ಅರಿಯಡ್ಕ: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಜು.1 ರಂದು ಅರಿಯಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಂಘದ ಸಾಲ ಸೌಲಭ್ಯ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ ,ನಮ್ಮ ಸಹಕಾರಿ ಸಂಘ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಲ್ಲಿ ರೈತರ ಕಾರ್ಯಾಗಾರ ಏರ್ಪಡಿಸಿ ವಿವಿಧ ರೀತಿಯ ಸೌಲಭ್ಯಗಳ ಮಾಹಿತಿ ನೀಡುತ್ತಿದ್ದೇವೆ.ಈ ಕಾರ್ಯಕ್ರಮದ ಬಗ್ಗೆ ರೈತರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಸಂಘದ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಬಿ ಆರ್ ರವರು, ಸಂಘದ ಸಾಲ ಸೌಲಭ್ಯ, ಹವಾಮಾನ ಆಧಾರಿತ ಬೆಳೆ ವಿಮೆ, ಯಶಸ್ವಿನಿ ಆರೋಗ್ಯ ವಿಮೆ, ಸಂಘದಲ್ಲಿ ಸಿಗುವ ರಾಸಾಯನಿಕ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.ಹಿರಿಯ ಸಹಕಾರಿ ಶಿವಪ್ಪ ಕುಲಾಲ್ ಕೌಡಿಚ್ಚಾರು ಸಂಘದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ ಪ್ರಕ್ರಿಯೆ ನಡೆಯಿತು.
ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಉಪಾಧ್ಯಕ್ಷ ಮೀನಾಕ್ಷಿ ಪಾಪೆ ಮಜಲು, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಉಮೇಶ್ ಗೌಡ ಕನ್ನಯ, ನಿರ್ದೇಶಕ ಅರಿಯಡ್ಕ ವಿನೋದ್ ಕುಮಾರ್ ಶೆಟ್ಟಿ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿ ಗಳು, ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ರೈತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕುಂಬ್ರ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ್ ರಾಜ್ ಪ್ರಕಾಶ್ ರೈ ಸ್ವಾಗತಿಸಿ, ತಿಲಕ್ ರೈ ಕುತ್ಯಾಡಿ ವಂದಿಸಿದರು.