ಬಡಗನ್ನೂರು: ಮುಂಗಾರು ಪ್ರಾರಂಭಗೊಂಡಂತೆ ರೈತರು ಭತ್ತದ ಬೇಸಾಯ ಮಾಡುವಲ್ಲಿ ಚುರುಕಾಗಿದ್ದಾರೆ. ಸಾಮಾನ್ಯವಾಗಿ ತುಳು ತಿಂಗಳು ಅಟಿ ಬರುವ ಮೊದಲು ಭತ್ತದ ಬೀಜ ಬಿತ್ತನೆ ಮಾಡಬೇಕು ಎಂಬುದು ಹಿರಿಯರ ಮಾತು. ಅಟಿ ತಿಂಗಳಲ್ಲಿ ಯಾವುದೇ ಬೀಜ ಬಿತ್ತನೆ ಮಾಡುವುದು ಸೂಕ್ತ ಅಲ್ಲ ಎಂಬುದು ಪೂರ್ವಜರ ನಂಬಿಕೆಯಾಗಿತ್ತು. ಆದರೆ ಈಗ ತದ್ವಿರುದ್ಧವಾಗಿದೆ. ಕಾರಣ ಮಳೆಯನ್ನೇ ನಂಬಿ ವ್ಯವಸಾಯ ಮಾಡುವಲ್ಲಿ ಸಕಾಲದಲ್ಲಿ ಮಳೆ ಬರದೆ ಇರುವುದರಿಂದ ರೈತರು ಸರಿಯಾದ ಸಮಯದಲ್ಲಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಇದರಿಂದ ಅಟಿ ತಿಂಗಳಲ್ಲಿಯೂ ಬಿತ್ತನೆ ಮಾಡಲಾಗುತ್ತಿದೆ.
ಹಿಂದಿನ ಕಾಲದಲ್ಲಿ ಸಾಮಾನ್ಯವಾಗಿ ಎತ್ತುಗಳ ಮೂಲಕ ಗದ್ದೆ ಉಳುಮೆ ಮಾಡುತ್ತಿದ್ದರು. ಅಂದು ವರ್ಷದಲ್ಲಿ ಎರಡು, ಮೂರು (ಕೊಳಕ್ಯೆ, ಏನೇಲ್ ಸುಗ್ಗಿ) ಭತ್ತದ ಬೇಸಾಯ ಮಾಡಲಾಗುತ್ತಿದ್ದರು. ಇಂದು ಗದ್ದೆ ಎಲ್ಲಾ ಅಡಿಕೆ ತೋಟವನ್ನಾಗಿ ಮಾಡಲಾಗಿದೆ ಉಳಿದಂತೆ ಮಜಲು ಗದ್ದೆಗಳಲ್ಲಿ ವರ್ಷದಲ್ಲಿ ಒಂದೇ ಬೆಳೆ ಮಾಡುವುದರಿಂದ ಇಡೀ ವರ್ಷ ಎತ್ತು ಸಾಕಣೆ ಕಷ್ಟ ಮತ್ತು ದುಬಾರಿ ಅಗಿದೆ. ಇಂದು ಯಾಂತ್ರೀಕರಣ ಯುಗವಾಗಿದುದರಿಂದ ಉಳುಮೆಯಿಂದ ಹಿಡಿದು ಕಟ್ಟಾವು ಮಾಡುವವರೆಗಿನ ಕೃಷಿ ಯಂತ್ರಗಳ ಆವಿಷ್ಕಾರಗೊಂಡಿದೆ.
ಗೆದ್ದೆ ಉಳುಮೆಗಾಗಿ ಟಿಲ್ಲರ್, ಟ್ರಾಕ್ಟರ್, ಭತ್ತದ ಕಟ್ಟಾವು ಯಂತ್ರ, ಕಲೆ ತೆಗೆಯುವ ಯಂತ್ರ ಬಳಸುದರಿಂದ ಕೂಲಿ ಹಾಳುಗಳ ಅಭಾವವೂ ತಪ್ಪಿದಂತಾಗಿದೆ. ಮತ್ತು ಅಲ್ಪ ಅವಧಿಯಲ್ಲಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯ ಸಾಧ್ಯವಾಗುತ್ತಿದೆ. ಟ್ರಾಕ್ಟರಿಗೆ ಗಂಟೆ ಒಂದಕ್ಕೆ 1100 ಹಾಗೂ ಕಟ್ಟಾವು ಸಂದರ್ಭದಲ್ಲಿ ಕಟ್ಟಾವು ಯಂತ್ರಕ್ಕೆ ಗಂಟೆಯೊಂದಕ್ಕೆ 2,500 ರಿಂದ 3 ಸಾವಿರ ರೂ. ಬಾಡಿಗೆ ಕೇಳುತ್ತಾರೆ.
ಅಕ್ಕಿ ದರ ಗಗನಕೇರಿದಂತೆ ಪಾಳುಬಿದ್ದ ಹಲವಾರು ಗದ್ದೆಗಳನ್ನು ಬೇಸಾಯ ಮಾಡಲು ಆರಂಭಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ ಶ್ರೀ ಕ್ಷೇತ್ರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಈ ವರ್ಷ ಸುಮಾರು 26 ಎಕ್ರೆ ಪಾಳುಬಿದ್ದ ಗದ್ದೆ ಬೇಸಾಯ ಮಾಡುವುದರೊಂದಿಗೆ ಒಟ್ಟು. 600 ಎಕ್ರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡುವ ಮೂಲಕ ಪೂಜ್ಯ ಕಾವುಂದರ ಕನಸು ನನಸಾಗಿತ್ತಿದೆ.