ತಾಲೂಕು ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆ

0

‘ಪೌಷ್ಟಿಕಾಂಶ ಪುನರ್ವಸತಿ ಕೇಂದ್ರದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು’- ಸಹಾಯಕ ಆಯುಕ್ತರ ಮನವಿ

ಪುತ್ತೂರು: ಅಪೌಷ್ಟಿಕತೆಯು ಅಭಿವೃದ್ಧಿಗೆ ಸವಾಲಾಗಿದೆ. ತೀವ್ರವಾದ ಅಪೌಷ್ಟಿಕತೆ ಹೊಂದಿರುವ ಮಕ್ಕಳು ಉತ್ತಮ ಪೋಷಣೆಯ ಮಕ್ಕಳಿಗಿಂತ ಒಂಬತ್ತು ಪಟ್ಟು ಹೆಚ್ಚು ಸಾಯುವ ಅಪಾಯ ಹೊಂದಿರುತ್ತಾರೆ. ಸರಿಯಾದ ಪೌಷ್ಟಿಕಾಂಶ ಮತ್ತು ಕ್ಲಿನಿಕಲ್ ನಿರ್ವಹಣೆಯಿಂದ ಅನೇಕ ಸಾವುಗಳನ್ನು ತಡೆಯಬಹುದು. ದ.ಕ.ಜಿಲ್ಲೆಯ ಸುಳ್ಯ ಮತ್ತು ಮಂಗಳೂರಿನಲ್ಲಿ ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರವಿದೆ. ಅಲ್ಲಿ ಮಕ್ಕಳಿಗೆ 14 ದಿನ ಉಚಿತ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ನೀಡುವ ವ್ಯವಸ್ಥೆ ಇದೆ. ಆದರೆ ಇದರ ಬಗ್ಗೆ ಸಾಕಷ್ಟು ಮಂದಿಗೆ ಅರಿವಿಲ್ಲ. ಆದ್ದರಿಂದ ಪೌಷ್ಟಿಕಾಂಶ ಪುನರ್ವಸತಿ ಕೇಂದ್ರದ ಕುರಿತು ಜನರಲ್ಲಿ ಅರಿವು ಮೂಡಿಸಬೇಕೆಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಜುಬಿನ್ ಮೊಹಪಾತ್ರ ಹೇಳಿದರು.


ಅವರು ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿನ ಸಹಾಯಕ ಕಮೀಷನರ್ ಕೋರ್ಟ್ ಹಾಲ್‌ನಲ್ಲಿ ಜು.10ರಂದು ನಡೆದ 14 ವಿವಿಧ ಸಮನ್ವಯ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವರದಕ್ಷಿಣಿ ನಿಷೇಧ ಕಾಯಿದೆ, ಮಾದಕ ವಸ್ತು ಸೇವನೆ ನಿಷೇಧ ಕಾಯಿದೆ, ಸೀಶಕ್ತಿ ಯೋಜನೆಯ ಸಮನ್ವಯ ಸಮಿತಿ, ಮಕ್ಕಳ ಮಾರಾಟ ಮತ್ತು ಸಾಗಾಟ ತಡೆ ಸಮಿತಿ, ಬಾಲ್ಯ ವಿವಾಹ ನಿಷೇಧ ಕಾಯಿದೆ ಸಮಿತಿ, ವಿಕಲ ಚೇತನರ ಸಮಿತಿ, ಮಹಿಳಾ ದೌರ್ಜನ್ಯ ತಡೆ ಸಮಿತಿ, ಮಾತೃವಂದನಾ ಸಮಿತಿ, ಬೇಟಿ ಪಡಾವೋ- ಬೇಟಿ ಬಚಾವೋ ಸಮಿತಿ, ಗೆಳತಿ ವಿಶೇಷ ಚಿಕಿತ್ಸಾ ಘಟಕ, ಐಸಿಡಿಎಸ್ ಸಮನ್ವಯ ಸಮಿತಿಗಳ ಪ್ರಗತಿ ಪರಿಶೀಲನೆಯನ್ನು ಸಹಾಯಕ ಕಮೀಷನರ್ ಅವರು ಮಾಡಿದರು.


