ರಾಮಕುಂಜ: ಕೇರಳ ಶೈಲಿಯ ಚೆಂಡೆ ವಾದನ ಸಿಂಗಾರಿ ಮೇಳದ ಚಾರ್ವಾಕ ಶ್ರೀ ಕಪಿಲೇಶ್ವರ ಕಲಾ ಸಮಿತಿಯ ಕೊಯಿಲ ಹಾಗೂ ಕುದ್ಮಾರು ಗ್ರಾಮಗಳ ಯುವಕರನ್ನೊಳಗೊಂಡ ನೂತನ ಕಲಾವಿದರ ರಂಗ ಪ್ರವೇಶ ಕಾರ್ಯಕ್ರಮ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಜು.13ರಂದು ಸಂಜೆ ನಡೆಯಿತು.
ದೇವರ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಸಭಾ ವೇದಿಕೆಯ ಮುಂಭಾಗದಲ್ಲಿ ದೀಪ ಪ್ರಜ್ವಲನೆಯೊಂದಿಗೆ ಹಿರಿಯರ ಆಶೀರ್ವಾದ ಪಡೆದ ಸುಮಾರು 20 ನೂತನ ಯುವ ಕಲಾವಿದರು ತಮ್ಮ ಚೊಚ್ಚಲ ಪ್ರದರ್ಶನವನ್ನು ಯಶಸ್ವಿಯಾಗಿ ನೆರವೇರಿಸುವ ಮೂಲಕ ರಂಗ ಪ್ರವೇಶ ಮಾಡಿದರು. ಸಿಂಗಾರಿ ಮೇಳದ ಗುರು ಕೇರಳದ ಚಂದ್ರನ್ ಅವರ ಮಾರ್ಗದರ್ಶನದಲ್ಲಿ ನಿತಿನ್ ಕೆ.ಪಿ ಅವರ ತರಬೇತಿಯಲ್ಲಿ ಐದು ತಿಂಗಳ ಕಾಲ ರಾತ್ರಿ ಹಗಲು ಅಭ್ಯಾಸ ಮಾಡಿ ಪರಿಪೂರ್ಣತೆಯನ್ನು ಪಡೆದ ಯುವಕರು ಯಶಸ್ವೀ ಪ್ರದರ್ಶನ ನೀಡಿದರು. ಒಂದು ಗಂಟೆಯ ಕಾಲ ಪ್ರದರ್ಶನ ನೀಡಿದ ನೂತನ ಕಲಾವಿದರು ವಿವಿಧ ಪ್ರಾಕಾರಗಳ ನೃತ್ಯಗಳ ಮೂಲಕ ಚಕ್ರ ತಾಳಗಳೊಂದಿಗೆ ಚೆಂಡೆ ವಾದನ ನಡೆಸಿ ಪ್ರೇಕ್ಷರನ್ನು ರಂಜಿಸಿ ಸೈ ಎನಿಸಿಕೊಂಡರು. ಇದೇ ವೇದಿಕೆಯಲ್ಲಿ ಚಾರ್ವಾಕ ತಂಡದವರೂ ಮುಕ್ಕಾಲು ಗಂಟೆ ಪ್ರದರ್ಶನ ನೀಡಿದರು.
ಸಭಾ ಕಾರ್ಯಕ್ರಮ:
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಗಣರಾಜ್ ಕುಂಬ್ಳೆ ಅವರು ಮಾತನಾಡಿ, ದೇವರಿಗೆ ಅತ್ಯಂತ ಪ್ರಿಯವಾದ ವಾದ್ಯ ಚೆಂಡೆ. ಅದರ ನಾದ ಕಿವಿಗೆ ಗಾಢವಾದ ಅನುಭವ ನೀಡುತ್ತದೆ. ಇಲ್ಲಿನ ಯುವಕರು ಕಠಿಣ ಶ್ರಮ ಹಾಕಿ ಪರಿಪೂರ್ಣತೆಯನ್ನು ಪಡೆದು ಶಾಸ್ತ್ರೀಯವಾಗಿ ಹಾವ ಭಾವಗಳ ನರ್ತನದೊಂದಿಗೆ ಪ್ರದರ್ಶನ ಮಾಡಿರುವುದು ಅತ್ಯಂತ ಸ್ಪೂರ್ತಿದಾಯಕ ಎಂದರು. ಚಾರ್ವಾಕ ಶ್ರೀ ಕಪಿಲೇಶ್ವರ ಕಲಾ ಸಮಿತಿಯ ವ್ಯವಸ್ಥಾಪಕ ಶಿವಪ್ರಸಾದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಸ್.ಆರ್.ಕೆ ಲ್ಯಾಡರ‍್ಸ್ ನ ಮಾಲಕ ಕೇಶವ ಅಮೈ, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಶೇಖರ ಕೆದ್ದೊಟ್ಟೆ, ಸಿಂಗಾರಿ ಮೇಳದ ಗುರು ಕೇರಳದ ಚಂದ್ರನ್, ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನಿಕಟಪೂರ್ವಾಧ್ಯಕ್ಷ ಯಧುಶ್ರೀ ಆನೆಗುಂಡಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ನೂತನ ಕಲಾವಿದರ ತಂಡದ ನಾಯಕ ನಿತಿನ್ ಕೆ.ಪಿ ಶುಭ ಹಾರೈಸಿದರು. ಹರ್ಷಿತ್ ಪಲ್ಲಡ್ಕ ಹಾಗೂ ಶ್ರವನ್ ಬಂಬಿಲ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಚಂದ್ರನ್ ಹಾಗೂ ನಿತಿನ್ ಕೆ.ಪಿ ಅವರನ್ನು ಸನ್ಮಾನಿಸಲಾಯಿತು. ಹರ್ಷಿತ್ ಸಬಳೂರು ಸನ್ಮಾನ ಪತ್ರ ವಾಚಿಸಿದರು. ತಂಡದ ಸದಸ್ಯ ಸುಧೀಶ್ ಪಟ್ಟೆ ಸ್ವಾಗತಿಸಿದರು. ಭವಿತರಾಜ್ ಪಟ್ಟೆ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು.