ಜು.4: ಪುತ್ತೂರಿನಲ್ಲಿ ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಜಿಲ್ಲಾ ಮಟ್ಟದ ಮಹಾ ತರಬೇತಿ ಕಾರ್ಯಾಗಾರ

0

ಪುತ್ತೂರು:ದ.ಕ ಜಿಲ್ಲಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಜಿಲ್ಲಾ ಮಟ್ಟದ ಮಹಾ ತರಬೇತಿ ಕಾರ್ಯಾಗಾರವು ಜು.4ರಂದು ಬೆಳಿಗ್ಗೆ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿಯ ಮಾತೃಛಾಯ ಸಭಾಂಗಣದಲ್ಲಿ ನಡೆಯಲಿದೆ ಎಂದು ವೇದಿಕೆಯ ಗೌರವ ಸಲಹೆಗಾರೆ ಕಸ್ತೂರಿ ಬೊಳುವಾರು ಹೇಳಿದರು.


ಜು.1ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧುನಿಕ ಸಮಾಜದ ವ್ಯವಸ್ಥೆಯಲ್ಲಿ ಶಿಕ್ಷಣವು ಬಹುಮುಖ್ಯವಾಗಿದೆ. ಶಿಕ್ಷಣ ಪ್ರತಿ ಮಗುವಿನ ಹಕ್ಕು. ಗುಣಾತ್ಮಕ ಶಿಕ್ಷಣದ ಅನುಷ್ಟಾನದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಬೆಳೆಸುವಲ್ಲಿ ಮಗು ಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಶಿಕ್ಷಣದ ಸಾರ್ವತ್ರೀಕರಣದ ಹೊರತಾಗಿ ಸಾಮಾಜಿಕ ಸಮಾನತೆ ಕಾಣಲು ಸಾಧ್ಯವಿಲ್ಲ. ಉಳ್ಳವರ ಮಕ್ಕಳಿಗೊಂದು ಶಿಕ್ಷಣ, ಮಧ್ಯಮ ವರ್ಗ ಮತ್ತು ಕಡು ಬಡವರಿಗೊಂದು ಶಿಕ್ಷಣ ವ್ಯವಸ್ಥೆಯಿಂದ ಸಮಾನತೆ ಬೆಳೆಸಲು ಸಾಧ್ಯವಾಗದು. 2009ರಲ್ಲಿ ಜಾರಿಯಾಗಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಮತ್ತು ಸಂವಿಧಾನ ರಚನೆಯಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಬೇಕೆಂದು ಉಲ್ಲೇಖಿಸಿದ್ದರೂ ಕೂಡಾ ಇಂದಿನ ಮಾನವ ಜೀವಿ ತನ್ನ ಬದುಕನ್ನು ಕಟ್ಟಿಕೊಳ್ಳಲು 14 ವರ್ಷ ದವರೆಗೆ ಪಡೆಯುವ ಶಿಕ್ಷಣ ಸಾಕೆ ಎಂದು ಆಲೋಚಿಸಬೇಕಾಗಿದೆ ಎಂದು ಹೇಳಿದರು.


