ಯುವವಾಹಿನಿ ಪುತ್ತೂರು ಘಟಕದಿಂದ ದ್ವಿತೀಯ ಬಾರಿಗೆ ‘ಬಿಲ್ಲವ ವಧು-ವರಾನ್ವೇಷಣೆ 2024’

0

ಪುತ್ತೂರು:ವಿದ್ಯೆ, ಉದ್ಯೋಗ ಹಾಗೂ ಸಂಪರ್ಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಜರಗಿದ ‘ಬಿಲ್ಲವ ವಧು-ವರಾನ್ವೇಷಣೆ 2024’ ಕಾರ್ಯಕ್ರಮದ ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮವು ಜು.7 ರಂದು ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರಗಿತು.


ಅಂತರ್‌ಜಾತಿ ಬದಲು ಸ್ವಜಾತಿಯವರನ್ನೇ ವಿವಾಹ ಮಾಡಿಕೊಳ್ಳಿ-ಸತೀಶ್ ಕೆಡೆಂಜಿ:
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಕಳೆದ ವರ್ಷವೂ ಯುವವಾಹಿನಿ ಸಂಘಟನೆಯಿಂದ ವಧು-ವರಾನ್ವೇಷಣೆ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿತ್ತು ಮಾತ್ರವಲ್ಲ ಹಲವರಿಗೆ ಕಂಕಣ ಭಾಗ್ಯ ಒದಗಿ ಬಂದಿತ್ತು ಕೂಡ. ಮದುವೆಯಾಗದೆ ಉಳಿದ ವಧು-ವರರಿಗೆ ಇಂತಹ ಕಾರ್ಯಕ್ರಮಗಳು ಬಹಳ ಪ್ರಯೋಜನವನ್ನುಂಟು ಮಾಡುತ್ತದೆ. ಬಿಲ್ಲವ ಸಮುದಾಯದವರು ಅಂತರ್‌ಜಾತಿ ವಿವಾಹ ಮಾಡಿಕೊಳ್ಳದೆ ಸ್ವ-ಜಾತಿಯವರನ್ನೇ ವಿವಾಹ ಮಾಡಿಕೊಂಡರೆ ಒಳ್ಳೆಯದು ಎಂದರು.


ಒಂಟಿ ಜೀವನದಿಂದ ಜಂಟಿ ಜೀವನ-ಜಯರಾಮ ಬಿ.ಎನ್:
ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್ ಮಾತನಾಡಿ, ಕಾರಣಾಂತರಗಳಿಂದ ಮದುವೆಯಾಗದೆ ಉಳಿದಿರುವ ವಧು-ವರರಿಗೆ ಇಂತಹ ಕಾರ್ಯಕ್ರಮದ ಆಯೋಜನೆ ಪ್ರಯೋಜನಕಾರಿಯಾಗಿದೆ. ಯುವವಾಹಿನಿ ಸಂಘಟನೆಯು ಪ್ರತಿ ತಿಂಗಳು ಸಮುದಾಯದ ಏಳಿಗೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕಳೆದ ವರ್ಷ ಈ ವಧು-ವರಾನ್ವೇಷಣೆ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಒಂಟಿ ಜೀವನದಿಂದ ಜಂಟಿ ಜೀವನವನ್ನು ಅನೇಕ ಜೋಡಿಗಳು ಕಂಡುಕೊಂಡಿದ್ದವು ಎಂದರು.


ವರ-ವಧುವಿನ ಕುಟುಂಬದಲ್ಲಿ ಮಗ-ಮಗಳು ಎಂಬುದಾಗಿ ಸ್ವೀಕರಿಸಿ-ವಸಂತ ಪೂಜಾರಿ:
ಮುಖ್ಯ ಅತಿಥಿ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥೇಶ್ವರ ಹೊಸಮ್ಮ ಬ್ರಹ್ಮ ಬೈದರ್ಕಳ ಗರಡಿ ಪರಿವಾರ ದೈವಗಳ ಆಡಳಿತ ಟ್ರಸ್ಟ್ ಅಧ್ಯಕ್ಷ ವಸಂತ ಪೂಜಾರಿ ಬಾಕಿಲಗುತ್ತು ಮಾತನಾಡಿ, ಇಂದಿನ ಸಮಾಜದಲ್ಲಿ ವಧುವಿನ ಕುಡಟುಂಬಕ್ಕೆ ಕಲಿತ ಹುಡುಗ ಸಿಗೋದಿಲ್ಲ ಎಂಬ ಕೊರಗು. ಪ್ರತಿಯೊಂದು ಕುಟುಂಬವು ಬಯಸುವುದು ನಮ್ಮ ಮಕ್ಕಳಿಗೆ ಒಳ್ಳೆಯ ವರ-ವಧು ಸಿಗಲಿ ಎಂಬುದಾಗಿದೆ. ವರನ ಕಡೆಯವರು ವಧುವನ್ನು ಮಗಳೆಂದು, ವಧುವಿನ ಕಡೆಯವರು ವರನನ್ನು ಮಗನೆಂದು ಸ್ವೀಕಾರ ಮಾಡಿದಾಗ ಆ ಕುಟುಂಬವು ಮಾದರಿ ಕುಟುಂಬ ಎನಿಸುವುದು ಮಾತ್ರವಲ್ಲ ಆ ಕುಟುಂಬದಲ್ಲಿ ವಿಚ್ಛೇದನ ಎಂಬುದು ಮರೀಚಿಕೆಯಾಗುವುದು ಎಂದರು.


ಯುವವಾಹಿನಿಯು ಬಲಿಷ್ಟ, ಶಿಸ್ತುಬದ್ಧವಾದ, ಪ್ರಾಮಾಣಿಕ ಸಂಘಟನೆಯಾಗಿದೆ-ಹರೀಶ್ ಪೂಜಾರಿ:
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಹರೀಶ್ ಕೆ.ಪೂಜಾರಿ ಮಾತನಾಡಿ, ಪುತ್ತೂರು ಯುವವಾಹಿನಿ ಘಟಕವು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡು ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದೆ. ಈ ವರ್ಷವೂ ಅನೇಕ ಮಂದಿ ಅರ್ಜಿಯನ್ನು ಹಾಕಿಕೊಂಡು ಕಂಕಣ ಭಾಗ್ಯದ ನಿರೀಕ್ಷೆಯಲ್ಲಿದ್ದಾರೆ. ಪುತ್ತೂರು ಯುವವಾಹಿನಿಯು ಬಲಿಷ್ಟ ಸಂಘಟನೆಯಾಗಿದ್ದು ಶಿಸ್ತುಬದ್ಧವಾದ, ಪ್ರಾಮಾಣಿಕ ಸಂಘಟನೆಯಾಗಿ ಬೆಳೆಯುತ್ತಿದೆ ಎಂದರು.


ವಧು-ವರರ ಕೂಡುವಿಕೆಗೆ ಸಂಘಟಿಸಿದ ಕಾರ್ಯಕ್ರಮ ಶ್ಲಾಘನೀಯ-ಡಾ.ಆಶಿತ್ ಎಂ.ವಿ:
ಉಪ್ಪಿನಂಗಡಿ ಅದ್ವಿಕ್ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್‌ನ ಡಾ.ಆಶಿತ್ ಎಂ.ವಿ ಮಾತನಾಡಿ, ವಿದ್ಯೆ, ಉದ್ಯೋಗ, ಸಂಪರ್ಕವೆಂಬ ಧ್ಯೇಯವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಯುವವಾಹಿನಿ ಸಂಘಟನೆಯು ವಧು-ವರರ ಕೂಡುವಿಕೆಗೆ ಒಳ್ಳೆಯ ಕಾರ್ಯಕ್ರಮವನ್ನು ಸಂಘಟಿಸಿರುವುದು ಶ್ಲಾಘನೀಯ. ಇಂದಿನ ಒತ್ತಡದ ಜೀವನದಲ್ಲಿ ಸಂಪರ್ಕ ಎಂಬುದು ಅತೀ ಮುಖ್ಯವಾಗಿದೆ. ಸಾಮಾಜಿಕ ದೃಷ್ಟಿಯಲ್ಲಿ ಅಲ್ಲದೆ ವೈಜ್ಞಾನಿಕ ದೃಷ್ಟಿಯಲ್ಲೂ ಮದುವೆ ಅನ್ನುವುದು ವಿಶೇಷ ಶಕ್ತಿಯಾಗಿದೆ ಎಂದರು.

ಮದುವೆ ಅನ್ನುವುದು ಕುಟುಂಬ ಸಮ್ಮಿಲನವಾಗಿದೆ-ಸಂತೋಷ್ ಕುಮಾರ್:
ಎಸ್‌ಡಿಸಿಸಿ ಬ್ಯಾಂಕ್ ಬೆಳ್ಳಾರೆ ಶಾಖೆಯ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್ ಮರಕ್ಕಡ ಮಾತನಾಡಿ, ಹಿಂದು ಸಂಪ್ರದಾಯದಲ್ಲಿ ಮದುವೆ ಅನ್ನುವುದು ಬಹಳ ಪಾವಿತ್ರ್ಯತೆಯಾಗಿದೆ. ಮದುವೆ ಅಂದರೆ ಅದು ಗಂಡು-ಹೆಣ್ಣಿನ ಸಂಬಂಧ ಆಗಿರದೆ ಅದು ಎರಡು ಕುಟುಂಬಗಳ ಕುಟುಂಬ ಸಮ್ಮಿಲನವಾಗಿದೆ. ಮದುವೆ ಸಂದರ್ಭ ಹೆಜ್ಜೆ ಹಾಕುವ ಸಪ್ತಪದಿಗೆ ಅದರದ್ದೇ ಆದ ಸಂಬಂಧವಿದೆ. ಕುಟುಂಬಗಳಲ್ಲಿ ಬಾಂಧವ್ಯ ಹೆಚ್ಚಾಗಲಿ, ವಿಘಟನೆ ಕಡಿಮೆಯಾಗಲಿ ಎಂಬುದೇ ನಮ್ಮ ಹಾರೈಕೆ ಎಂದರು.


ವಧು-ವರಾನ್ವೇಷಣೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ-ಜಯಂತ್ ಬರಿಮಾರು:
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಜಯಂತ್ ಬರಿಮಾರು ಮಾತನಾಡಿ, ಕಳೆದ ವರ್ಷ ಯುವವಾಹಿನಿ ಸಂಘಟಿಸಿದ ವಧು-ವರಾನ್ವೇಷಣೆ ಕಾರ್ಯಕ್ರಮಕ್ಕೆ ಒಳ್ಳೆಯ ಸ್ಪಂದನೆ ಸಿಕ್ಕಿದ್ದು, ಪ್ರಸಕ್ತ ವರ್ಷದಲ್ಲೂ ಉತ್ತಮ ಸ್ಪಂದನೆ ದೊರಕುತ್ತಿದೆ. ಯಾವುದೇ ಕಾರ್ಯಕ್ರಮವಿರಲಿ, ಎಲ್ಲರ ಸಹಕಾರವಿದ್ದಾಗ ಅಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.


ವೈಷ್ಣವಿ ಶಾಂತಿಗೋಡು ಪ್ರಾರ್ಥಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವವಾಹಿನಿ ಪುತ್ತೂರು ಘಟಕದ ಸಮಾಜ ಸೇವಾ ನಿರ್ದೇಶಕ ಗಣೇಶ್ ಬಿ, ಸಮಾರೋಪ ಕಾರ್ಯಕ್ರಮದಲ್ಲಿ ವಧು-ವರಾನ್ವೇಷಣೆ 2024 ಇದರ ಸಂಚಾಲಕ ಉಮೇಶ್ ಬಾಯಾರು ಅನುಕ್ರಮವಾಗಿ ಸ್ವಾಗತಿಸಿದರು. ಯುವವಾಹಿನಿ ಪುತ್ತೂರು ಘಟಕದ ಕಾರ್ಯದರ್ಶಿ ಸಮಿತ್ ಪಿ ವಂದಿಸಿದರು. ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

150ಕ್ಕೂ ಮಿಕ್ಕಿ ಅರ್ಜಿಗಳು..
ಯುವವಾಹಿನಿ ಸಂಘಟಿಸಿದ ಎರಡನೇ ವರ್ಷದ ಕಾರ್ಯಕ್ರಮದಲ್ಲಿ ಮೈಸೂರು, ಬೆಂಗಳೂರು, ಮಡಿಕೇರಿ, ಸಕಲೇಶಪುರ, ಉಡುಪಿ, ಕಾರ್ಕಳ ಅಲ್ಲದೆ ಗೋವಾ, ಯುಎಸ್‌ಎ ಆಮೇರಿಕ ಇಲ್ಲಿಂದ ಸುಮಾರು 150ಕ್ಕೂ ಮಿಕ್ಕಿ ವಧು-ವರರ ಅರ್ಜಿಗಳು ಬಂದಿದ್ದು, ಬಂದಂತಹ ಅರ್ಜಿಗಳನ್ನು ಬೃಹತ್ ಎಲ್‌ಇಡಿ ಪರದೆ ಮುಖೇನ ವಧು-ವರರ ಫೊಟೊ, ಜಾತಕ ಸಮೇತ ಪ್ರಸ್ತುತಪಡಿಸಲಾಗಿತ್ತು.

ಸನ್ಮಾನ..
ದೇಹದ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಂಪಾನಿಯೋ ನೆಮ್ಮದಿ ವೆಲ್‌ನೆಸ್ ಸೆಂಟರ್ ಮೂಲಕ ಸಾವಿರಾರು ಜನರಿಗೆ ಉಚಿತ ಥೆರಪಿಯನ್ನು ನೀಡುವ ಮೂಲಕ ಕಂಪಾನಿಯೋ ಸಂಸ್ಥೆಯಿಂದ ಪ್ರತಿಷ್ಠಿತ ಬಾಹುಬಲಿ ಪ್ರಶಸ್ತಿ ಪುರಸ್ಕೃತರಾದ ಪ್ರಭಾಕರ ಸಾಲಿಯಾನ್ ಬಾಕಿಲಗುತ್ತುರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಳೆದ ವರ್ಷದ ಜೋಡಿ ದಂಪತಿಗೆ ಸ್ವಾಗತ..
2023-24ರಲ್ಲೂ ಯುವವಾಹಿನಿ ಸಂಘಟನೆಯು ವಧು-ವರಾನ್ವೇಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕಿ ಅರ್ಜಿಗಳು ಬಂದಿದ್ದು ಈ ಕಾರ್ಯಕ್ರಮದ ಮುಖೇನ ಸುಮಾರು ಇಪ್ಪತ್ತು ಜೋಡಿಗಳಿಗೆ ಕಂಕಣ ಭಾಗ್ಯ ಲಭಿಸಿತ್ತು. ಇಪ್ಪತ್ತು ಜೋಡಿಗಳ ಪೈಕಿ ಅಕ್ಷತಾ-ಸುಪ್ರೀತ್ ಜೋಡಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಜೋಡಿಗೆ ಸಂಘಟಕರ ವತಿಯಿಂದ ಶಾಲು ಹೊದಿಸುವ ಮೂಲಕ ಆತ್ಮೀಯ ಸ್ವಾಗತ ಕೋರಲಾಯಿತು.

LEAVE A REPLY

Please enter your comment!
Please enter your name here