ಕಡಬ: ವಿಸ್ತರಿತ ಅರಣ್ಯ ಜಮೀನಿನೊಳಗಡೆ ಸೇರಿಕೊಂಡಿರುವ ಕೃಷಿ ಜಮೀನನ್ನು ಕೈಬಿಟ್ಟು ಅರಣ್ಯ ಹಾಗೂ ಕಂದಾಯ ಜಮೀನನ್ನು ಪ್ರತ್ಯೇಕಿಸಿ ಆಯಾ ಇಲಾಖೆಯ ಹೆಸರಿಗೆ ಪಹಣಿ ಪತ್ರ ತಯಾರಿಸಬೇಕು ಅನಾದಿ ಕಾಲದಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಕೃಷಿಕರಿಗೆ ನ್ಯಾಯ ಒದಗಿಸಿಕೊಡಬೇಕು, ತಪ್ಪಿದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕಡಬ ತಾಲೂಕು ಶ್ರಮಿಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಪಿ,ಮೋಹನ್ ಎಚ್ಚರಿಸಿದರು.
ಅವರು ಬುಧವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಹಿಂದೆ ರಾಜ್ಯ ಸರಕಾರ ಕಂದಾಯ ಭೂಮಿಯ ಹೆಚ್ಚುವರಿ ಜಮೀನನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎನ್ನುವ ಕಾನೂನು ಜಾರಿ ಮಾಡಿದಾಗ ಅಧಿಕಾರಿಗಳು ಸ್ಥಳಕ್ಕೆ ತೆರಳದೆ ಎಲ್ಲೋ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ಅಥವಾ ಗ್ರಾಮ ಲೆಕ್ಕಿಗರ ಕಛೇರಿಯಲ್ಲಿ ಕುಳಿತು ಕಣ್ಣಂದಾಜಿಗೆ ನಕ್ಷೆ ಮಾಡಿ ಇಡೀ ರಾಜ್ಯದ ಸರ್ವೆಯನ್ನು ಕೇವಲ ನಾಲ್ಕು ವರ್ಷದಲ್ಲಿ ಮುಗಿಸಿ ಸಮಸ್ಯೆ ತಂದೊಡ್ಡಿದಾರೆ. ಇವರ ಸರ್ವೆಯಲ್ಲಿ ವಾಸ್ತವವಾಗಿ ಕಳೆದ ಐವತ್ತು ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ಕೃಷಿಕರಿಗೆ ತೊಂದರೆಯಾಗಿದೆ. ಕೃಷಿಕರ ಜಾಗವೂ ಅರಣ್ಯ ಪ್ರದೇಶದ ಒಳಗೆ ಸೇರುವಂತಾಗಿ ಅವರಿಗೆ ಅಕ್ರಮ ಸಕ್ರಮದಲ್ಲಿ ಭೂಮಿ ಮಂಜೂರಾತಿ ಅದರೂ ಅಧಿಕಾರಿಗಳು ಹಕ್ಕು ಪತ್ರ ನೀಡುತ್ತಿಲ್ಲ. ಯಾರೋ ಅಧಿಕಾರಿಗಳು ಮಾಡಿದ ತಪ್ಪಿಗೆ ಕೃಷಿಕರು ಶಿಕ್ಷೆ ಅನುಭವಿಸುವಂತಾಗಿದೆ. ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಮನ್ವಯತೆಯಿಂದ ಈ ಸಮಸ್ಯೆ ಪರಿಹರಿಸಬೇಕಾಗಿದೆ. ಆದರೆ ಅಧಿಕಾರಿಗಳಿಗಾಗಲೀ ಸರಕಾರಕ್ಕಾಗಲೀ ಇಚ್ಚಾಶಕ್ತಿ ಇಲ್ಲ ಎಂದು ಆರೋಪಿಸಿದರು.
