ವಿಟ್ಲ: ನೇತ್ರಾವತಿ ನದಿ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಜಲಾವೃತಗೊಂಡ ಪಾಣೆಮಂಗಳೂರು ಆಲಡ್ಕ ಸಹಿತ ಅನೇಕ ಕಡೆಗಳಿಗೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಲಡ್ಕದಲ್ಲಿ ನೆರೆ ನುಗ್ಗಿದ ಮನೆಗಳ ಸದಸ್ಯರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು 6 ಮನೆಗಳಿಗೆ ನೀರು ನುಗ್ಗುವ ಬೀತಿ ಇರುವುದರಿಂದ ಅವರನ್ನು ಕೂಡ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಪಾಣೆಮಂಗಳೂರು ಶಾರದ ಹೈಸ್ಕೂಲ್ ನಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ.
ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರಕ್ಕೆ ಯಾರು ಹೋಗಬಾರದು ಮತ್ತು ನೀರಿಗೆ ಇಳಿಯಬಾರದು ಎಂದು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿದ್ದೀಕ್ ನಂದಾವರ , ತಹಶಿಲ್ದಾರ್ ಅರ್ಚನಾ ಭಟ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮತ್ತಷ್ಟು ಏರಿಕೆಯಾಗುತ್ತಿರುವ ನೀರಿನ ಮಟ್ಟ:
ನೇತ್ರಾವತಿ ನದಿ ನೀರಿನ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಾ ಹೋಗುತ್ತಿದ್ದು, ಈಗ 7.9 ಮೀ ತಲುಪಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ತಗ್ಗು ಪ್ರದೇಶಗಳು ಜಲಾವೃತವಾಗುವ ಲಕ್ಷಣಗಳು ಕಂಡುಬರುತ್ತಿದೆ.