5 ತಿಂಗಳಲ್ಲೇ ನಿರ್ಮಾಣಗೊಂಡಿದೆ 3 ಅಂತಸ್ಥಿನ ಸುಸಜ್ಜಿತ ಕಟ್ಟಡ
ಪುತ್ತೂರು: ಸುಮಾರು 64 ವರ್ಷಗಳ ಇತಿಹಾಸವಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬೆಳಿಯೂರುಕಟ್ಟೆಯಲ್ಲಿರುವ ಕೇಂದ್ರ ಕಚೇರಿಯ ನೂತನ ಸುಸಜ್ಜಿತ ಕಟ್ಟಡ ಉದ್ಘಾಟನೆಯು ಜು.20ರಂದು ನಡೆಯಲಿದೆ.
1960ರಲ್ಲಿ ಪ್ರಾರಂಭಗೊಂಡಿರುವ ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಬೆಳಿಯೂರುಕಟ್ಟೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ತನ್ನ ಸದಸ್ಯರಿಗೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಉಜ್ರುಪಾದೆಯಲ್ಲಿ ಶಾಖೆಯನ್ನು ಪ್ರಾರಂಭಿಸಿ ಕಳೆದ 42 ವರ್ಷಗಳಿಂದ ಸೇವೆ ನೀಡುತ್ತಾ ಬರುತ್ತಿರುವುದಲ್ಲದೆ 2022ರಲ್ಲಿ ಶಾಖೆಗೂ ಸುಸಜ್ಜಿತವಾದ ಕಟ್ಟಡ ನಿರ್ಮಾಣಗೊಂಡ ಅದರಲ್ಲಿ ಸೇವೆ ನೀಡುತ್ತಾ ಬಂದಿದೆ. ಶಾಖಾ ಕಟ್ಟಡದ ಉದ್ಘಾಟನೆಯ ಸಮಯದಲ್ಲಿ ಸಂಘದ ಕೇಂದ್ರ ಕಚೇರಿಗೂ ಶೀಘ್ರದಲ್ಲೇ ಸುಸಜ್ಜಿತ ಕಟ್ಟಡ ನಿರ್ಮಿಸುವುದಾಗಿ ತಿಳಿಸಿದ್ದರು. ಕಳೆದ ಮಹಾಸಭೆಯಲ್ಲಿ ಮುಂದಿನ ವರ್ಷದಲ್ಲಿ ಕೇಂದ್ರ ಕಚೇರಿಗೆ ಕಟ್ಟಡ ನಿರ್ಮಿಸಿ ಅದರಲ್ಲಿರುವ ಸಭಾಂಗಣದಲ್ಲಿಯೇ ಮುಂದಿನ ವರ್ಷದ ಮಹಾಸಭೆಯನ್ನು ನಡೆಸುವುದಾಗಿ ಸದಸ್ಯರಿಗೆ ನೀಡಿದ ಭರವಸೆಯನ್ನು ಸತೀಶ್ ಗೌಡ ಒಳಗುಡ್ಡೆಯವರ ಅಧ್ಯಕ್ಷತೆಯ ಈಗಿನ ಆಡಳಿತ ಮಂಡಳಿ ಪೂರೈಸಿದ್ದು ಅದೇ ಭವ್ಯ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಯ ಸಂಭ್ರಮದಲ್ಲಿದೆ.
