ಸಾಮೆತ್ತಡ್ಕ ಸ.ಹಿ.ಪ್ರಾ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಚಾಲನೆ

0

ಹಳ್ಳಿಯ ಕಟ್ಟಕಡೇಯ ವ್ಯಕ್ತಿಯ ಮಕ್ಕಳೂ ಇಂಗ್ಲೀಷ್ ಕಲಿತರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ : ಅಶೋಕ್ ರೈ

ಪುತ್ತೂರು: ಇಲ್ಲಿನ ಪ್ರತೀಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಕನ್ನಡದ ಜೊತೆ ಆಂಗ್ಲ ಭಾಷೆಯ ಜ್ಞಾನವೂ ಇಂದಿನ ಕಾಲದ ಅಗತ್ಯ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಆರಂಭ ಮಾಡುತ್ತಿದೆ. ಹಳ್ಳಿಯ ಕಟ್ಟಕಡೇಯ ವ್ಯಕ್ತಿಯ ಮಕ್ಕಳೂ ಇಂಗ್ಲೀಷ್ ಕಲಿತರೆ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಾಗುತ್ತದೆ ಎಂದು ಶಾಸಕ ಅಶೋಕ್ ರೈ ಹೇಳಿದರು.ಅವರು ನಗರದ ಸಾಮೆತ್ತಡ್ಕ ಸರಕಾರಿ ಹಿ ಪ್ರಾ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಾದ್ಯಂತ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಸರಕಾರ ಅನುಮತಿ ನೀಡುತ್ತಿದೆ. ಕೆಪಿಎಸ್ ಶಾಲೆಗಳಲ್ಲಿ ಮಾತ್ರ ಇದ್ದ ಈ ವ್ಯವಸ್ಥೆ ಈಗ ಎಲ್ಲಾ ಶಾಲೆಗಳಿಗೂ ವಿಸ್ತರಣೆಯಾಗುತ್ತಿದೆ. ಆಂಗ್ಲ ಮಾಧ್ಯಮ ತರಗತಿಗೆ ಪುತ್ತೂರಿನಿಂದ ಎರಡು ಮತ್ತು ಬಂಟ್ವಾಳ ವ್ಯಾಪ್ತಿಯಿಂದ ಎರಡು ಅರ್ಜಿಗಳು ಮಾತ್ರ ಬಂದಿದೆ. ಬೇಡಿಕೆಗಳು ಬಂದಲ್ಲಿ ಇನ್ನೂ ಹೆಚ್ಚಿನ ಶಾಲೆಗಳಿಗೆ ಅನುಮತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಇಂದು ಇಂಗ್ಲೀಷ್ ಅನಿಯವಾರ್ಯತೆಯನ್ನು ಸೃಷ್ಟಿಸಿದೆ. ಮಾತೃಭಾಷೆಯ ಜೊತೆಗೆ ಆಂಗ್ಲ ಭಾಷೆಯನ್ನು ಮಕ್ಕಳಿಗೆ ಕಲಿಸಬೇಕಿದೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇಲ್ಲ ಎಂಬ ಕೊರತೆ ಇತ್ತು ಅದನ್ನು ನೀಗಿಸಲು ಸರಕಾರ ಮುಂದಾಗಿದೆ. ಈಗಾಗಲೇ ಶಿಕ್ಷಕರ ಕೊರತೆಯಿರುವಲ್ಲಿ ಶಿಕ್ಷಕರ ನೇಮಕ ಮಾಡಲಾಗಿದೆ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಕೆಪಿಎಸ್ ಶಾಲೆಗೆ ಮರ್ಜಿ ಮಾಡುವ ಮೂಲಕ ಒಂದೇ ಕಡೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಸರಕಾರ ಮಾಡಲಿದೆ. ಪ್ರತೀ ಎರಡು ಗ್ರಾಮಕ್ಕೆ ಒಂದು ಕೆಪಿಎಸ್ ಸ್ಕೂಲ್ ಆರಂಭವಾಗಲಿದೆ. ಶತಮಾನ ಕಂಡ ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 50 ಕ್ಕಿಂತ ಕೆಳಗಿರುವುದು ಬೇಸರದ ಸಂಗತಿಯಾಗಿದೆ. ಪೋಷಕರು ಸರಕಾರಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳನ್ನು ದಾಖಲಿಸುವಷ್ಟರ ಮಟ್ಟಿಗೆ ಸರಕಾರಿ ಶಾಲೆ ಅಭಿವೃದ್ದಿಯಾಗಲಿದೆ, ಸರಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಶಾಸಕರು ಹೇಳಿದರು.

ಹಲವು ವರ್ಷಗಳ ಬೇಡಿಕೆ..!
ಸಾಮೆತ್ತಡ್ಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಗೆ ಅನುಮತಿ ಬೇಕೆಂದು ಶಾಲಾ ಅಭಿವೃದ್ದಿ ಸಮಿತಿಯವರು ಅನೇಕ ವರ್ಷಗಳಿಂದ ತಮ್ಮ ಬೇಡಿಕೆಯನ್ನು ಇರಿಸಿದ್ದರು. ಹಲವು ಬಾರಿ ಕಳೆದ ಆರು ವರ್ಷಗಳಿಂದ ಬೆಂಗಳೂರಿನಲ್ಲಿ ಅಲೆದಾಟ ನಡೆಸಿದ್ದರು. ಜನಪ್ರತಿನಿಧಿಗಳ ಬಳಿಗೂ ತೆರಳಿ ಮನವಿ ಮಾಡಿದ್ದರು ಆದರೆ ಬೇಡಿಕೆ ಈಡೇರಿರಲಿಲ್ಲ. ಶಾಸಕನಾದ ಒಂದೇ ವರ್ಷದಲ್ಲಿ ಇಲ್ಲಿನ ಶಿಕ್ಷಣ ಪ್ರಿಯರ ಬೇಡಿಕೆಯನ್ನು ಈಡೇರಿಸಿಲಾಗಿದೆ. ಇಲ್ಲಿನ ಪ್ರತೀಯೊಂದು ಮಗು ಕೂಡಾ ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಎಂಬುದೇ ನನ್ನ ಉದ್ದೇಶವಾಗಿದೆ ಎಂದು ಹೇಳಿದರು.

