ಪುತ್ತೂರು: ಈಶ್ವರಮಂಗಲ ಸಮೀಪದ ಕುತ್ಯಾಳ ಎಂಬಲ್ಲಿ ಕೃಷಿಕರೋರ್ವರ ತೋಟದಲ್ಲಿ ವಿದ್ಯುತ್ ತಂತಿ ಜೋತು ಬಿದ್ದು ತೀರಾ ಕೆಳಮಟ್ಟದಲ್ಲಿ ಹಾದು ಹೋಗುತ್ತಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ. ಈ ಬಗ್ಗೆ ಕೃಷಿ ತೋಟದ ಮಾಲಕರು ಕುಂಬ್ರ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ನೀಡಿದ್ದಾರೆ.
ಪಡುವನ್ನೂರು ಗ್ರಾಮದ ಕುತ್ಯಾಳ ಎಂಬಲ್ಲಿ ಭಾಸ್ಕರ ಗೌಡ ಎಂಬವರ ಅಡಿಕೆ ತೋಟದಲ್ಲಿ ಸುಮಾರು 54 ವರ್ಷಗಳ ಹಿಂದಿನಿಂದ ವಿದ್ಯುತ್ ಲೈನ್ ಹಾದು ಹೋಗಿರುತ್ತದೆ. ಈಶ್ವರಮಗಲ ಐಐ ಟಿಸಿಯಿಂದ ಹಾದು ಹೋಗುವ ಈ ವಿದ್ಯುತ್ ತಂತಿಗಳಿಗೆ 250 ಮೀಟರ್‌ಗಿಂತಲೂ ಹೆಚ್ಚು ಅಂತರದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಸುಮಾರು 25 ಮನೆಗಳಿಗೆ ಇದೇ ಲೈನ್‌ಗಳ ಮೂಲಕ ವಿದ್ಯುತ್ ಸಂಪರ್ಕವಿರುತ್ತದೆ ಹಾಗೂ 17 ಪಂಪ್‌ಗಳಿಗೆ ಮೂರು ಫೇಸ್ ವಿದ್ಯುತ್ ಸಂಪರ್ಕವೂ ಇದೆ. 54 ವರ್ಷಗಳ ಹಿಂದೆ ಈ ಜಾಗ ಗದ್ದೆ ವ್ಯವಸಾಯ ಮಾಡಿಕೊಂಡಿದ್ದ ಜಾಗವಾಗಿದ್ದು ಪ್ರಸ್ತುತ ಇಲ್ಲಿ ಅಡಿಕೆ ತೋಟ ನಿರ್ಮಾಣವಾಗಿದೆ. 6 ವರ್ಷಗಳ ಹಿಂದೆ ಭಾಸ್ಕರ ಗೌಡರವರು 4 ತಂತಿಗಳ ಪೈಕಿ ಮೂರು ಫೇಸ್‌ನ ತಂತಿಗಳಿಗೆ ತನ್ನ ಸ್ವಂತ ಖರ್ಚಿನಲ್ಲಿ ಫೈಬರ್ ಕವರ್ ಅಳವಡಿಸಿದ್ದಾರೆ. ಆದರೆ ತಂತಿಗಳಿಗೆ ವಿದ್ಯುತ್ ಕಂಬಗಳನ್ನು ದೂರ ಅಳವಡಿಸಿದ ಕಾರಣ ವಿದ್ಯುತ್ ತಂತಿಗಳು ಜೋತು ಬಿದ್ದಿದೆ.
ಭಾಸ್ಕರ ಗೌಡರ ಕೃಷಿ ಜಾಗದಲ್ಲಿ ಇತ್ತೀಚೆಗೆ ಅಡಿಕೆ ಸಸಿಗಳನ್ನು ನೆಟ್ಟಿದ್ದು ಇದರ ಮೇಲೆಯೇ ವಿದ್ಯುತ್ ತಂತಿ ಹಾದು ಹೋಗುತ್ತಿದೆ. ಇಲ್ಲಿ 5 ಅಡಿಗಳ ಅಂತರದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದು ಹಾದು ಹೋಗಿದೆ. ಅಲ್ಲದೆ ಪಕ್ಕದಲ್ಲಿ ಇರುವ ಸಣ್ಣ ಮರವೊಂದರ ಗೆಲ್ಲುಗಳ ಮೂಲಕ ವಿದ್ಯುತ್ ತಂತಿ ಹಾದು ಹೋಗಿದೆ. ಮಳೆ ಗಾಳಿಗೆ ತಂತಿಗಳು ಅಲ್ಲಾಡಿ ಒಂದಕ್ಕೊಂದು ತಾಗುತ್ತಿರುತ್ತದೆ. ತಂತಿ ಹಾದುಹೋಗುವ ಪರಿಸರದಲ್ಲಿ ಮರ ಗೆಲ್ಲುಗಳನ್ನು ಮುಟ್ಟಲು ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಇಲ್ಲಿ ಕೃಷಿ ಕೆಲಸವನ್ನು ಮಾಡಲು ಅಪಾಯಕಾರಿ ಸ್ಥಿತಿ ಇದೆ. ಈ ವಿದ್ಯುತ್ ತಂತಿಗಳಿಗೆ ಇವರ ಅಡಿಕೆ ತೋಟದಲ್ಲಿ ಇರುವ ಒಂದು ವಿದ್ಯುತ್ ಕಂಬದ ಮೇಲೆ ತಂತಿ ಅಳವಡಿಕೆಗೆ ಹಾಕಲಾಗುವ ಇನ್ಸುಲೇಟರ್ ಒಡೆದು ಹೋಗಿದ್ದು ತಂತಿಗಳು ಒಂದಕ್ಕೊಂದು ತಾಗಿಕೊಂಡಿದ್ದಲ್ಲದೆ ವಿದ್ಯುತ್ ಕಂಬಕ್ಕೂ ತಾಗಿಕೊಂಡಿದೆ. ವಿದ್ಯುತ್ ಕಂಬವೂ ಅಪಾಯಕಾರಿಯಾಗಿದೆ. ಸಮಸ್ಯೆ ಸರಿಪಡಿಸುವಂತೆ ಮೆಸ್ಕಾಂಗೆ ಹಲವು ಬಾರಿ ಮೌಖಿಕವಾಗಿ ತಿಳಿಸಲಾಗಿದೆ. ಮೆಸ್ಕಾಂನವರು ಬಂದು ಮರ ಕಡಿಯಬೇಡಿ, ಕಂಬ ಮುಟ್ಟಬೇಡಿ ಎನ್ನುತ್ತಾರೆಯೇ ಹೊರತು ಲೈನ್ ಸರಿಪಡಿಸಿ ಕಂಬ ಅಳವಡಿಸುವ ಕಾರ್ಯ ಮಾಡಿರುವುದಿಲ್ಲ ಎಂದು ಆರೋಪ ವ್ಯಕ್ತವಾಗಿದೆ.
ಮೆಸ್ಕಾಂಗೆ ಮನವಿ:
ಈ ಬಗ್ಗೆ ಕುಂಬ್ರ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಭಾಸ್ಕರ ಗೌಡರವರು ಜು.೫ರಂದು ಮನವಿ ನೀಡಿದ್ದಾರೆ.