ಜಾಗ ಖರೀದಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ:
ಸಹಕಾರಿ ಸಂಘದ ಪ್ರಸ್ತುತ ಇರುವ ಕಟ್ಟಡವು ತೀರಾ ಹಳೆಯ ಕಟ್ಟಡವಾಗಿದೆ. ಒಟ್ಟು 20 ಸೆಂಟ್ಸ್ ಜಾಗದಲ್ಲಿರುವ ಈ ಕಟ್ಟಡವು 1988ರಲ್ಲಿ ನಿರ್ಮಾಣಗೊಂಡಿದೆ. ಅಂತರಾಜ್ಯ ಹೆದ್ದಾರಿ ಬದಿಯಲ್ಲಿರುವ ಹಳೆಯ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ರಸ್ತೆ ಮಾರ್ಜಿನ್ ಅಡ್ಡಿಯಾಗುತ್ತಿದೆ. ಪಾರ್ಕಿಂಗ್ ಸೇರಿದಂತೆ ಸಕಲ ಸೌಲಭ್ಯಗಳೊಂದಿಗೆ ಅಲ್ಲಿಯೇ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಕಷ್ಟು ಸ್ಥಳಾವಕಾಶ ಕೊರತೆಯಿರುವ ಹಿನ್ನೆಲೆಯಲ್ಲಿ ಸಂಘದ ಮಹಾಸಭೆಯಲ್ಲಿ ಅನುಮೋದನೆ ಪಡೆದುಕೊಂಡು ಜಾಗ ಖರೀದಿಸಿ, ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಈಗಿರುವ ಸಂಘದ ಕಚೇಯಿಂದ ಸುಮಾರು 100 ಮೀಟರ್ ದೂರದಲ್ಲಿ ಮುಖ್ಯರಸ್ತೆಯ ಬದಿಯಲ್ಲಿಯೇ 40 ಸೆಂಟ್ಸ್ ಜಾಗ ಖರೀದಿಸಿ ಅದರಲ್ಲಿ ನೂತನ ಕಟ್ಟಡ ನಿರ್ಮಾಣಗೊಂಡು ಉದ್ಘಾಟನೆಗೊಳ್ಳುತ್ತಿದೆ.
5 ತಿಂಗಳಲ್ಲೇ 3 ಅಂತಸ್ಥಿತ ಸುಸಜ್ಜಿತ ಕಟ್ಟಡ ನಿರ್ಮಾಣ:
ಸಂಘದ ಕೇಂದ್ರ ಕಚೇರಿ ನಿರ್ಮಾಣಕ್ಕೆ 2024ರ ಫೆ.15ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಇದಾದ ಬಳಿಕ ಕೇವಲ 5 ತಿಂಗಳಲ್ಲಿ ಮೂರು ಅಂತಸ್ಥಿನ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ನೆಲ ಮಹಡಿಯಲ್ಲಿ ಪಡಿತರ ಸಾಮಾಗ್ರಿ ಮಾರಾಟ ವಿಭಾಗ, ಗೋದಾಮು, ಪ್ರಥಮ ಮಹಡಿಯಲ್ಲಿ ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗ, ಆಡಳತ ಮಂಡಳಿ ಸಭಾಂಗಣ ಹಾಗೂ ಮೂರನೇ ಮಹಡಿಯಲ್ಲಿ ವಿಶಾಲವಾದ ಸಭಾಂಗಣ ಸೇರಿದಂತೆ ಮೂರು ಅಂತಸ್ಥಿನ ಕಟ್ಟಡ ನಿರ್ಮಾಣಗೊಂಡಿದೆ. ಒಟ್ಟು ಸುಮಾರು ರೂ.1.75ಕೋಟಿ ವೆಚ್ಚದಲ್ಲಿ ಜಾಗ ಖರೀದಿ ಹಾಗೂ ಸುಸಜ್ಜಿತ ಕಟ್ಟಡ ನಿರ್ಮಾಣ ಕಾಮಗಾರಿಗಳು ನೆರವೇರಿಸಲಾಗಿದೆ.
ಸಂಘದ ಸಾಧನೆಗಳು:
ಸಂಘವು 2023-24ಸೇ ಸಾಲಿನಲ್ಲಿ ಒಟ್ಟು ರೂ.123.68ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ. ರೂ.28.31 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ರೂ.8.24ಕೋಟಿ ಠೇವಣಾತಿ, ರೂ.19.66ಕೋಟಿ ಸದಸ್ಯರ ಹೊರಬಾಕಿ ಸಾಲ, ರೂ.16.66ಕೋಟಿ ಜಿಲ್ಲಾ ಕೇಂದ್ರ ಬ್ಯಾಂಕ್ನಲ್ಲಿ ಸಾಲ, 2050 ಸದಸ್ಯರಿಂದ ರೂ.2.25ಕೋಟಿ ಸದಸ್ಯರ ಪಾಲು ಬಂಡವಾಳ, ರೂ.6.37ಕೋಟಿ ಬ್ಯಾಂಕ್ನಲ್ಲಿ ಧನ ವಿನಿಯೋಗ ಮಾಡಿದೆ. ಆರ್ಥಿಕ ವರ್ಷದಲ್ಲಿ 63.14ಲಕ್ಷ ಲಾಭಗಳಿಸಿದೆ. ಸಾಲ ವಸೂಲಾತಿಯಲ್ಲಿ ಸಂಘವು ಶೇ.99.14ಸಾಧನೆ ಮಾಡಿದೆ. ಆಡಿಟ್ ವರ್ಗಿಕರಣದಲ್ಲಿ ಕಳೆದ 13 ವರ್ಷಗಳಿಂದ ನಿರಂತರವಾಗಿ ‘ಎ’ ಶ್ರೇಣಿಯನ್ನು ಪಡೆದುಕೊಂಡಿದೆ.
