ಪುತ್ತೂರು: ಚೆಲ್ಯಡ್ಕದ ಮುಳುಗು ಸೇತುವೆಯಲ್ಲಿ ಘನವಾಹನ ಸಂಚಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬಸ್ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜು.9ರಿಂದ ಕೆ.ಎಸ್.ಆರ್.ಟಿ.ಸಿಯಿಂದ ತಾತ್ಕಾಲಿಕ ಬಸ್ ಕಾರ್ಯನಿರ್ವಹಿಸಲಿದೆ.
ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಬಸ್ ಮೂರು ಟ್ರಿಪ್ ನಡೆಸಲಿದೆ. ಪುತ್ತೂರು, ಪರ್ಲಡ್ಕ, ಕುಂಜೂರುಪಂಜ, ದೇವಸ್ಯ, ವಳತ್ತಡ್ಕ ಮಾರ್ಗವಾಗಿ ಗುಮ್ಮಟೆಗದ್ದೆಗೆ ಬಸ್ ಆಗಮಿಸಲಿದೆ. ಅಲ್ಲಿಂದ ಹಿಂತಿರುಗಿ ಅದೇ ಮಾರ್ಗವಾಗಿ ಪುತ್ತೂರಿಗೆ ಸಂಚರಿಸಲಿದೆ. ಬೆಳಿಗ್ಗೆ 7.30ಕ್ಕೆ ಪುತ್ತೂರಿನಿಂದ ಹೊರಟು 7.50ಕ್ಕೆ ಗುಮ್ಮಟೆಗದ್ದೆ ತಲುಪಲಿದೆ. ಅಲ್ಲಿಂದ 8 ಗಂಟೆಗೆ ಹೊರಟು 8.20ಕ್ಕೆ ಪುತ್ತೂರು ತಲುಪಲಿದೆ. ಮಧ್ಯಾಹ್ನ1.30ಕ್ಕೆ ಪುತ್ತೂರಿನಿಂದ ಹೊರಟು 1.50 ಗುಮ್ಮಟೆಗದ್ದೆ ತಲುಪಿ ಅಲ್ಲಿಂದ 2 ಗಂಟೆಗೆ ಹೊರಟು 2.20 ಪುತ್ತೂರಿಗೆ ಹಿಂತಿರುಗಲಿದೆ. ಸಂಜೆ 4.30ಕ್ಕೆ ಪುತ್ತೂರಿನಿಂದ ಹೊರಟು 4.50 ಗುಮ್ಮಟೆಗದ್ದೆ ಗೆ ಅಲ್ಲಿಂದ 5 ಗಂಟೆಗೆ ಹೊರಟು 5.20ಕ್ಕೆ ಪುತ್ತೂರಿಗೆ ಹಿಂತಿರುಗಲಿದೆ ಎಂದು ಕೆಎಸ್ಆರ್ಟಿಸಿ ಪುತ್ತೂರು ವಿಭಾಗಾಧಿಕಾರಿ ಅಮಲಿಂಗಯ್ಯ ಬಿ ಹೊಸ ಪೂಜಾರಿ ತಿಳಿಸಿದ್ದಾರೆ.
ಪುತ್ತೂರು, ದೇವಸ್ಯ-ಪಾಣಾಜೆ ರಸ್ತೆಯಲ್ಲಿ ಬೆಟ್ಟಂಪಾಡಿ ಗ್ರಾ.ಪಂ ವ್ಯಾಪ್ತಿಯ ಚೆಲ್ಯಡ್ಕದ ಪಾರಂಪರಿಕ ಮುಳುಗು ಸೇತುವೆಯನ್ನು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರರವರು ಪರಿಶೀಲನೆ ನಡೆಸಿ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಸೂಚಿಸಿದ್ದರು. ಆದರೆ ಗ್ರಾಮಸ್ಥರ ಮನವಿಯಂತೆ ಘನ ವಾಹನ ಸಂಪೂರ್ಣ ನಿಷೇಧ ಹಾಗೂ ರಾತ್ರಿ ವೇಳೆ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿದ್ದರು.
ಘನ ವಾಹನ ಸಂಚಾರ ನಿಷೇಧಿಸಿರುವುದರಿಂದ ಅದೇ ರಸ್ತೆಯಲ್ಲಿ ಸಂಪರ್ಕದ ಕೊಂಡಿಯಾಗಿದ್ದ ಖಾಸಗಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದಾಗಿ ಗುಮ್ಮಟೆಗದ್ದೆ, ಅಜ್ಜಿಕಲ್ಲು, ವಳತಡ್ಕ ಪ್ರದೇಶಗಳ ವಿದ್ಯಾರ್ಥಿಗಳು, ಕಾರ್ಮಿಕರಿಗೆ ತೀರಾ ಸಂಕಷ್ಟ ಎದುರಿಸುವಂತಾಗಿತ್ತು. ಜನರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಅದೇ ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಸುವಂತೆ ಶಾಸಕ ಅಶೋಕ್ ಕುಮಾರ್ ರೈಯವರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರಿಗೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಬದಲಿ ಸಂಚಾರ ಸೌಲಭ್ಯ ಕಲ್ಪಿಸಲು ಹೊಸ ರೂಟ್ ಪ್ರಾರಂಭಿಸುವಂತೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಎಸ್ಆರ್ಟಿಸಿ ಪುತ್ತೂರು ವಿಭಾಗದಿಂದ ಸರ್ವೆ ನಡೆಸಿ ಮಳೆಗಾಲ ಮುಗಿಯುವ ತನಕ ತಾತ್ಕಾಲಿಕ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಬಸ್ ಇಲ್ಲದೆ ಸಾರ್ವಜನಿಕರು ಸಂಕಷ್ಟ ಪಡುತ್ತಿರುವ ಹಿನ್ನೆಲೆಯಲ್ಲಿ ಬದಲಿ ಬಸ್ ಸೌಲಭ್ಯ ಒದಗಿಸಿಕೊಡುವಂತೆ ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿಯವರು ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.