ಪುಣಚ: ಕೃಷಿ ಕ್ಷೇತ್ರದ ಮನೆಗಳಿಗೆ ಸಮೃದ್ದಿ ಗಿಡ ಗೆಳೆತನ ಸಂಘದ ತಂಡ ಭೇಟಿ

0

ಪುಣಚ: ಪುಣಚದ ಕೃಷಿ ಕ್ಷೇತ್ರದ ಡಾl ಸುಚಿತ್ರಾ ಹೊಳ್ಳ ದಂಪತಿಗಳ ತೋಟ, ನವೀನ ಕೃಷ್ಣ ಶಾಸ್ತ್ರಿಯವರ ಕೊಕ್ಕೋ ತೋಟ ಸಂಸ್ಕರಣಾ ಘಟಕ ಹಾಗೂ ರೆಂಜದ ಬಾಲಸುಬ್ರಹ್ಮಣ್ಯರವರ ಅನುತ್ತಮ ಚಾಕಲೇಟು ತಯಾರಿಕಾ ಘಟಕಕ್ಕೆ ಸಮೃದ್ಧಿ ಗಿಡ ಗೆಳೆತನ ಸಂಘದ ಸದಸ್ಯರು ಜೂ.23ರಂದು ಭೇಟಿ ನೀಡಿದರು.

ಸಮೃದ್ಧಿ ಗಿಡ ಗೆಳೆತನ ಸಂಘ ಸುಮಾರು 30 ವರ್ಷಗಳ ಇತಿಹಾಸ ಹೊಂದಿದ್ದು 250ಕ್ಕೂ ಮಿಕ್ಕು ಕೃಷಿಕರು ಸದಸ್ಯರಾಗಿದ್ದಾರೆ. ಸಂಘದ ಸದಸ್ಯರು ತಿಂಗಳಿಗೊಮ್ಮೆ ಕ್ಷೇತ್ರ ಭೇಟಿಗಾಗಿ ವಿವಿಧ ತೋಟಗಳಿಗೆ ಭೇಟಿ ನೀಡಿ ಹೊಸತನ್ನು ನೋಡುವ ಮತ್ತು ಕಲಿಯುವ ಪರಿಪಾಠ ಇಟ್ಟುಕೊಂಡಿದ್ದು, ಸಂಘದಲ್ಲಿ ಬಹಳಷ್ಟು ಜನ 50 ವರ್ಷ ಮೀರಿದ ಕೃಷಿಕರಿರುವುದು ಮತ್ತು ಅವರೆಲ್ಲರೂ ಇಂತಹ ಪ್ರವಾಸದಲ್ಲಿ ಸಕ್ರಿಯರಾಗಿ ಭಾಗವಹಿಸುವುದು ವಿಶೇಷ. ಪ್ರವಾಸದ ದಿನ ಸದಸ್ಯರು ತಮ್ಮಲ್ಲಿರುವ ಗಿಡ, ಬೀಜಗಳನ್ನು ತಂದು ಪರಸ್ಪರ ಹಂಚಿಕೊಳ್ಳುವುದು ಸಂಘದ ಹೆಸರಿಗೆ ತಕ್ಕಂತೆ ನಡೆಯುತ್ತಿರುವುದಕ್ಕೆ ಸಾಕ್ಷಿ.

ಪುಣಚ ಗ್ರಾಮದ ನವೀನ ಕೃಷ್ಣ ಶಾಸ್ತ್ರಿ ಅವರ Grandpa’s Farm ಕೊಕ್ಕೋ ತೋಟ ಹಾಗೂ ಕೊಕ್ಕೋ ಸಂಸ್ಕರಣ ಘಟಕವನ್ನು ವೀಕ್ಷಿಸಿದ ಅವರು ಕೊಕ್ಕೋದಿಂದ ತಯಾರಿಸುವ ಹೊಸ ಹೊಸ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನವೀನಕೃಷ್ಣ ಶಾಸ್ತ್ರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೋರೋನ ಕಾಲದಲ್ಲಿ ಮಾರುಕಟ್ಟೆ ಸಮಸ್ಯೆ ಹೇಗೆ ತಾವು ಮೌಲ್ಯವರ್ಧನೆ ಮಾಡಲು ಹೊಸ ದಾರಿ ತೋರಿಸಿತು ಎನ್ನುವುದನ್ನು ವಿವರಿಸಿದರು. ಹಾಗೂ ಬಿಡುಗಡೆ ಮಾಡುತ್ತಿರುವ ಹೊಸ ಉತ್ಪನ್ನದ ಬಗ್ಗೆ ಮಾಹಿತಿ ನೀಡಿದರು.
ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದ ಶ್ರೀಪಡ್ರೆಯವರು ಮಾತನಾಡಿ ಇಂತಹ ಮೌಲ್ಯವರ್ಧನೆಯ ಅಗತ್ಯದ ಬಗ್ಗೆ ಒತ್ತಿ ಹೇಳುತ್ತಾ ಹಲವಾರು ಉದಾಹರಣೆಗಳನ್ನು ನೀಡಿ ಇನ್ನೂ ಹೆಚ್ಚಿನ ಕೃಷಿಕರು ಈ ರೀತಿಯಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದಕ್ಕೆ ಮುಂದೆ ಬರುವಂತೆ ಕರೆ ನೀಡಿದರು.
ಡಾ.ಯದುಕುಮಾರ್ ಮಾತನಾಡಿ ಡಾ.ಸುಚಿತ್ರಾ ಹೊಳ್ಳ ದಂಪತಿಗಳ ತೋಟ ಮತ್ತು ನವೀನಕೃಷ್ಣ ಶಾಸ್ತ್ರಿ ಅವರ ತೋಟ ಮತ್ತು ಮೌಲ್ಯವರ್ಧನೆ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹಾಗೂ ಶಾಸ್ತ್ರಿಗಳಿಗೆ ತಾಂತ್ರಿಕತೆಯ ಬಗ್ಗೆ ವಿಟ್ಲದ cpcri ನಿರ್ದೇಶಕರ ಜೊತೆ ಸಂಪರ್ಕ ಮಾಡಿಸಿಕೊಡುವ ಭರವಸೆ ನೀಡಿದರು.
ಇನ್ನೊಬ್ಬ ಅತಿಥಿ ಮುಳಿಯ ವೆಂಕಟಕೃಷ್ಣ ಶರ್ಮರು ಮಾತನಾಡಿ ಹಲಸು ಬಾಳೆಹಣ್ಣು ಮುಂತಾದ ವಸ್ತುಗಳ ಮೌಲ್ಯವರ್ಧನೆಯ ಬಗ್ಗೆ ಅನುಭವ ಹಂಚಿಕೊಂಡರು.
ಉಪ್ಪು ಮತ್ತು ಸಕ್ಕರೆ ಪಾಕ ಸೇರಿಸಿದ cacao bits ಅನ್ನುವ ಉತ್ಪನ್ನವನ್ನು ಶ್ರೀಪಡ್ರೆ ಅವರ ಕೈಯಿಂದ ಬಿಡುಗಡೆಗೊಳಿಸಲಾಯಿತು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನಿರಂಜನ್ ಪೋಳ್ಯ ಅವರು ಇಂದು ಸಮಾಜದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು ಜನರಿಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಕೊಂಡುಕೊಳ್ಳುವ ಶಕ್ತಿ ಹೆಚ್ಚಾಗಿದೆ, ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಕೃಷಿಕನೂ ತನಗೆ ಸಾಧ್ಯವಾದ ಮಟ್ಟಿಗೆ ಮೌಲ್ಯವರ್ಧನೆ ಮಾಡುವತ್ತ ಗಮನ ಹರಿಸಬೇಕು, ನವೀನ ಕೃಷ್ಣ ಶಾಸ್ತ್ರಿ ಅವರ ಈ ಹೊಸ ಉತ್ಪನ್ನದ ರುಚಿ ಸವಿದಿದ್ದೇನೆ, ಇದು ಗ್ರಾಹಕರಿಗೆ ಪ್ರಿಯವಾಗುವುದರಲ್ಲಿ ಅನುಮಾನವೇ ಇಲ್ಲ ಅಂದರು. ಸಂಘವು ಮುಂಬರುವ ದಿನಗಳಲ್ಲಿ ಸದಸ್ಯರಿಗಾಗಿ ಕಸಿ ತರಬೇತಿ, ಮಳೆಗಾಲದ ತರಕಾರಿ ಮತ್ತು ಕೋಸು ಗಡ್ಡೆಗಳನ್ನು ಬೆಳೆಯುವ ಬಗ್ಗೆಯೂ ತರಬೇತಿಗಳನ್ನು ಹಮ್ಮಿಕೊಳ್ಳಲಿದೆ ಅಂದರು.

