ಓಮೇಗಾ ಆಸ್ಪತ್ರೆ, ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್‌ನಿಂದ ಉಚಿತ ಹೃದಯ ತಪಾಸಣೆ
ಪುತ್ತೂರು:ದೇವಸ್ಥಾನದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಪ್ರತಿ ತಿಂಗಳು ನಿರಂತರವಾಗಿ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರದ 28ನೇ ತಿಂಗಳ ಶಿಬಿರವು ಜು.7ರಂದು ನಡೆಯಿತು. ಈ ಭಾರಿ ವಿಶೇಷವಾಗಿ ಮಂಗಳೂರಿನ ಓಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್‌ನ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆ ನಡೆಸಲಾಯಿತು.
ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಆರೋಗ್ಯ ರಕ್ಷಾ ಸಮಿತಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಶಿಬಿರದಲ್ಲಿ ೨೮ ತಿಂಗಳುಗಳಿಂದ ಪ್ರತಿ ತಿಂಗಳು ವಿಶೇಷ ತಪಾಸಣಾ ಸೌಲಭ್ಯಗಳನ್ನು ಅಳವಡಿಸಿಕೊಂಡು ಭಕ್ತಾದಿಗಳಿಗೆ ಉಚಿತ ಆರೋಗ್ಯ ಸೇವೆ ನೀಡುತ್ತಿದೆ. ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುತ್ತಾ ಬಂದಿದೆ. ಶಿಬಿರದ ರೂವಾರಿ ಡಾ.ಸುರೇಶ್ ಪುತ್ತೂರಾಯರವರ ಕಲ್ಪಣೆಯ ಶಿಬಿರದಲ್ಲಿ ವಿವಿಧ ಸಂಘ ಸಂಸ್ಥೆಗಳು ಪುತ್ತೂರು ಹಾಗೂ ಸುಳ್ಯದ ವೈದ್ಯರುಗಳು, ಹಲವು ಔಷಧ ಕಂಪನಿಗಳು, ಲ್ಯಾಬ್‌ಗಳು, ಜನೌಷಧ ಕೇಂದ್ರಗಳು ಕೈಜೋಡಿಸುತ್ತಿದೆ.
೨೮ನೇ ಶಿಬಿರವನ್ನು ಉದ್ಘಾಟಿಸಿದ ಮಂಗಳೂರು ಓಮೇಗ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ವೈದ್ಯರಾದ ಡಾ.ಮುಕುಂದ್ ಮಾತನಾಡಿ, ನಮ್ಮ ಆರೋಗ್ಯ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿಯಿರಬೇಕು. ವೈದ್ಯಕೀಯ ಶಿಬಿರಗಳು ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ನಾವು ರೋಗ ಬಂದ ಮೇಲೆ ಜಾಗೃತವಾಗುವುದಲ್ಲ. ರೋಗ ಬಾರದಂತೆ ತಡೆಯುವುವುದು ಬಹುಮುಖ್ಯವಾಗಿದೆ. ಬಂದ ಬಳಿಕ ಬಹಳಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಮುಖ್ಯ. ಮೊದಲೇ ಜಾಗೃತವಾಗಿದ್ದಾಗ ಹಲವು ವರ್ಷಗಳ ಕಾಲ ರೋಗಗಳು ಬಾರದಂತೆ ತಡೆಯಬಹುದು. ಮೊದಲೇ ಜನರು ಜಾಗೃತರಾಗುವುದರಿಂದ ನಮ್ಮ ಆರೋಗ್ಯದ ಉತ್ತಮ ಆರೋಗ್ಯವಾಗಿರಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಮಂಗಳೂರಿನ ಹಿರಿಯ ಹೃದ್ರೋಗ ತಜ್ಞರಾಗಿರುವ ಡಾ.ಮುಕುಂದ್‌ರವರು ನಮ್ಮ ಮನವಿಗೆ ಸ್ಪಂಧಿಸಿ ಪುಟ್ಟ ಹಳ್ಳಿಗೆ ಬಂದು ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಓಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶ್‌ನ ತಂಡದ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಇದನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಶಿಬಿರದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಆರೋಗ್ಯ ರಕ್ಷಾ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಎಲುಬು ಮತ್ತು ಕೀಲು ತಜ್ಞೆ ನಾಗಶ್ರೀ ಸಚಿನ್ ಶಂಕರ್ ಹಾರಕರೆ, ವೈದ್ಯಕೀಯ ತಜ್ಞೆ ಡಾ.ಅನನ್ಯ ವೇದಿಕೆಯಲ್ಲಿ ಉಪಸ್ಥಿರಿದ್ದರು. ಜಯಲಕ್ಷ್ಮಿ ಶಗ್ರಿತ್ತಾಯ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಸ್ವಾಗತಿಸಿದರು. ಉಮೇಶ್ ಎಸ್.ಕೆ ಕಾರ್ಯಕ್ರಮ ನಿರೂಪಿಸಿದರು.
ಈ ಭಾರಿಯ ಶಿಬಿರದಲ್ಲಿ ವಿಶೇಷವಾಗಿ ಮಂಗಳೂರಿನ ಓಮೇಗ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್‌ಸ್ಕ್ಯಾನ್ ಫೌಂಡೇಶನ್‌ನ ಸಹಯೋಗದಲ್ಲಿ ಉಚಿತ ಹೃದಯ ತಪಾಸಣೆ ನಡೆಸಲಾಯಿತು. ಮಂಗಳೂರಿನ ಹಿರಿಯ ಹೃದ್ರೋಗ ತಜ್ಞ ವೈದ್ಯರಾದ ಡಾ.ಮುಕುಂದ್, ಡಾ.ಅಮಿತ್ ಕಿರಣ್ ಹೃದಯ ತಪಾಸಣೆ ನಡೆಸಿದರು. ಜೊತೆಗೆ ವೈದ್ಯಕೀಯ ತಜ್ಞ ಡಾ.ಸುರೇಶ್ ಪುತ್ತೂರಾಯ, ಕೀಲು ಮತ್ತು ಎಲುಬು ತಜ್ಞ ವೈದ್ಯ ಡಾ. ನಾಗಶ್ರೀಸಚಿನ್ ಶಂಕರ್ ಹಾರಕರೆ, ಆಯುರ್ವೇದ ತಜ್ಞ ಡಾ.ಸಾಯಿಪ್ರಕಾಶ್ ತಪಾಸಣೆ ನಡೆಸಿದರು. ಹೃದ್ರೋಗ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಕೀಲು ಮತ್ತು ಎಲುಬು ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಅಎ, ಇಅಊಔ, ಮಧುಮೇಹ ರಕ್ತ ಪರೀಕ್ಷೆ, ಥೈರಾಯ್ಡ್ ಪರೀಕ್ಷೆ ಹಾಗೂ ಔಷಧಿಗಳನ್ನು ಉಚಿತವಾಗಿ ವಿತರಿಸಲಾಯಿತು. ಶಿಬಿರದಲ್ಲಿ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳ ಜೊತೆಗೆ ಊಟ, ಉಪಾಹಾರಗಳನ್ನು ಒದಗಿಸಲಾಗಿತ್ತು. ಸುಮಾರು ೨೫೦ಕ್ಕೂ ಅಧಿಕ ಮಂದಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಂಡರು.