ಗುರಿ, ಚಿಂತನೆಗಳು ಮುಂದಿನ ಹಾದಿಗೆ ದಾರಿದೀಪವಾಗಿರಲಿ -ನೋವೆಲಿನ್ ಡಿ’ಸೋಜ
ಪುತ್ತೂರು: ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ “ಜೀವನದಲ್ಲಿ ನೈತಿಕತೆಯನ್ನು ರೂಪಿಸುವ ಮೌಲ್ಯಗಳು” ಎಂಬ ಕುರಿತು ಕಾರ್ಯಾಗಾರವು ಜು.13 ರಂದು ಕಾಲೆಜಿನ ಸಭಾಂಗಣದಲ್ಲಿ ಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಂತ ಫಿಲೋಮಿನಾ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕಿ ನೋವೆಲಿನ್ ಡಿ’ಸೋಜರವರು ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಜೊತೆಗೆ ಹೋರಾಟ ಮನೋಭಾವವನ್ನು ಹೊಂದಿರುವವರಾಗಿರಬೇಕು. ಕಲಿಕೆಯ ಜೊತೆಗೆ ಓದುವ ಅಭ್ಯಾಸವನ್ನು ಕರಗತ ಮಾಡಿಕೊಂಡಲ್ಲಿ ಜ್ಞಾನ ವೃದ್ಧಿಯ ಜೊತೆಗೆ ಮಾನಸಿಕ ನೆಮ್ಮದಿಯೂ ಪ್ರಾಪ್ತವಾಗುವುದು. ನಮ್ಮ ಗುರಿ, ಚಿಂತನೆಗಳು ಮುಂದಿನ ಹಾದಿಗೆ ದಾರಿದೀಪವಾಗಿರಬೇಕು ಎಂದ ಅವರು ನಿಮ್ಮ ಆಯ್ಕೆಯ ವಿಷಯದಲ್ಲಿ ಪ್ರೌಢಿಮೆ ತುಂಬಿಕೊಂಡಿದ್ದು ಸದಾ ಹೊಸತನದ ಆವಿಷ್ಕಾರಗಳು ಮನಸ್ಸಿನಲ್ಲಿರಬೇಕು. ಸಾಧಿಸುವ ಛಲ ಇದ್ದಲ್ಲಿ ಅಡೆತಡೆಗಳು ಒಂದು ಕಾರಣವಾಗಿರಬಾರದು. ಸಾಧಿಸುವ ಹುಮ್ಮಸ್ಸು ಮನಸ್ಸಿನಲ್ಸಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಮಾತನಾಡಿ, ಪ್ರತಿ ಕ್ಷಣವೂ ಅತ್ಯಮೂಲ್ಯ. ಅದನ್ನು ಅನುಭವಿಸಿಕೊಂಡು ಬದುಕುವ ಮೂಲಕ ವಿದ್ಯಾರ್ಥಿ ಜೀವನ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಉದಾಸೀನ ಪ್ರವೃತ್ತಿಯಿಂದಾಗಿ ಇವತ್ತು ನಾವು ಕೊನೆಯ ಸ್ಥಾನಕ್ಕೆ ತೃಪ್ತಿಪಡಬೇಕಾದ ಅನಿವಾರ್ಯತೆ ಬಂದಿದೆ. ವಿದ್ಯಾರ್ಥಿ ಹಂತದ ಈ ಜೀವನ ಅತ್ಯಂತ ಹೆಚ್ಚು ಜವಾಬ್ದಾರಿಯುತವಾದದ್ದು. ಎಚ್ಚರಿಕೆಯಿಂದ ದಾರಿಯನ್ನು ಕ್ರಮಿಸಬೇಕಾಗಿದೆ ಎಂದರು.
ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಕಸ್ತೂರಿ ಸ್ವಾಗತಿಸಿ, ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ಮುಕುಂದ ಕೃಷ್ಣ ವಂದಿಸಿದರು.