ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

0

ಮಕ್ಕಳಿಗೆ ಸಂಸ್ಕಾರ ಮನೆಯಿಂದ ಬರಬೇಕು- ಉದಯಕುಮಾರ್ ರೈ

ಕಾಣಿಯೂರು: ಪ್ರಗತಿ ವಿದ್ಯಾಸಂಸ್ಥೆ, ಕಾಣಿಯೂರಿನಲ್ಲಿ ಶಿಕ್ಷಕ ರಕ್ಷಕ ಸಂಘದ ಸಭೆಯು ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರೂ, ವಿದ್ಯಾಬೋಧಿನಿ ಪ್ರೌಢಶಾಲೆಯ ಸಹಶಿಕ್ಷಕರೂ ಆದ ಉದಯ ಕುಮಾರ್ ರೈ ಮಾತನಾಡುತ್ತಾ, ಶಿಕ್ಷಣಸಂಸ್ಥೆ ಬೆಳೆಯುವಲ್ಲಿ ಪೋಷಕರ ಪಾತ್ರ ಹಿರಿದು . ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ಮನೆಯಿಂದಲೇ ಬರಬೇಕು ಅಲ್ಲದೆ ಪೋಷಕರೇ ತಮ್ಮ ಮಕ್ಕಳಿಗೆ ಪ್ರೇರಣೆಯಾಗಿ ಮಾದರಿಯಾಗಬೇಕು ಎಂದರು. ಸಭಾಧ್ಯಕ್ಷತೆಯನ್ನು ವಹಿಸಿರುವ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ಪ್ರಗತಿ ವಿದ್ಯಾಸಂಸ್ಥೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿ ಬೆಳೆಯುತ್ತಿರುವುದು ಪೋಷಕರಾದ ನಮಗೆ ಹೆಮ್ಮೆಯ ವಿಚಾರ ಎಂದರು.

ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಮಾತನಾಡುತ್ತಾ, ಪೋಷಕರು ಸಂಸ್ಥೆಯ ಆಧಾರಗಳು ಸ್ಥಂಭಗಳು. ಸಂಸ್ಥೆ ಬೆಳೆಯುವಲ್ಲಿ ನಿಮ್ಮ ಸಹಕಾರ ಅತೀ ಮುಖ್ಯ ಎಂದರು. ಸಂಸ್ಥೆಯಲ್ಲಿ ಸುದೀರ್ಘ ಕಾಲ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆರಿಸಿದ ಗಿರಿಶಂಕರ್ ಸುಲಾಯರು ವಿದ್ಯಾರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಪೋಷಕರು ಸಹಕರಿಸಬೇಕು. ಆಗ ಮಾತ್ರ ಮಕ್ಕಳಿಂದ ಉತ್ತಮ ಫಲವನ್ನು ನಿರೀಕ್ಷಿಸಬಹುದು ಎಂದರು. ಆಂಗ್ಲ ಮಾಧ್ಯಮದ ಮುಖ್ಯಗುರು ನಾರಾಯಣ ಭಟ್ ಶೈಕ್ಷಣಿಕ ಮಾಹಿತಿಯನ್ನು ನೀಡಿದರು. ಕನ್ನಡ ಮಾಧ್ಯಮದ ಮುಖ್ಯಗುರು ವಿನಯ ವಿ ಶೆಟ್ಟಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಶಿಕ್ಷಕವೃಂದವು ಹಗಲಿರುಳು ಶ್ರಮಿಸುತ್ತಿರುವಾಗ ಪೋಷಕರು ಅದಕ್ಕೆ ಕೈಜೋಡಿಸಬೇಕು ಎಂದರು. ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿಯವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.


ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ , ಸಹ ಆಡಳಿತಾಧಿಕಾರಿ ಹೇಮನಾಗೇಶ್ ರೈ, ಹಿರಿಯ ಶಿಕ್ಷಕಿ ಸವಿತಾ ಕೆ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ಮಾನ್ವಿ ಜಿ ಎಸ್, ರಾಶಿ ಕೆ ಸಿ ,ಗ್ರೀಷ್ಮ ರೈ, ಪ್ರಾರ್ಥಿಸಿದರು. ಆಂಗ್ಲ ಮಾಧ್ಯಮದ ಸಹಮುಖ್ಯಸ್ಥೆ ಅನಿತಾ ಜೆ ರೈ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿಯರಾದ ಚಿತ್ರಕಲಾ ಎಂ ಮತ್ತು ಅನಿತಾ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಭಾರತಿ ಕೆ ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here