ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ಪೆರ್ನೆಯ ಮೈರಾಕಟ್ಟೆ ಎಂಬಲ್ಲಿ ಮಳೆಗಾಲದಲ್ಲಿ ರೈತನೋರ್ವನ ಕೃಷಿ ತೋಟದಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಕೃಷಿ ನಾಶಕ್ಕೆ ಕಾರಣವಾಗಿದೆ.
ಇಲ್ಲಿನ ವಾಸು ಪೂಜಾರಿ ಎಂಬವರ ತೋಟದ ಬದಿಯಲ್ಲಿ ಚತುಷ್ಪಥ ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಹೆದ್ದಾರಿ ಬದಿ ಚರಂಡಿಯನ್ನು ನಿರ್ಮಿಸಲಾಗಿದ್ದು, ನೀರು ಹರಿಯುವ ದಿಕ್ಕಿನ ಚರಂಡಿ ಎತ್ತರವಾಗಿರುವುದರಿಂದ ಚರಂಡಿಯೊಳಗಿನಿಂದ ಬರುವ ನೀರು ಮುಂದೆ ಹರಿಯದೇ ಚರಂಡಿಯಿಂದ ಉಕ್ಕೇರಿ ಕೆಳಭಾಗದಲ್ಲಿರುವ ವಾಸು ಪೂಜಾರಿ ಅವರ ತೋಟಕ್ಕೆ ಹರಿಯುತ್ತಿದೆ. ಇದರಿಂದ ಅವರ ತೋಟ ಸಂಪೂರ್ಣ ಮುಳುಗಡೆಯಾಗುತ್ತಿದ್ದು, ಅದರಲ್ಲಿರುವ ಅಡಿಕೆ, ತೆಂಗು ಹಾಗೂ ಬಾಳೆಗಿಡಗಳ ಸುತ್ತ ನೀರು ನಿಂತು ಕೃಷಿ ಹಾನಿಗೆ ಕಾರಣವಾಗಿದೆ. ಈ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಿದರೂ, ಅದು ತಮ್ಮ ವ್ಯಾಪ್ತಿಯಲ್ಲಿಲ್ಲ ಹೆದ್ದಾರಿ ಪ್ರಾಧಿಕಾರದವರನ್ನು ಸಂಪರ್ಕಿಸಿ ಎಂದು ಸೂಚಿಸಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇವರ ಕೈಗೆ ಸಿಗದಂತಾಗಿದ್ದಾ
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸಂತ್ರಸ್ತ ವಾಸು ಪೂಜಾರಿಯವರು, ತನ್ನ ಬಹುತೇಕ ಭೂಮಿಯು ಹೆದ್ದಾರಿಗಾಗಿ ಬಿಟ್ಟುಕೊಟ್ಟಿದ್ದೇನೆ. ಉಳಿದ ತೋಟ ಕೂಡಾ ನೀರಿನಿಂದಾವೃತವಾಗುವಂತಾಗಿ ಕೃಷಿ ನಾಶವುಂಟಾಗಿದೆ ಎನ್ನುತ್ತಾರೆ.
ಈ ಬಗ್ಗೆ ಪೆರ್ನೆ ಗ್ರಾ.ಪಂ. ಸದಸ್ಯ ಕೇಶವ ಪೂಜಾರಿ ಸುಣ್ಣಾಣ ಮಾತನಾಡಿ, ಈ ವಿಚಾರ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿದೆ. ಹೆದ್ದಾರಿ ಪ್ರಾಧಿಕಾರದವರು ಹಾಗೂ ಕಾಮಗಾರಿ ಗುತ್ತಿಗೆದಾರರು ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಮುಂದೆ ಆಗುವ ನಷ್ಟಕ್ಕೆ ಹೆದ್ದಾರಿ ಇಲಾಖೆಯೇ ಹೊಣೆ ಎಂದಿದ್ದಾರೆ.