ಕೊಯಿಲ ಪಶುವೈದ್ಯಕೀಯ ಕಾಲೇಜಿಗೆ ರೂ.140ಕೋಟಿ ಅನುದಾನ -ಅಶೋಕ್ ಕುಮಾರ್ ರೈ
ಪುತ್ತೂರು: ಕೊಯಿಲದಲ್ಲಿರುವ ಪಶುವೈದ್ಯಕೀಯ ಕಾಲೇಜಿಗೆ ರೂ.140ಕೋಟಿ ಅನುದಾನ ಮಂಜೂರಾಗಿದೆ. ಇದರ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಶಾಸಕರ ಕಚೇರಿ ಸಭಾಂಗಣದಲ್ಲಿ ಜು.13ರಂದು ನಡೆದ ದ.ಕ ಜಿಲ್ಲಾ ಪಂಚಾಯತ್ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು. ಕೊಯಿಲ ಪಶುವೈದ್ಯ ಕಾಲೇಜಿಗೆ 29 ವೈದ್ಯರನ್ನು ನೇಮಕ ಮಾಡಲು ಸರಕಾರದಿಂದ ಅನುಮತಿ ನೀಡಲಾಗಿದೆ. ಸುಮಾರು 129 ಮಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ಅಲ್ಲಿ 178 ಮಂದಿಗೆ ಉದ್ಯೋಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ಪ್ರಾಣಿಗಳ ಹಬ್‌ನ್ನು ಮಾಡಬಹುದು. ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಬರಲಿದ್ದಾರೆ. ಅಭಿವೃದ್ಧಿಯ ಜೊತೆಗೆ ಜನತೆಗೆ ಸೌಲಭ್ಯಗಳು ದೊರೆಯಲಿದೆ ಎಂದರು.
ಹೈನುಗಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸವಲತ್ತು ವಿತರಣೆಯಾಗುತ್ತಿದೆ. ಹೈನುಗಾರರೂ ಆರ್ಥಿಕವಾಗಿ ಸದೃಢವಾಗಬೇಕು. ಸರಕಾರ ನೀಡುವ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ವೈದ್ಯರು ಹೈನುಗಾರರ ಸಮಸ್ಯೆಗಳಿಗೆ ತುರ್ತು ಸ್ಪಂಧನೆ ನೀಡಿದಾಗ ಇಲಾಖೆ ಸೇವೆಗಳು ತಳಮಟ್ಟಕ್ಕೆ ತಲುಪಲಿದೆ. ಇಲಾಖೆಯಿಂದ ನೀಡಿದ ಮನವಿಯನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕರು ತಿಳಿಸಿದರು.
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಧರ್ಮಪಾಲ ಕೆ ಮಾತನಾಡಿ, ಹಾಲು ಉತ್ಪಾದಕರ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ.ಜಾತಿ, ಪ.ಪಂಗಡದ ತಲಾ ಎರಡು ಫಲಾನಿಭವಿಗಳಿಗೆ ಮಿಶ್ರತಳಿ ಹಸು ಘಟಕ, ಅಮೃತ ಸಿರಿ ಯೋಜನೆಯಲ್ಲಿ ಹನ್ನೊಂದು ಮಂದಿ ಕರು, ಅನುಗ್ರಹ ಯೋಜನೆಯಲ್ಲಿ 9 ಮಂದಿಗೆ ತಲಾ ಹತ್ತು ಸಾವಿರ, ಹಾಗೂ ತಲಾ 5 ಕೆಜಿಯಂತೆ 80ಮಂದಿಗೆ ಮೇವಿನ ಬೀಜ ವಿತರಿಸಲಾಗುತ್ತಿದೆ ಎಂದರು.
ಇಲಾಖೆಯಿಂದ ಶಾಸಕರಿಗೆ ಮನವಿ;
ಗುತ್ತಿಗೆ ಆಧಾರದಲ್ಲಿ ವೈದ್ಯರ ನೇಮಕವಾಗುತ್ತಿದ್ದು ಅದರಲ್ಲಿ ನರಿಮೊಗರು, ಕೊಳ್ತಿಗೆಯಲ್ಲಿ ಖಾಲಿಯಿರುವ ಹುದ್ದೆಗೆ ನೇಮಕ ಮಾಡಲು ಶಿಪಾರಸ್ಸು ಮಾಡುವುದು. ಪುತ್ತೂರಿಗೂ ಪಾಲಿಕ್ಲಿನಿಕ್ ಆಸ್ಪತೆಯ ಬೇಡಿಕೆಯನ್ನು ಸರಕಾರಕ್ಕೆ ಸಲ್ಲಿಸಬೇಕು. ಕಚೇರಿಯ ಬೊಲೇರೂ ವಾಹನ ತುಂಬಾ ಹಳೇಯದಾಗಿದ್ದು ಹೊಸ ವಾಹನ ಒದಗಿಸುವಂತೆ ಸರಕಾರಕ್ಕೆ ಶಿಪಾರಸ್ಸು ಮಾಡುವಂತೆ ಇಲಾಖೆಯಿಂದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಸಲ್ಲಿಸಿದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ.ಧರ್ಮಪಾಲ ಕೆ. ಸ್ವಾಗತಿಸಿದರು. ಜಾನುವಾರು ಅಧಿಕಾರಿ ನಾಗಶಯನ ವಂದಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ ವೈ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಪಶುವೈದ್ಯಕೀಯ ಪರೀಕ್ಷಕ ವೀರಪ್ಪ, ದ್ವಿತೀಯ ದರ್ಜೆ ಸಹಾಯಕ ಪುಷ್ಪಲತಾ, ಕಿರಿಯ ಪಶುವೈದ್ಯಾಧಿಕಾರಿ ಪುಂಡರಿಕಾಕ್ಷ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.