ಪ್ರಸ್ತುತ ಸಂಘದ ಅಧ್ಯಕ್ಷರಾಗಿ ವಿ.ಸತೀಶ್ ಗೌಡ ಒಳಗುಡ್ಡೆ, ಉಪಾಧ್ಯಕ್ಷರಾಗಿ ಅಬ್ದುಲ್ ಹಕೀಂ, ನಿರ್ದೇಶಕರಾಗಿ ಪ್ರಕಾಶ್ಚಂದ್ರ ಎ.ಎಂ., ಪ್ರವೀಣಚಂದ್ರ ಆಳ್ವ ಎ.ಎಂ., ಕೆ.ಚಂದಪ್ಪ ಪೂಜಾರಿ, ಅಂಬ್ರೋಸ್ ಡಿ’ಸೋಜ, ನವೀನ ಕರ್ಕೇರ, ಸುರೇಶ್ ಎನ್., ಪ್ರಮೋದ್ ಬಿ., ಸೀತಾರಾಮ ಗೌಡ ಬಿ.ಕೆ., ಶ್ರೀಮತಿ ವಿನಯ, ಶ್ರೀಮತಿ ಶುಕವಾಣಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೀತಾರಾಮ ಗೌಡ ಕೆ. ಹಾಗೂ ವಲಯ ಮೇಲ್ವಿಚಾರಕರಾಗಿ ವಸಂತ್ ಎಸ್. ಕಾರ್ಯನಿರ್ವಹಿಸುತ್ತಿದ್ದಾರೆ.
ನೂತನ ಕೇಂದ್ರ ಕಚೇರಿ ಕಟ್ಟಡವನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷರೂ ಆಗಿರುವ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ವಿ.ಸತೀಶ್ ಗೌಡ ಒಳಗುಡ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಆಡಳಿತ ಕಚೇರಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಸಭಾ ಭವನ ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನೂತನ ಗೋದಾಮು ಕೊಡಿ ಉದ್ಘಾಟಿಸಲಿದ್ದಾರೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಎಸ್.ಬಿ ಜಯರಾಮ ರೈ, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಎಂ ಪ್ರವೀಣ್ಚಂದ್ರ ಆಳ್ವ ಮುಂಡೇಲು, ಬಲ್ನಾಡು ಗ್ರಾ.ಪಂ ಅಧ್ಯಕ್ಷ ಪರಮೇಶ್ವರಿ ಬಿ.ಆರ್., ನಗರ ಸಭಾ ಸದಸ್ಯೆ ಪೂರ್ಣಿಮಾ ಚೆನ್ನಪ್ಪ ಗೌಡ, ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಹಾಗೂ ಪುತ್ತೂರು ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನೃತ್ಯ ವೈಭವ, ನಾಟಕ ಪ್ರದರ್ಶನ:
ನೂತನ ಕೇಂದ್ರ ಕಚೇರಿ ಕಟ್ಟಡದ ಉದ್ಘಾಟನೆಯ ಅಂಗವಾಗಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬಂದಿಗಳ ಪ್ರಾಯೋಜಕತ್ವದಲ್ಲಿ ಸಂಜೆ 7 ಗಂಟೆಯಿಂದ ಎನ್.ವಿ ಡ್ಯಾನ್ಸ್ ಸ್ಟುಡಿಯೋ ಪುತ್ತೂರು ಇವರಿಂದ ನೃತ್ಯ ವೈಭವ ಹಾಗೂ ರಾತ್ರಿ 8 ಗಂಟೆಯಿಂದ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ ‘ಕಥೆ ಎಡ್ಡೆಂಡು’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಸತೀಶ್ ಗೌಡ, ಉಪಾಧ್ಯಕ್ಷ ಅಬ್ದುಲ್ ಹಕೀಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ತಿಳಿಸಿದ್ದಾರೆ.