ಅಪೌಷ್ಟಿಕತೆಯ ಮಕ್ಕಳನ್ನು 14 ದಿನ ಪುನರ್ವಸತಿ ಕೇಂದ್ರದಲ್ಲಿ ಬಿಡಿ:
ಮಧ್ಯಮ ಅಥವಾ ತೀವ್ರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸಕಾಲಿಕ ಮತ್ತು ಗುಣಮಟ್ಟದ ಆರೈಕೆ ಒದಗಿಸದಿದ್ದರೆ ಅವರು ಸಂಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಕಷ್ಟವಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಉತ್ತಮ ಬೆಳವಣಿಗೆಗಾಗಿ ಮಂಗಳೂರು ಮತ್ತು ಸುಳ್ಯದಲ್ಲಿ ಪೌಷ್ಟಿಕಾಂಶದ ಪುನರ್ವಸತಿ ಕೇಂದ್ರವಿದೆ. ಅಲ್ಲಿ ಅಪೌಷ್ಟಿಕತೆ ಮಕ್ಕಳಿಗೆ ಸರಿಯಾದ ಪೌಷ್ಟಿಕಾಂಶದ ಆಹಾರ ನೀಡಲಾಗುತ್ತದೆ. ಇದರಿಂದ ಮಕ್ಕಳ ಬೆಳವಣಿಗೆ ಉತ್ತಮ ಆಗುತ್ತದೆ. 6 ತಿಂಗಳಿನಿಂದ 6 ವರ್ಷದ ಒಳಗಿನ ಮಕ್ಕಳಿಗೆ ಇಲ್ಲಿ ಅವಕಾಶವಿದೆ. ಮಗು ಮತ್ತು ತಾಯಿ ಜೊತೆಯಾಗಿ 14 ದಿನ ಕೇಂದ್ರದಲ್ಲಿ ನಿಲ್ಲಬೇಕು. ಆಹಾರ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ತಾಯಿಗೆ ದಿನಕ್ಕೆ ಗೌರವಧನವಾಗಿ 100 ರೂಪಾಯಿ ನೀಡಲಾಗುತ್ತದೆ ಎಂದ ಸಹಾಯಕ ಕಮೀಷನರ್ ಅವರು, ಈ ಕುರಿತು ಬಹುತೇಕ ಮಂದಿಗೆ ಗೊತ್ತಿಲ್ಲ. ಅಪೌಷ್ಟಿಕ ಮಕ್ಕಳ ತಾಯಂದಿರಿಗೆ ಮಾಹಿತಿ ನೀಡಿದರೂ ಅವರು ಕೇಂದ್ರಕ್ಕೆ ಬರುತ್ತಿಲ್ಲ. ಹಾಗಾಗಿ ತಾಯಂದಿರಿಗೆ ಹಾಗೂ ಪೋಷಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.


ಪುನರ್ವಸತಿ ಕೇಂದ್ರಕ್ಕೆ ಬರಲು ಹಿಂದೇಟು:
ಶಿಶು ಅಭಿವೃದ್ದಿ ಯೋಜನಾಧಿಕಾರಿ ಮಂಗಳಕಾಲೆ ಅವರು ಮಾತನಾಡಿ, ಈಗಾಗಲೇ 58 ಮಂದಿ ಸಾಮಾನ್ಯ ಅಪೌಷ್ಟಿಕತೆಯಲ್ಲಿರುವ ಮಕ್ಕಳಿದ್ದಾರೆ. ತೀವ್ರ ಅಪೌಷ್ಟಿಕತೆಯ 3 ಮಕ್ಕಳಿದ್ದಾರೆ. ಅವರಿಗೆ ಪುನರ್ವಸತಿ ಕೇಂದ್ರದಲ್ಲಿ ಪೌಷ್ಟಿಕಾಂಶ ನೀಡಲಾಗುತ್ತಿದ್ದು. ಇನ್ನು ಕೆಲವರಿಗೆ ತಿಳಿಸಿದಾಗ ಬರುತ್ತೇನೆಂದು ಹೇಳಿ ಮತ್ತೆ ತಪ್ಪಿಸುತ್ತಿದ್ದಾರೆ ಎಂದರು. ಅಪೌಷ್ಟಿಕತೆಯು ಎರಡು ಮುಖ್ಯ ವರ್ಗಗಳ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಅಪೌಷ್ಟಿಕತೆ ಮತ್ತು ಅಧಿಕ ಪೋಷಣೆ. ಅಪೌಷ್ಟಿಕತೆಯು ಕುಂಠಿತ (ವಯಸ್ಸಿಗೆ ಸಾಕಷ್ಟು ಎತ್ತರ), ವ್ಯರ್ಥ (ಎತ್ತರಕ್ಕೆ ಸಾಕಷ್ಟು ತೂಕ), ಕಡಿಮೆ ತೂಕ (ವಯಸ್ಸಿಗೆ ಸಾಕಷ್ಟು ತೂಕ), ಹಾಗೆಯೇ ಅಗತ್ಯ ಸೂಕ್ಷ್ಮ ಪೋಷಕಾಂಶಗಳ (ವಿಟಮಿನ್‌ಗಳು ಮತ್ತು ಖನಿಜಗಳು) ಕೊರತೆಗಳು ಅಥವಾ ಕೊರತೆಗಳನ್ನು ಸೂಚಿಸುತ್ತದೆ. ಅಂಗನವಾಡಿಯಲ್ಲಿ ಇದನ್ನು ಗುರುತಿಸಿ ಇಲಾಖೆಗೆ ವರದಿ ಮಾಡಲಾಗುತ್ತದೆ. ಅಲ್ಲಿಂದ ಅಪೌಷ್ಟಿಕ ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಗೌರವಧನ ಹೆಚ್ಚಿಸಿ:
ಸಮನ್ವಯ ಸಮಿತಿ ಸದಸ್ಯೆ ಉಷಾ ಅಂಚನ್ ಅವರು ಮಾತನಾಡಿ, ಅಪೌಷ್ಠಿಕತೆಯ ಮಕ್ಕಳನ್ನು ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ ಉತ್ತಮ ಯೋಜನೆ. ಆದರೆ ಪೋಷಕರಿಗೆ ನೀಡುವ ರೂ.100 ಗೌರವಧನ ಎಲ್ಲೂ ಸಾಕಾಗುವುದಿಲ್ಲ. ಅವರಿಗೂ ದಿನ ಕೂಲಿ ಆಧಾರದಲ್ಲಿ ಗೌರವಧನ ಕೊಡುವಂತೆ ಹೇಳಿದರು. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಹಾಯಕ ಕಮೀಷನರ್ ಅವರು ಸಿಡಿಪಿಒಗೆ ತಿಳಿಸಿದರು.