ಸಂಘದ ಕಾರ್ಯದರ್ಶಿಗಳಾದ ಶಿವಪ್ರಕಾಶ್ ಪೆಲಪ್ಪಾರು ಅವರು ಕಾರ್ಯಕ್ರಮ ನಿರೂಪಿಸಿದರು.

ಹಲವಾರು ಸದಸ್ಯರು ಈ ಹೊಸ ಉತ್ಪನ್ನದ ಜೊತೆಗೆ cacao nibs, coco mass ಇತ್ಯಾದಿಗಳನ್ನು ಖರೀದಿಸಿ ಶಾಸ್ತ್ರಿಗಳ ಪ್ರಯತ್ನಕ್ಕೆ ಬೆಂಬಲ ಸೂಚಿಸಿದರು.
ಸಂಘದ ಸಂಪ್ರದಾಯದಂತೆ ನವೀನ ಕೃಷ್ಣ ಶಾಸ್ತ್ರಿಗಳ ಕುಟುಂಬಕ್ಕೆ ರಾಗಾಳಿ ಮಾವಿನ ಗಿಡ ಕೊಟ್ಟು ಗೌರವಿಸಲಾಯಿತು. ಮನೆಯವರು ಅತಿಥಿಗಳಿಗೆ ಮಂಕುವಾ ಅನ್ನುವ ವಿಶೇಷ ತಳಿಯ ಕೋಕೋ ಗಿಡಗಳನ್ನು ಕೊಟ್ಟು ತಮ್ಮ ಪ್ರೀತಿ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಪುಣಚ ಡಾI.ಸುಚಿತ್ರಾ ಹೊಳ್ಳ ದಂಪತಿಗಳ ತೋಟಗಳ ವಿಶೇಷತೆಯನ್ನು ವೀಕ್ಷಿಸಿ, ದೂರನಿರ್ದೇಶಿತ ನೀರಾವರಿಯಲ್ಲಿ ಅವರ ಸಾಧನೆ ಮೆಚ್ಚಿ ಅಭಿನಂದನೆ ಸಲ್ಲಿಸಿದರು ನೆನಪಿನ ಕಾಣಿಕೆಯಾಗಿ ರಾಗಾಳಿ ತಳಿಯ ನಾಡಮಾವಿನ ಗಿಡ ನೀಡಿ ಗೌರವಿಸಿದರು. ಬಳಿಕ ರೆಂಜ ಕುವೆಂಜದ ಬಾಲಸುಬ್ರಹ್ಮಣ್ಯರವರ ಅನುತ್ತಮ ಚಾಕಲೇಟು ತಯಾರಿಕಾ ಘಟಕಕ್ಕೆ ಭೇಟಿ ನೀಡಿದರು.
ಚಾಕೊಲೇಟ್ ತಯಾರಿಕಾ ಹಂತಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ತಯಾರಿಕಾ ಘಟಕದ ಬಾಲಸುಬ್ರಹ್ಮಣ್ಯರವರು ಮಾತನಾಡಿ ತಯಾರಿಸಿದ ಚಾಕಲೇಟ್’ನ ಅರೋಗ್ಯಕರ ಗುಣಗಳ ಬಗ್ಗೆ ಮಾಹಿತಿ ನೀಡಿದರು.
ಸಂಘದ ಪರವಾಗಿ ಹಿರಿಯ ಸದಸ್ಯರು ಬಾಲಸುಬ್ರಹ್ಮಣ್ಯರವರಿಗೆ ಸುಬ್ಬಾ ರೆಡ್ ತಳಿಯ ನಾಡ ಮಾವಿನ ಗಿಡ ಕೊಟ್ಟು ಗೌರವಿಸಿದರು.

LEAVE A REPLY

Please enter your comment!
Please enter your name here