ಪುತ್ತೂರು: ಧರೆ ಕುಸಿದು ಮನೆಗೆ ಹಾನಿಯದ ಬನ್ನೂರು ಜೈನರ ಗುರಿಗೆ ಶಾಸಕ ಅಶೋಕ್ ರೈ ಶನಿವಾರ ಭೇಟಿ ನೀಡಿ ಕುಟುಂಬದ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮನೆ ಮಾಲಿಕ ಅಬ್ದುಲ್ ಮಜೀದ್ ಅವರು ನಡೆದ ಘಟನೆ ಬಗ್ಗೆ ಶಾಸಕರಲ್ಲಿ ವಿವರಿಸಿದರು. ಮನೆಯ ಗೋಡೆಗೆ ಧರೆ ಜರಿದು ಬಿದ್ದು ಮಕ್ಕಳು ಮಣ್ಣಿನಡಿಯಲ್ಲಿ ಬಿದ್ದರೂ ಪವಾಡ ಸದೃಶ ಪಾರಾಗಿದ್ದು ಮನೆ ಗೋಡೆ ಮತ್ತು ಮಾಡು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಶಾಸಕರಿಗೆ ತಿಳಿಸಿದರು. ಸ್ಥಳದಿಂದಲೇ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಮನೆ ಹಾನಿಗೊಳಗಾಗಿದ್ದು, ಮನೆ ದುರಸ್ತಿ ಮಾಡಲು ಗರಿಷ್ಠ ಹಣ ಬೇಕಾಗಬಹುದು, ಸರಕಾರದಿಂದ ಸಿಗುವ ಗರಿಷ್ಠ ಮೊತ್ತವನ್ನು ಕುಟುಂಬಕ್ಕೆ ನೀಡಬೇಕಿದೆ. ಬಡವರಾದ ಕಾರಣ ಸದ್ಯಕ್ಕೆ ಅವರಲ್ಲಿ ಮನೆ ದುರಸ್ತಿ ಮಾಡುವ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರೋಶನ್ ರೈ ಬನ್ನೂರು, ಮಹಿಳಾ ಕಾಂಗ್ರೆಸ್‌ನ ಶಾರದಾ ಅರಸ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.