ಕಡಬ ತಾಲೂಕಿನ ಐತ್ತೂರು ಗ್ರಾಮದ ಸರ್ವೆ ನಂಬ್ರ 153/1 ರಲ್ಲಿ 2836 ಎಕ್ರೆ ಸರಕಾರಿ ಜಮೀನಿದ್ದು ಈ ಪೈಕಿ 256.85 ಎಕ್ರೆ ಜಮೀನನ್ನು 1995 ರಲ್ಲಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ಇಂದಿನವರೆಗೂ ಗಡಿ ಗುರುತಾಗಲೀ, ಸರ್ವೇಯಾಗಲೀ, ಅರಣ್ಯ ಇಲಾಖೆಯ ಹೆಸರಿಗೆ ಪಹಣಿಯಾಗಲೀ ಆಗಿರುವುದಿಲ್ಲ, ಸುಮಾರು 50 ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ 42 ಕುಟುಂಬಗಳು ಇದೇ ಸರ್ವೇ ನಂಬರಿನಲ್ಲಿದ್ದು 2007ರಲ್ಲಿ ಅರಣ್ಯ ಇಲಾಖಾಧಿಕಾರಿಗಳು ಮಾಡಿದ ಸರ್ವೇಯಂತೆ ಸರಕಾರಿ ಜಮೀನಿನಲ್ಲಿ ಕೃಷಿ ಕೃತಾವಳಿಗಳನ್ನು ಮಾಡಿಕೊಂಡಿರುವ ಅನೇಕ ಕೃಷಿಕರ ಜಮೀನಿನಲ್ಲಿ ಕೆಲವು ಭಾಗಗಳು ಅರಣ್ಯ ಇಲಾಖಾ ಗಡಿಯೊಳಗೆ ಬರುತ್ತಿದ್ದು ಕೆಲವು ಕೃಷಿಕರ ಸಂಪೂರ್ಣ ಜಮೀನು ಅರಣ್ಯ ಗಡಿಯೊಳಗೆ ಸೇರಿಕೊಂಡಿದೆ. ಕಳೆದ 50 ವರ್ಷಗಳಿಂದ ಇದನ್ನೇ ಆಶ್ರಯಿಸಿ ಬದುಕು ಸಾಗಿಸುತ್ತಿರುವ ಕುಟುಂಬಗಳು ಈಗ ಅತಂತ್ರವಾಗಿವೆ. ಇಂತಹ ಸಾವಿರಾರು ಕುಟುಂಬಗಳು ಕಡಬ, ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕುಗಳಲ್ಲಿ ಇವೆ. ಸರಕಾರ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಆದೇಶ ನೀಡಿ ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಇರುವವರ ಜಮೀನನ್ನು ಹೊರತುಪಡಿಸಿ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಸೇರಿದ ಜಮೀನನ್ನು ಅಳತೆ ಮತ್ತು ಗಡಿ ಗುರುತು ಮಾಡಿ ಆಯಾ ಇಲಾಖೆಯ ಹೆಸರಿಗೆ ಪಹಣಿ ಪತ್ರವನ್ನು ತಯಾರಿಸಬೇಕು. ಸರಕಾರಿ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬರುತ್ತಿರುವ ರೈತರಿಗೆ ಅರಣ್ಯ ಇಲಾಖೆಯಿಂದ ನಿರಾಪೇಕ್ಷಣಾ ಪತ್ರ ನೀಡಿ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ದೊರಕುವಂತೆ ಮಾಡಬೇಕು, ಇದರೊಟ್ಟಿಗೆ ಪ್ಲಾಟಿಂಗ್ ಸಮಸ್ಯೆಗಳನ್ನೂ ಪರಿಹರಿಸಬೇಕು ಎಂದು ಅಗ್ರಹಿಸಿದ ಕೆ.ಪಿ,ಮೋಹನ್ ಈ ಬಗ್ಗೆ ಕಡಬದಲ್ಲಿ ಸಂತ್ರಸ್ತ ಕೃಷಿಕರ ಸಭೆಯನ್ನು ಜುಲೈ 23ರಂದು ನಡೆಸಿ ಮುಂದಿನ ಹೋರಟದ ರೂಪುರೇಷೆಗಳನ್ನು ಮಾಡಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಕಾಂಗ್ರೆಸ್ ಮುಖಂಡ ರೋಯಿ ಅಬ್ರಹಾಂ ಮಾತನಾಡಿ ಕಡಬ ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯಲ್ಲಿ ಭ್ರಷ್ಟಾಚಾರ ನಿಲ್ಲುತ್ತಿಲ್ಲ, ಬ್ರೋಕರ್‌ಗಳ ಹಾವಳಿ ಮಿತಿಮೀರಿದೆ, ಒಂದು ಭೂಪರಿವರ್ತನೆಗೆ ಆಗುವ ವೆಚ್ಚ ಕೇವಲ 250 ರೂ ಆದರೆ ಬ್ರೋಕರ್‌ಗಳ ಮುಖಾಂತರ ಆರು ಸಾವಿರ ರೂ ಕೇಳಿ ಹಗಲು ದರೋಡೆ ಮಾಡಲಾಗುತ್ತದೆ. ಪ್ಲಾಟಿಂಗ್‌ಗೆ ಒಂದು ಲಕ್ಷ ಕೇಳುತ್ತಾರೆ ಈ ನಾನು ಬಗ್ಗೆ ದಾಖಲೆ ಕೊಡಲು ಸಿದ್ದ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರಮಿಕ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘದ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಶಂಕರ್ ಬಿಳಿನೆಲೆ, ರೈತ ಮುಖಂಡ ವಿಕ್ಟರ್ ಮಾರ್ಟಿಸ್, ಜಿ.ಪಂ.ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಉಪಸ್ಥಿತರಿದ್ದರು.