ಸರಕಾರಿ ಶಾಲೆಗಲ್ಲಿ ಗುಣಮಟ್ಟದ ಶಿಕ್ಷಣ ಇದೆ
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ ಅದಕ್ಕಾಗಿ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಬಿತರಾಗಿದ್ದಾರೆ. ಈಗ ಸರಕಾರಿ ಶಾಲೆಗಳಲ್ಲಿ ಯಾವುದೇ ಕೊರತೆಗಳಿಲ್ಲ. ಶಿಕ್ಷಕರ ಕೊರತೆಯಿಲ್ಲ, ಕೆಲವು ಕಡೆಗಳಲ್ಲಿ ಕೊಠಡಿಗಳ ಕೊರತೆ ಇರಬಹುದು. ಮುಂದಿನ ದಿನಗಳಲ್ಲಿ ಅವುಗಳನ್ನು ಪರಿಹರಿಸಲಾಗುವುದು. ಸಾಮೆತ್ತಡ್ಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಪ್ರಾರಂಭವಾಗಿರುವುದು ಈ ಭಾಗದ ಮಕ್ಕಳಿಗೆ ವರದಾನವಾಗಿ ಪರಿಣಮಿಸಲಿದೆ. ಉತ್ತಮ ಶಿಕ್ಷಕರ ನೇಮಕಾತಿಯೂ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹೇಳಿದರು.

ಈಗ ಕಾಲಕೂಡಿ ಬಂತು
ಹಲವು ವರ್ಷಗಳಿಂದ ನಾವು ಇಂತಹದ್ದೊಂದು ಕ್ಷಣಕ್ಕೆ ಕಾಯುತ್ತಿದ್ದೆವು ಈಗ ಕಾಲ ಕೂಡಿಬಂತು. ಶಾಸಕರ ಮುತುವರ್ಜಿಯಿಂದ ನಮ್ಮ ಶಾಲೆಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿ ದೊರಕಿದೆ ಇದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ, ಶಾಲೆಯ ಸ್ಥಾಪಕಾಧ್ಯಕ್ಷರೂ, ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್ ಹೇಳಿದರು. ಅಶೋಕ್ ರೈಯವರಿಗೆ ಮನವಿ ಕೊಟ್ಟ ಬಳಿಕ ನಾವು ಎಲ್ಲಿಗೂ ಹೋಗಲಿಲ್ಲ, ಕಚೇರಿಗೆ ಅಲೆದಾಟವೂ ಮಾಡಲಿಲ್ಲ ಎಲ್ಲವನ್ನೂ ಅವರೇ ಮಾಡಿಕೊಟ್ಟಿದ್ದು ಶಿಕ್ಷಣದ ಮೇಲಿನ ಕಾಳಜಿಗೆ ನಾನು ಅಬಾರಿಯಾಗಿದ್ದೇನೆ ಎಂದು ಹೇಳಿದ ಅವರು ಎಲ್ಲಾ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತಾದರೆ ಬಡವರ ಮಕ್ಕಳೂ ಉನ್ನತಿಗೇರುತ್ತಾರೆ ಎಂದು ಹೇಳಿದರು.

ವೇದಿಕೆಯಲ್ಲಿ ನಗರ ಸಭೆ ಸದಸ್ಯರಾದ ಮನೋಹರ್,ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಂದರ ಗೌಡ,,ಟ್ರಸ್ಟ್ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಶೆಟ್ಟಿ,Sಆಒಅ ಅಧ್ಯಕ್ಷರಾದ ಶಿವ ಪ್ರಸಾದ್, ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ,ಟ್ರಸ್ಟಿ ಹಾಗೂ ಡ್ಯಾಶ್ ಮಾರ್ಕೆಟಿಂಗ್ ಮಾಲಕರಾದ ನಳಿನಿ.ಪಿ ಶೆಟ್ಟಿ, ವಿದ್ಯಾಭಿಮಾನಿ ದಿನೇಶ್ ಕಾಮತ್, ಟ್ರಸ್ಟಿ ವೆಂಕಟರಮಣ ಭಟ್, ಟ್ರಸ್ಟಿ ವೆಂಕಟ್ ರಾಜ್,ಯುವಕ ಮಂಡಲದ ಅಧ್ಯಕ್ಷರಾದ ರೋಷನ್ ರೆಬೆಲ್ಲೋ, ಹಿರಿಯ ವಿದ್ಯಾರ್ಥಿ ಸಂಘ ದ ಉಪಾಧ್ಯಕ್ಷರಾದ ಅಶೋಕ್ ಆಚಾರ್,sಉಪಾಧ್ಯಕ್ಷರಾದ ಶ್ರೀಮತಿ ಪವಿತ್ರ,ಮುಖ್ಯ ಶಿಕ್ಷಕಿ ಶ್ರೀಮತಿ ಮರಿಯಾ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿಗಳು ಪ್ರಾರ್ಥನೆ ನೆರವೇರಿಸಿದರು. ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್, ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಫಾಹಿಜ್ ಹಾಗೂ ಎಲ್ಲಾ ಶಿಕ್ಷಕರು ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಕಾರ್ಯಕ್ರಮ ಕ್ಕೆ ಸಹಕರಿಸಿದರು.

LEAVE A REPLY

Please enter your comment!
Please enter your name here