ಗುತ್ತಿಗೆದಾರರಿಗೆ ಶೋಕಾಸ್ ನೋಟೀಸ್ ನೀಡಿ:
2022-23 ನೇ ಸಾಲಿನ ಮಳೆಹಾನಿ ಯೋಜನೆಯಡಿ 7 ಅಂಗನವಾಡಿಗಳ ದುರಸ್ತಿಗೆ ಅನುದಾನ ಮಂಜೂರಾಗಿದೆ. ಆದರೆ ಇದರಲ್ಲಿ 6 ಪೂರ್ಣಗೊಂಡಿದ್ದು, ಕಬಕ ಅಂಗನವಾಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಸಿಡಿಪಿಒ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಮೀಷನರ್ ಅವರು, 2 ವರ್ಷ ಕಳೆದರೂ ಕಾಮಗಾರಿ ಮುಗಿಸಲು ಆಗಿಲ್ಲ ಎಂದಾದರೆ ಗುತ್ತಿಗೆದಾರರು ಏನು ಮಾಡುತ್ತಿದ್ದಾರೆ. ಕಾಮಗಾರಿ ವಹಿಸಿಕೊಂಡವರಿಗೆ ಶೋಕಾಸ್ ನೋಟೀಸ್ ಮಾಡುವಂತೆ ತಿಳಿಸಿದರು. ಸಿಡಿಪಿಒ ಅವರು ಮಾತನಾಡಿ, ಅಂಗನವಾಡಿಯಲ್ಲೂ ಹೆಣ್ಣು ಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಕ್ಕೆ ಸೂಚನೆ ಇದೆ. ನಮ್ಮಲ್ಲಿ 367 ಅಂಗನವಾಡಿ ಕೇಂದ್ರಗಳಲ್ಲಿ ಹೆಣ್ಣು, ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯವಿಲ್ಲ. ಹೊಸ ಕಟ್ಟಡ ರಚನೆ ಸಂದರ್ಭ ಪ್ರತ್ಯೇಕ ಶೌಚಾಲಯಕ್ಕೂ ಆದ್ಯತೆ ನೀಡಲಾಗಿದೆ ಎಂದರು. ನಮ್ಮ ಕಚೇರಿಗೆ ನಿವೇಶನ ಮಂಜೂರಾಗಿದೆ. ಅದು ತುಂಬಾ ದೂರ ಆಗುತ್ತಿದೆ. ನಮಗೆ ತಾಲೂಕು ಆಡಳಿತ ಸೌಧದ ಬಳಿಯೇ ನಿವೇಶನ ನೀಡುವಂತೆಯೂ ಮನವಿ ಮಾಡಿದರು.

ಸ್ತ್ರೀಶಕ್ತಿ ಗುಂಪುಗಳಿಗೆ ಶಕ್ತಿ ನೀಡಿ:
ಸ್ತ್ರೀಶಕ್ತಿ ಗುಂಪುಗಳಿಗೆ ಶಕ್ತಿ ನೀಡಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಬೇಕು. ದೊಡ್ಡ ಉದ್ದಿಮೆದಾರರೂ ಸೀಶಕ್ತಿ ಯೋಜನೆಯ ಉತ್ಪನ್ನಗಳ ಖರೀದಿಗೆ ಮುಂದೆ ಬರುತ್ತಿದ್ದಾರೆ. ಅವರಿಗೆ ಉತ್ಪನ್ನಗಳ ಮಾರ್ಕೆಟ್‌ಗೆ ಬೇಕಾದ ವ್ಯವಸ್ಥೆ ಮಾಡಿಸಬೇಕೆಂದು ಸಹಾಯಕ ಕಮಿಷನರ್ ಅವರು ಹೇಳಿದರು. ಮೊಟ್ಟೆ ಬೆಲೆ ಏರಿಕೆಯಾಗಿರುವ ಕುರಿತು ಸಿಡಿಪಿಒ ಪ್ರಸ್ತಾಪಿಸಿದಾಗ ಏರಿಕೆಯಾಗಿರುವ ಮೊಟ್ಟೆ ಬೆಲೆಗೆ ಪಂಚಾಯತ್ ಮಟ್ಟದಲ್ಲಿ ನಿರ್ಣಯ ಮಾಡಿಸಿಕೊಡಿಸಿ ಎಂದು ಸಹಾಯಕ ಕಮಿಷನರ್ ಹೇಳಿದರು. ಅಂಗನವಾಡಿ ವಠಾರದಲ್ಲಿ ಪೌಷ್ಟಿಕ ತೋಟ ಮಾಡಿ ಮಾದರಿಯಾಗಿರಬೇಕೆಂದು ಸಹಾಯಕ ಕಮೀಷನರ್ ಹೇಳಿದರು.


ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಕಡಬ ತಹಶೀಲ್ದಾರ್ ಪ್ರಭಾಕರ ಕಜೂರೆ, ಸಿಡಿಪಿಒ ಮಂಗಳಕಾಲೆ, ಪುತ್ತೂರು ತಾ.ಪಂ ಕಾರ್ಯನಿರ್ವಾಹಕ ಅಽಕಾರಿ ನವೀನ್ ಭಂಡಾರಿ ಹೆಚ್, ಕಡಬ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್, ಮಹಿಳಾ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಜಯಶ್ರೀ, ಉಪ್ಪಿನಂಗಡಿ ಪೊಲೀಸ್ ಠಾಣೆಯ ಸುಜಾತಾ, ಸುಳ್ಯ ಪೊಲೀಸ್ ಠಾಣೆಯ ಎ.ಎಸ್.ಐ ಶಿವರಾಮ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಸಮಾಜ ಕಲ್ಯಾಣ ಇಲಾಖೆಯ ಮೇನೇಜರ್ ಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಶಸ್‌ಮಂಜುನಾಥ್, ಶಿಕ್ಷಣ ಸಂಪನ್ಮೂಲ ಕೇಂದ್ರದ ರತ್ನಾಕುಮಾರಿ, ಸಮನ್ವಯ ಸಮಿತಿ ಸದಸ್ಯೆ ನಯನಾ ರೈ ಸಹಿತ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನೆ ಇಲಾಖೆಯ ಮೇಲ್ವಿಚಾರಕಿಯರು ವಿವಿಧ ಮಾಹಿತಿ ನೀಡಿದರು.

ಕಾನೂನು ಉಲ್ಲಂಘಿಸಿ ದತ್ತು ಸ್ವೀಕಾರ -ಎಫ್ಐಆರ್ ದಾಖಲಿಸಲು ಎಸಿಯವರ ಸೂಚನೆ
ಕಾನೂನು ಉಲ್ಲಂಘಿಸಿ ಮಗುವಿನ ದತ್ತು ಸ್ವೀಕಾರ ಮಾಡಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸಮನ್ವಯಾಧಿಕಾರಿ ವಝೀರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ದೂರು ನೀಡಿ ಅವರಿಗೆ ಎಚ್ಚರಿಕೆ ನೀಡಿರುವ ಕುರಿತು ಪ್ರಸ್ತಾಪಿಸಲಾಯಿತು. ಸಹಾಯಕ ಕಮಿಷನರ್ ಅವರು ಈ ಬಗ್ಗೆ ಎಫ್ಐಆರ್ ಮಾಡಿ ಎಂದು ಸೂಚಿಸಿದರು. ವಝೀರ್ ಅವರು ಮಾತನಾಡಿ ಪೋಕ್ಸೋ ಪ್ರಕರಣ 7 ಇದೆ ಎಂದರು. ಸಹಾಯಕ ಕಮಿಷನರ್ ಅವರು 7 ತಿಂಗಳೊಳಗೆ 7 ಪೋಕ್ಸೋ ಪ್ರಕರಣ ದಾಖಲಾಗಬಾರದಾಗಿತ್ತು. ಈ ಕುರಿತು ಮಕ್ಕಳಿಗೆ ಶಾಲೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಪೊಲೀಸ್ ಇಲಾಖೆ ಸಹಿತಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೋಡೆಲ್ ಅಧಿಕಾರಿಗಳನ್ನಾಗಿ ಮಾಡಿ ಅವರಿಂದ ಪ್ರತಿ ಮೂರು ಶಾಲೆಗೆ ಪೋಕ್ಸೋ ಕಾಯ್ದೆ, ಗುಡ್ ಟಚ್, ಬ್ಯಾಡ್ ಟಚ್ ಕುರಿತು ಅರಿವು ಮೂಡಿಸಬೇಕೆಂದ ಅವರು ಪ್ರತಿ ಶಾಲೆಯಲ್ಲೂ ದೂರು ಪೆಟ್ಟಿಗೆ ಅಳವಡಿಸುವಂತೆ ಸೂಚಿಸಿದರು.

LEAVE A REPLY

Please enter your comment!
Please enter your name here