ಪುತ್ತೂರು: ಪುತ್ತೂರು ರೈಲು ನಿಲ್ದಾಣದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ವಸತಿ ನಿಲಯದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ತೆರಳಲು ಮುಂದಾಗಿದ್ದ ನಾಲ್ವರು ಅಪ್ರಾಪ್ತ ವಯಸಿನ ವಿದ್ಯಾರ್ಥಿಗಳು ಮತ್ತೆ ಹಾಸ್ಟೇಲ್ ಸೇರುವಂತಾದ ಘಟನೆ ಜು.13ರಂದು ನಡೆದಿದೆ.
ಇಂದು ಮದ್ಯಾಹ್ನದ ವೇಳೆ ಹಾಸ್ಟೆಲ್ ನಿಂದ ತಪ್ಪಿಸಿಕೊಂಡು ನಾಲ್ವರು ವಿದ್ಯಾರ್ಥಿಗಳು ರೈಲು ನಿಲ್ದಾಣಕ್ಕೆ ಬಂದಿದ್ದಾರೆ. ಟಿಕೆಟ್ ಕೌಂಟರ್ ಬಳಿ ಬಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಹೊರಡುವ ರೈಲಿನ ಬಗ್ಗೆ ಮಾಹಿತಿ ಪಡೆದು ಟಿಕೆಟ್ ನೀಡುವಂತೆ ಕೇಳಿದ್ದಾರೆ. ನಾಲ್ವರು ಬಾಲಕರ ವರ್ತನೆಯನ್ನು ಗಮನಿಸಿ ಸಂಶಯಗೊಂಡ ಪಕ್ಕದಲ್ಲಿದ್ದ ರೈಲ್ವೆ ಸಿಬ್ಬಂದಿ ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಸತ್ಯ ವಿಷಯ ಹೊರ ಬಂದಿದೆ. ನಾವು ಮಠದಲ್ಲಿ ಶಿಕ್ಷಣ ಪಡೆಯುತ್ತಿದ್ದು , ಅಲ್ಲಿನ ಮುಖ್ಯಸ್ಥರ ದೌರ್ಜನ್ಯದಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಬಾಲಕರು ಹೇಳಿದ್ದಾರೆ. ಸಂಶಯಗೊಂಡ ರೈಲ್ವೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಬಾಲಕರನ್ನು ವಿಚಾರಣೆ ನಡೆಸಿ ಅವರ ಮನವೊಲಿಸಿ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸದ್ಯ ನಾಲ್ವರು ಪೋಷಕರ ಜೊತೆಯಲ್ಲಿದ್ದು ಪ್ರಕರಣ ಸುಖಾಂತ್ಯಗೊಂಡಿದೆ. ಪುತ್ತೂರು ರೈಲು ನಿಲ್ದಾಣದ ಸಿನಿಯರ್ ಟೆಕ್ ಸಿಬ್ಬಂದಿಗಳಾದ ಕುಮಾರ್, ವಾಸಿಮ್ ಸಯ್ಯದ್, ವಸಂತ್, ಮಾಲಶ್ರೀ ಅವರ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.