ಮಗುವಿನ ಗುಣಾತ್ಮಕ ಕಲಿಕೆಗೆ ಪೂರಕ ವಾತಾವರಣಗಳು ಶಾಲೆಯಲ್ಲಿ ಮುಖ್ಯವಾಗಿರಬೇಕು. ಇದಕ್ಕಾಗಿ ಶಾಲಾ ಕಟ್ಟಡ, ಶಿಕ್ಷಕರು, ವಿಷಯವಾರು ಶಿಕ್ಷಕರು, ಬಾಷಾವಾರು ಶಿಕ್ಷಕರು, ಅರೆಕಾಲಿಕ ವೃತ್ತಿ ಶಿಕ್ಷಕರ ನೇಮಕಾತಿಯಾಗಬೇಕು. ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಾದ ನೀರು, ಶೌಚಾಲಯ, ಪೀಠೋಪಕರಣ, ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ, ಅಟದ ಪರಿಕರಗಳು, ಇತ್ಯಾದಿ ಶಿಕ್ಷಣದ ವಿವಿಧ ಪಾಲುದಾರರರ ನಡುವಿನ ಸಮನ್ವಯತೆಯನ್ನು ಬಲಪಡಿಸುವುದು ಹಾಗು ಎಸ್.ಡಿ.ಎಂ.ಸಿ ಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅವುಗಳ ಸಬಲೀಕರಣದ ಅವಶ್ಯಕತೆ ಇರುತ್ತದೆ. ಹಾಗು ಸ್ಥಳೀಯ ಸರಕಾರ ಇಲಾಖೆಗಳು, ಸಂಘಸಂಸ್ಥೆಗಳು, ಜನಪ್ರತಿನಿಧಿಗಳನ್ನು ಒಳಗೊಂಡಂತೆ ವಿವಿಧ ಪಾಲುದಾರರೊಡನೆ ಸಮನ್ವಯತೆಯನ್ನು ಬಲಪಡಿಸಬೇಕಾಗಿದೆ. ಈ ಎಲ್ಲಾ ಉದ್ದೇಶಕ್ಕಾಗಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಎಸ್.ಡಿ.ಎಂ.ಸಿಗಳನ್ನು ಒಗ್ಗೂಡಿಸಿ ಕಾರ್ಯಾಗಾರವನ್ನು ನಡೆಸಿ ಎಸ್.ಡಿ.ಎಂ.ಸಿಗಳನ್ನು ಸಬಲೀಕರಣಗೊಳಿಸುವ ನಿಟ್ಟನಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಇದರಲ್ಲಿ ದ.ಕ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡಬಿದ್ರೆ ಮತ್ತು ಕಡಬ ತಾಲೂಕಿನ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಭಾಗವಹಿಸಲಿದ್ದಾರೆ. ನಂತರದಲ್ಲಿ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಮತ್ತು ಕ್ಲಸ್ಟರ್ ಹಂತದಲ್ಲಿ ತರಬೇತಿಯನ್ನು ನಡೆಸಲಾಗುವುದು ಎಂದು ಹೇಳಿದರು.


ಈ ತರಬೇತಿ ಕಾರ್ಯಾಗಾರದಲ್ಲಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಸಂಸ್ಥಾಪಕ ಮಹಾ ಪೋಷಕರು, ಅಭಿವೃದ್ಧಿ ಶಿಕ್ಷಣ ತಜ್ಞ ಡಾ. ನಿರಂಜನ ಆರಾಧ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಉಮೇಶ್ ಜಿ.ಗಂಗಾವಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕಾರ್ಯಕ್ರಮವನ್ನು ದ.ಕ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರು ಕಸ್ತೂರಿ ಬೊಳುವಾರು ಉದ್ಘಾಟಿಲಿದ್ದಾರೆ. ಸಮನ್ವಯ ವೇದಿಕೆ ಜಿಲ್ಲಾಧ್ಯಕ್ಷ ಎಸ್.ಎಂ ಇಸ್ಮಾಯಿಲ್ ನೆಲ್ಯಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ದ,ಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ರಾಜ್ಯ ಸಮನ್ವಯ ವೇದಿಕೆ ಕಾರ್ಯದರ್ಶಿ ಪಾರ್ವತಿ, ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘದ ಕಾರ್ಯದರ್ಶಿ ವಿಮಲ್ ಕುಮಾರ್, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಕಡಬ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಮಲ್ಲಾರ, ಪುತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮಹಮ್ಮದ್ ರಫೀಕ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಕಸ್ತೂರಿ ಬೊಳುವಾರು ತಿಳಿಸಿದರು.
ದ.ಕ ಜಿಲ್ಲಾ ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಇಸ್ಮಾಯಿಲ್ ಎಸ್.ಎಂ., ಪ್ರಧಾನ ಕಾರ್ಯದರ್ಶಿ ಕೃಷ್ಣ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್ ಆಚಾರ್ಯ, ರಾಜೇಶ್ವರಿ, ಮಾಧ್ಯಮ ಕಾರ್ಯದರ್ಶಿ ಬಿ,ಕೆ ಅಝೀಝ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here