ಉಪ್ಪಿನಂಗಡಿ: ಇಲ್ಲಿನ ಕುಮಾರಧಾರ ನದಿಯ ಹಳೆ ಸೇತುವೆಯ ಮೇಲೆ ನದಿಗೆ ಇಣುಕುವವರು, ಸೆಲ್ಫಿ ತೆಗೆಯುವವರು, ಗಾಳ ಹಾಕುವವರು ಹೆಚ್ಚಾಗಿದ್ದರಿಂದ ಸುರಕ್ಷತೆಯ ದೃಷ್ಟಿಯಿಂದ ದ.ಕ. ಜಿಲ್ಲಾಧಿಕಾರಿಯವರ ಆದೇಶದಂತೆ ಈ ಸೇತುವೆಯ ಮೇಲೆ ಜನಸಂಚಾರ ಹಾಗೂ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಸೇತುವೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್ ತಡೆಯನ್ನು ಅಳವಡಿಸಲಾಗಿದೆ.
ಬ್ರಿಟಿಷರ ಕಾಲದ ಈ ಸೇತುವೆಯು ಹಳೆಯದಾಗಿರುವುದರಿಂದ ಹಲವು ವರ್ಷಗಳ ಹಿಂದೆ ಇದಕ್ಕೆ ಪರ್ಯಾಯವಾಗಿ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಕಬ್ಬಿಣದ ಈ ಸೇತುವೆಯ ತಡೆ ಬೇಲಿಯ ಕಬ್ಬಿಣದ ಸರಳುಗಳು ಈ ಹಿಂದೆಯೇ ಕಳ್ಳರ ಪಾಲಾಗಿತ್ತು. ತೆಗೆಯಲು ಕಷ್ಟ ಸಾಧ್ಯವಾಗಿರುವಂತದ್ದು ಮಾತ್ರ ಈ ಸೇತುವೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಆದರೂ ಈ ಸೇತುವೆಯಲ್ಲಿ ದ್ವಿಚಕ್ರ ವಾಹನಗಳು, ರಿಕ್ಷಾ, ಕಾರುಗಳು ಸಂಚರಿಸುತ್ತಿದ್ದವು. ಕತ್ತಲಾಗುತ್ತಿದ್ದಂತೆಯೇ ನದಿಗೆ ಗಾಳ ಹಾಕುವವರು ಇಲ್ಲಿ ಜಮಾಯಿಸುತ್ತಿದ್ದರು. ಅಲ್ಲದೇ, ಈ ಸೇತುವೆಯ ಮೇಲೆ ನಿಂತು ನದಿ ನೀರನ್ನು ನೋಡುವುದು. ಸೆಲ್ಫಿ ತೆಗೆಯುವುದು ಹೆಚ್ಚಾಗ ತೊಡಗಿತ್ತು. ಇದರ ಕಬ್ಬಿಣದ ಸರಳುಗಳ ತಡೆಬೇಲಿಯನ್ನು ಕಳ್ಳರು ಅಲ್ಲಲ್ಲಿ ಕಿತ್ತಿದ್ದರಿಂದ ಸಂಭಾವ್ಯ ಅಪಾಯದ ಸಾಧ್ಯತೆಯೂ ಹೆಚ್ಚಾಗಿತ್ತು. ಈ ಬಗ್ಗೆ ಯಾರೋ ಪೋಟೋ ತೆಗೆದು ಜಿಲ್ಲಾಧಿಕಾರಿಯವರಿಗೆ ಕಳುಹಿಸಿದ್ದು, ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ನದಿಯು ತುಂಬಿ ಹರಿಯುವ ಸಂದರ್ಭದಲ್ಲಿ ಸಂಭಾವ್ಯ ಅಪಾಯಕ್ಕೆ ಸಿಲುಕುವ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ ಸೇತುವೆಯಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರವನ್ನು ನಿಷೇಧಿಸಿ ಅಗತ್ಯ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತಕ್ಕೆ ಸೂಚಿಸಿದ್ದರು. ಅದರಂತೆ ಗುರುವಾರ ಉಪ್ಪಿನಂಗಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಲಾರೆನ್ಸ್ ವಿಲ್ಫ್ರೇಡ್ ರೊಡ್ರಿಗಸ್, ಗ್ರಾ.ಪಂ. ಸದಸ್ಯ ಧನಂಜಯ ನಟ್ಟಿಬೈಲು ಅವರು ದಿನೇಶ್ ಬಿ. ನೇತೃತ್ವದ ಗೃಹರಕ್ಷಕ ದಳದ ನೆರವಿನೊಂದಿಗೆ ಸೇತುವೆಯ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಯಿತು.