ಪುತ್ತೂರು: ಮುಳುಗು ಸೇತುವೆ ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದ ದೇವಸ್ಯ -ದೇರ್ಲ ಲೋಕೋಪಯೋಗಿ ಇಲಾಖೆಗೆ ಸೇರಿದ ಸಂಪರ್ಕ ರಸ್ತೆಯ ಚೆಲ್ಯಡ್ಕದಲ್ಲಿರುವ ಸೇತುವೆ ಪ್ರತಿ ವರ್ಷದ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿತ್ತು. ಈ ವರ್ಷದ ಪ್ರಥಮ ಮಳೆಗೂ ಸೇತುವೆ ಮುಳುಗಡೆಯಾಗಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ರವರು ಮುಂಜಾಗೃತ ಕ್ರಮವಾಗಿ ಸೇತುವೆ ಮೇಲೆ ಘನ ವಾಹನ ಸಂಚಾರವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಯವರ ಆದೇಶದಿಂದ ಚೆಲ್ಯಡ್ಕ ಭಾಗದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಬಡ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಆದೇಶವನ್ನು ಪುನರ್ ಪರಿಶೀಲನೆ ಮಾಡುವಂತೆ ಈ ಭಾಗದ ಜನರು ಮನವಿ ಮಾಡಿಕೊಂಡಿದ್ದರು. ಈ ವಿಷಯವನ್ನು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ಶಕುಂತಳಾ ಟಿ.ಶೆಟ್ಟಿಯವರು ಜಿಲ್ಲಾಧಿಕಾರಿಯವರಿಗೆ ಈ ಸೇತುವೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸೇತುವೆಯು ಹಳೆಯದಾದರೂ ಇದರಿಂದ ಯಾವುದೇ ತೊಂದರೆಯಾಗಿಲ್ಲ ಸೇತುವೆ ಆಳ ಕಡಿಮೆ ಇರುವುದರಿಂದ ಇದು ಮಳೆಗಾಲದಲ್ಲಿ ಕೆಲವೊಮ್ಮೆ ಮುಳುಗಡೆಯಾಗುತ್ತದೆ. ಇದೀಗ ಸೇತುವೆ ಮೇಲೆ ಬಸ್ಸು ಸಂಚಾರ ಇಲ್ಲದೇ ಇರುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿರುವ ಬಗ್ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿಯವರು ೪ ಕಿ.ಮೀ ವ್ಯಾಪ್ತಿಯಲ್ಲಿ ಬಸ್ಸು ಸಂಚಾರ ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಶಕುಂತಳಾ ಟಿ.ಶೆಟ್ಟಿಯವರು, ಈ 4 ಕಿ.ಮೀ ವ್ಯಾಪ್ತಿಯಲ್ಲಿ ಬಸ್ಸು ಸಂಚಾರ ಮಾಡಿದರೂ ಚೆಲ್ಯಡ್ಕ ಸೇತುವೆ ಪ್ರದೇಶದ ಮಧ್ಯ ಭಾಗದಲ್ಲಿರುವ ಜನರು ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಶಾಲಾ, ಕಾಲೇಜು ಮಕ್ಕಳು ನಡೆದುಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್‌ರವರು ಜೊತೆಗಿದ್ದರು. ಅವರಿಗೂ ಸೇತುವೆ ಬಗ್ಗೆ ಶಕುಂತಳಾ ಟಿ.ಶೆಟ್ಟಿಯವರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಯವರ ಜೊತೆ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.