್ ಸದಸ್ಯರಾಗಿ ಆಡಳಿತಾತ್ಮಕವಾಗಿ ಪಾಣಾಜೆಯಲ್ಲಿ ಅಭಿವೃದ್ಧಿಯ ಶಕೆ ಮೂಡಿಸಿದ್ದರು. ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸ್ಕ್ಯಾಡ್ಸ್ ಮಂಗಳೂರು ಇದರ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಟಾವಂತ ಕಾರ್ಯಕರ್ತರಾಗಿ, ಬಿಜೆಪಿ ತಾಲೂಕು ಕಾರ್ಯಕಾರಿಣಿ ಸದಸ್ಯರಾಗಿ, ಬಿಜೆಪಿ ಪಾಣಾಜೆ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ರಾಜಕೀಯವಾಗಿಯೂ ಪಾಣಾಜೆಯಂತಹ ಗಡಿಭಾಗದ ಗ್ರಾಮದ ಹೆಸರನ್ನು ತಾಲೂಕಿನಲ್ಲಿ ಪಸರಿಸಿದ್ದರು. ಸೂರಂಬೈಲು ಶಾಲಾ ಎಸ್ಡಿಎಂಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಭರಣ್ಯ ದಿ. ರಾಮಕೃಷ್ಣ ಭಟ್ ಮತ್ತು ದಿ. ಶಂಕರಿ ಅಮ್ಮ ದಂಪತಿ ಪ್ರಥಮ ಪುತ್ರನಾಗಿರುವ ಇವರು ಪತ್ನಿ ಸವಿತಾ, ಹಿರಿಯ ಪುತ್ರ ಪಳ್ಳತ್ತಡ್ಕ ಶಾಲೆಯ ಸಂಸ್ಕೃತ ಶಿಕ್ಷಕ ಶರತ್ ಕೃಷ್ಣ, ಕಿರಿಯ ಪುತ್ರ ಭರಣ್ಯದಲ್ಲಿ ಹಾಳೆತಟ್ಟೆ ತಯಾರಿಕಾ ಘಟಕ ನಡೆಸುತ್ತಿರುವ ಭರತ್, ಅಮೆರಿಕದ ಬೋಸ್ಟನ್ ನಲ್ಲಿ ಉದ್ಯೋಗಿಗಳಾಗಿರುವ ಪುತ್ರಿ ಶುಭ, ಅಳಿಯ ಸತ್ಯನಾರಾಯಣ ಭಟ್, ಸಹೋದರರಾದ ಹರಿಕೃಷ್ಣ ಭರಣ್ಯ, ರಮೇಶ್ ಭರಣ್ಯ, ಸಹೋದರಿಯರಾದ ಜಯಲಕ್ಷ್ಮಿ, ಸಾವಿತ್ರಿ, ಮಾಲಿನಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ಕೆಎಂಎಫ್ ನಿರ್ದೇಶಕ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಜಿ.ಪಂ. ಮಾಜಿ ಸದಸ್ಯೆ ಮೀನಾಕ್ಷಿ ಮಂಜುನಾಥ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಡಾ. ಅಖಿಲೇಶ್, ಆಡಳಿತ ಮಂಡಳಿ ನಿರ್ದೇಶಕರಾದ ರವೀಂದ್ರ ಭಂಡಾರಿ, ರವಿಶಂಕರ ಶರ್ಮ, ಕುಮಾರ ನರಸಿಂಹ ಭಟ್ ಬುಳೆನಡ್ಕ, ನಾರಾಯಣ ರೈ ಕೊಪ್ಪಳ, ಸಿಇಒ ಹರೀಶ್ ಕುಮಾರ್, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಸುಭಾಸ್ ರೈ ಚಂಬರಕಟ್ಟ, ಮೋಹನ್ ನಾಯ್ಕ್, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ತೂಂಬಡ್ಕ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸದಾಶಿವ ರೈ ಸೂರಂಬೈಲು, ಬೂತ್ ಸಮಿತಿ ಅಧ್ಯಕ್ಷ ಗಣಪತಿ ಬಲ್ಯಾಯ, ಸೇರಿದಂತೆ ಪಕ್ಷದ ಹಿರಿಯರು, ಪ್ರಮುಖರು ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು.