ಉಪ್ಪಿನಂಗಡಿ: ಕೇರಳ ರಾಜ್ಯ ಲಾಟರಿಯ ಒಂದು ಕೋಟಿ ರೂಪಾಯಿ ಬಹುಮಾನ ಟೈಲರ್ ಒಬ್ಬರಿಗೆ ಒಲಿದಿದೆ ಎಂಬ ಸುಳ್ಳು ಸುದ್ದಿಯು ಹರಡಿ ಅಭಿನಂದನೆಯ ಕರೆ, ಸಹಾಯ ಯಾಚನೆಯ ಕರೆಗೆ ಟೈಲರ್ ಹೈರಾಣರಾದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಇಲ್ಲಿನ ರಥಬೀದಿಯಲ್ಲಿರುವ ಗಣಪತಿ ಮಠದ ಬಳಿಯಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿರುವ ಕೂಸಪ್ಪ ಎಂಬವರಿಗೆ ಕೇರಳ ರಾಜ್ಯ ಲಾಟರಿಯಲ್ಲಿ ಒಂದು ಕೋಟಿ ರೂಪಾಯಿ ಒಲಿದಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಮಾತ್ರವಲ್ಲದೆ ಅದರಲ್ಲಿ 30 ಲಕ್ಷ ರೂಪಾಯಿ ತೆರಿಗೆ ನೆಲೆಯಲ್ಲಿ ಕಡಿತಗೊಂಡು 70 ಲಕ್ಷ ರೂಪಾಯಿ ಅವರ ಖಾತೆಗೆ ಜಮೆಯಾಗಿದೆ ಎಂಬ ವಿವರವೂ ಕೂಡಾ ಸೇರಿಸಲ್ಪಟ್ಟು ಬಾಯಿಯಿಂದ ಬಾಯಿಗೆ ಇದು ಸುದ್ದಿ ವಿಸ್ತಾರಗೊಳ್ಳುತ್ತಾ ಹರಡುತ್ತಿತ್ತು. ಈ ಬಗ್ಗೆ ಸತ್ಯಾಂಶ ಶೋಧಿಸಿ ಪತ್ರಿಕಾ ವರದಿ ಮಾಡುವ ಸಲುವಾಗಿ ಮಾಧ್ಯಮ ಮಂದಿ ಅವರನ್ನು ಭೇಟಿಯಾದಾಗಲೇ ಸಿಹಿ ಸುದ್ದಿಯೊಂದರ ಹಿಂದೆ ಇರುವ ಕಹಿ ಅನುಭವ ಅನಾವರಣಗೊಂಡಿತ್ತು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕೂಸಪ್ಪ ಅವರು, ತನಗೆ ಯಾವ ಲಾಟರಿಯೂ ಲಭಿಸಿಲ್ಲ. ಒಂದು ಕೋಟಿ ರೂ. ಲಾಟರಿ ಬಹುಮಾನ ಒಲಿದು ಬಂದಿದೆ ಎಂಬ ಸುದ್ದಿ ಹೇಗೆ ಸೃಷ್ಠಿಯಾಯಿತು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ಆ ಸುದ್ದಿ ಸೃಷ್ಠಿಯಾದ ದಿನದಿಂದ ನನಗೆ ಒಂದಿನಿತೂ ನೆಮ್ಮದಿಯಂತೂ ಇಲ್ಲ. ಕ್ಷಣ ಕ್ಷಣಕ್ಕೂ ಪೋನ್ ಮೂಲಕ ಬರುತ್ತಿರುವ ಅಭಿನಂದನೆಯ ಕರೆಗಳಿಗೆ ಉತ್ತರಿಸುವುದೇ ಸಾಕು ಸಾಕಾಗುತ್ತಿದೆ. ಸಾಲದಕ್ಕೆ ಲಾಟರಿ ಬಹುಮಾನದ ಹಣದಲ್ಲಿ ಒಂದಷ್ಟು ಆರ್ಥಿಕ ಸಹಾಯ ಮಾಡಬಹುದೇ ಎಂದು ಸಹಾಯ ಯಾಚಿಸಿ ಬರುವ ಕರೆಗಳಿಗೆ ನಾನು ಲಾಟರಿ ಬಹುಮಾನ ನನಗೆ ಬಂದಿಲ್ಲ ಎಂಬ ಸತ್ಯ ಹೇಳಿದರೂ ನಾನು ಸುಳ್ಳು ಹೇಳುತ್ತಿದ್ದೇನೆ ಎಂದೇ ಭಾವಿಸುವ ಮಂದಿ ಬೇಸರದಿಂದ ಪೋನ್ ಕರೆ ಕಡಿತಗೊಳಿಸುವ ಘಟನಾವಳಿಗಳು ನನ್ನನ್ನು ಹೈರಾಣಗೊಳಿಸಿದೆ ಎನ್ನುತ್ತಾರೆ.
ಯಾಕೆ ಮತ್ತು ಹೇಗೆ ಈ ಸುಳ್ಳು ಸುದ್ದಿ ಸೃಷ್ಠಿಯಾಯಿತು. ಮತ್ತು ಈ ಸುದ್ದಿ ವ್ಯಾಪಕವಾಗಿ ಯಾಕಾಗಿ ಹರಡಿತು ಎನ್ನುವುದೇ ನನಗರ್ಥವಾಗುತ್ತಿಲ್ಲ. ಒಟ್ಟಾರೆ ಲಾಟರಿ ಬಹುಮಾನ ಬಂದಿದ್ದರೆ ಪರವಾಗಿರಲಿಲ್ಲ. ಒಂದು ನಯಾಪೈಸೆ ಬಾರದೇ ಅಭಿನಂದನೆಗಳನ್ನು ಸ್ವೀಕರಿಸುವಾಗ ಆಗುವ ಮುಜುಗರ, ಸಹಾಯ ಯಾಚಿಸಿ ಬರುವ ಕರೆಗಳಿಗೆ ಅಸಹಾಯಕತೆಯಿಂದ ನಿರಾಕರಿಸಬೇಕಾದ ದುಸ್ಥಿತಿ ಯಾವ ಶತ್ರುವಿಗೂ ಬೇಡ ಎಂದು ಅವರು ಮುಗ್ದತೆಯಿಂದ ನುಡಿಯುತ್ತಾರೆ.