ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಸಾಲ್ಮರ ಕೊಟೇಚಾ ಹಾಲ್ ಬಳಿಯ ಗೂಡಂಗಡಿ ಪ್ರತಿ ಮಳೆಯಲ್ಲೂ ಕೃತಕ ನೆರೆಯಿಂದಾಗಿ ಪದೇ ಪದೇ ಜಲಾವೃತಗೊಳ್ಳುತ್ತಿದೆ. ಆದರೆ ಈ ಗೂಡಂಗಡಿಯ ಬಡಪಾಯಿ ಜೀವದ ಗೋಳನ್ನು ಯಾರು ಕೇಳೋರಿಲ್ಲವೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಸಾಲ್ಮರ ಸೋಮನಾಥ ಎಂಬವರಿಗೆ ಸೇರಿದ ಗೂಡಂಗಡಿಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆಯಿಂದಾಗಿ ಅಂಗಡಿಯನ್ನು ಸದಾ ಮುಚ್ಚಬೇಕಾಗುವ ಪರಿಸ್ಥಿತಿ ಬಂದಿದೆ. ಅಂಗಡಿಯ ಮುಂದಿನ ಚರಂಡಿಯಿಂದ ಮಳೆ ನೀರು ಮೋರಿಯಿಂದ ಹೋಗದೆ ಚರಂಡಿ ನೀರು ಮೇಲೇರಿ ಅಂಗಡಿಯೊಳಗೆ ನುಗ್ಗುತ್ತಿದೆ. ಈ ಕುರಿತು ಆಗೊಮ್ಮೆ ಈಗೊಮ್ಮೆ ನಗರಸಭೆಯಿಂದ ಬಂದು ಕೃತಕ ನೆರೆಗೆ ತಾತ್ಕಾಲಿಕ ತಡೆ ನೀಡುತ್ತಾರೆ ಹೊರತು ಅದು ಶಾಶ್ವತವಲ್ಲ. ಯಾಕೆಂದರೆ ಮತ್ತೆ ಮಳೆ ಜೋರಾಗಿ ಸುರಿದ ತಕ್ಷಣ ಕೃತಕ ನೆರೆ ಉದ್ಭವಿಸಿ ಅಂಗಡಿಯೊಳಗೆ ನೀರು ನುಗ್ಗುತ್ತದೆ. ಈ ಬಾರಿ ಮಳೆಯಲ್ಲಿ ಸುಮಾರು 15 ಭಾರಿ ಕೃತಕ ನೆರಯಿಂದಾಗಿ ಅಂಗಡಿಯೊಳಗೆ ನೀರು ನುಗ್ಗಿ ಸೊತ್ತುಗಳು ನಾಶವಾಗಿದೆ. ಇದೀಗ ಜು.19 ರಂದು ಮತ್ತೆ ಅಂಗಡಿಗೆ ನೀರು ನುಗ್ಗಿದೆ.